ಬೆಂಗಳೂರು, ಅ.13: ಮಹಿಳೆಯರ ಮೇಲೆ ದಿನೇ ದಿನೇ ನಡೆಯುತ್ತಿರುವ ಅತ್ಯಾಚಾರ, ದೌರ್ಜನ್ಯ, ಶೋಷಣೆ, ನಗರದಲ್ಲಿ ನಡೆಯುತ್ತಿರುವ ನಿರಂತರ ಸರಗಳ್ಳತನ ವಿರೋಧಿಸಿ ಕನ್ನಡ ಚಳವಳಿ ವಾಟಾಳ್ ನಾಗರಾಜ್ ಬುರ್ಖಾ ಧರಿಸಿ ವಿನೂತನವಾಗಿ ಪ್ರತಿಭಟನೆ ನಡೆಸಿದರು.
ಮಹಿಳೆಯರಿಗೆ ಆತ್ಮಸ್ಥೈರ್ಯ ತುಂಬುವ ನಿಟ್ಟಿನಲ್ಲಿ ಕೈಯಲ್ಲಿ ಖಡ್ಗ ಹಿಡಿದು ಟೌನ್‌ಹಾಲ್‌ನಿಂದ ಕೆಂಪೇಗೌಡ ಬಸ್ ನಿಲ್ದಾಣದ ವರೆಗೆ ನೂರಾರು ಮಹಿಳೆಯರೊಂದಿಗೆ ಮೆರವಣಿಗೆ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮಹಿಳೆಯರ ಮೇಲೆ ನಡೆಯುತ್ತಿರುವ ಅತ್ಯಾಚಾರ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿರುವುದು ಆತಂಕದ ವಿಷಯವಾಗಿದೆ. ಒಬ್ಬೊಂಟಿಯಾಗಿ ಮಹಿಳೆಯರು ಓಡಾಡದ ಪರಿಸ್ಥಿತಿ ನಿರ್ಮಾಣವಾಗಿದೆ. ಬೆಂಗಳೂರು ನಗರ ಮಹಿಳೆಯರಿಗೆ ಸುರಕ್ಷಿತವಲ್ಲ ಎಂಬುದು ಪದೇ ಪದೇ ಸಾಬೀತಾಗುತ್ತಿದೆ ಎಂದರು.
ಬೆಳಗ್ಗೆ ಸರಗಳ್ಳತನ ಸಂಜೆ ಅತ್ಯಾಚಾರ ಉದ್ಯೋಗಸ್ಥ ಮಹಿಳೆಯರು ಭಯ-ಭೀತಿಯಲ್ಲಿ ಕೆಲಸ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಮಹಿಳೆಯರ ರಕ್ಷಣೆಗೆ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಅವರು ಈ ಸಂದರ್ಭದಲ್ಲಿ ಒತ್ತಾಯಿಸಿದರು.
ಇತ್ತೀಚೆಗೆ ಮಧ್ಯಪ್ರದೇಶದ ಮಹಿಳೆಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣ ಅತ್ಯಂತ ಖಂಡನೀಯವಾಗಿದ್ದು, ಪ್ರಕರಣದ ಆರೋಪಿಗಳಿಗೆ ಕ್ರೂರವಾದ ಶಿಕ್ಷೆಯಾಗಬೇಕೆಂದು ಅವರು ಹೇಳಿದರು. ಸರಗಳ್ಳತನ ತಡೆಯಲು ಪೊಲೀಸರು ಕಠಿಣ ಕ್ರಮ ಕೈಗೊಳ್ಳಬೇಕು. ಮಹಿಳೆಯರು ಮುಕ್ತವಾಗಿ ಓಡಾಡುವಂತಹ ವಾತಾವರಣ ನಿರ್ಮಾಣವಾಗಬೇಕು ಎಂದು ತಿಳಿಸಿದರು.
