ಬೆಂಗಳೂರು, ಅ.11-ವಿಶ್ವ ಸಂಸ್ಕೃತಿಗೆ ಬಹುದೊಡ್ಡ ಕೊಡುಗೆ ನೀಡಿರುವ ವಚನ ಸಂಸ್ಕೃತಿಯ ಬಗ್ಗೆ ಆಳವಾದ ಸಂಶೋಧನೆಯಾಗಬೇಕು ಎಂದು ಹೇಳಿದ ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಡಾ.ಶಿವರಾಜ್ ಪಾಟೀಲ್ ಅವರು ರೋಗಗ್ರಸ್ಥ ಸಮಾಜಕ್ಕೆ ವಚನಗಳು ಸಂಜೀವಿನಿ ಇದ್ದ ಹಾಗೆ ಎಂದು ಅಭಿಪ್ರಾಯಪಟ್ಟರು. ನಿವೃತ್ತ ಐಎಎಸ್ ಅಧಿಕಾರಿ ಡಾ.ಸಿ.ಸೋಮಶೇಖರ್ ಅವರ ವಚನಗಳಲ್ಲಿ ಸಾಮಾಜಿಕ ಚಿಂತನೆ ಕುರಿತ ಕೃತಿಯ ದ್ವಿತೀಯ ಆವೃತ್ತಿ ಬಿಡುಗಡೆ ಮಾಡಿ ಮಾತನಾಡಿದ ಅವರು, ವಚನ ಸಾಹಿತ್ಯ ವಿಶ್ವ ಸಂಸ್ಕೃತಿಗೆ ಅಪಾರ ಕೊಡುಗೆ ನೀಡಿದೆ.
ವಚನಗಳಲ್ಲಿನ ಸಾರ ಸಾರ್ವಕಾಲಿಕ ಹಾಗೂ ಕಾಲಾತೀತವಾದದ್ದು. ಇಂತಹ ವಚನಗಳ ಬಗ್ಗೆ ಕೇವಲ ಹೇಳಿಕೆ, ಭಾಷಣ, ಪುಸ್ತಕಗಳು ರಚನೆಯಾದರೆ ಸಾಲದು ಆಳವಾದ ಸಂಶೋಧನೆಯಾಗಬೇಕು. ವಚನಗಳ ಅಂಶಗಳನ್ನು ಎಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ವಚನ ಸಾಹಿತ್ಯದ ಪರಿಕಲ್ಪನೆಯನ್ನು ವಿಶೇಷವಾಗಿ ಅಧಿಕಾರಿಗಳು ಅಳವಡಿಸಿಕೊಂಡರೆ ಆಡಳಿತಕ್ಕೆ ಒಳ್ಳೆಯದಾಗಿರುತ್ತದೆ ಎಂದರು. ಪ್ರಚಾರಕ್ಕಾಗಿ, ಪ್ರಸಿದ್ಧಿ ಪಡೆಯಲು ವಚನಗಳು ರಚನೆಯಾಗಿಲ್ಲ. ಅಂದಿನ ಸಮಾಜದಲ್ಲಿ ನೈತಿಕತೆಗಳ ಬಗ್ಗೆ ಶರಣರ ಅನುಭವ ಮೂಸೆಯಿಂದ ವಚನ ಸಾಹಿತ್ಯ ಹೊರಬಂದಿದೆ ಎಂದು ಪ್ರತಿಪಾದಿಸಿದರು. ಇಂದಿನ ರೋಗಗ್ರಸ್ಥ ಸಮಾಜಕ್ಕೆ ವಚನ ಸಾಹಿತ್ಯ ಸಂಜೀವಿನಿ ಇದ್ದ ಹಾಗೆ ಇದನ್ನು ಅಳವಡಿಸಿಕೊಂಡರೆ ಸಮಾಜ ಆರೋಗ್ಯಯುತವಾಗಿರುತ್ತದೆ. ವಚನ ಸಾಹಿತ್ಯ ಬೇರೆ ಬೇರೆ ಭಾಷೆಗಳಿಗೆ ಭಾಷಾಂತರವಾಗಿ ಹೆಚ್ಚು ವಿಸ್ತಾರಗೊಳ್ಳಬೇಕು ಎಂದುಹೇಳಿದರು.
ಡಾ.ಸಿ.ಸೋಮಶೇಖರ್ ಅವರು ದಕ್ಷ ಅಧಿಕಾರಿ, ಉತ್ತಮ ಸಾಹಿತಿ ಹಾಗೂ ವಾಗ್ಮಿಯಾಗಲು ಕಾರಣ ವಚನ ಸಾಹಿತ್ಯದ ಪ್ರಭಾವ ಅವರ ಮೇಲೆ ಬೀರಿರುವುದೇ ಆಗಿದೆ ಎಂದರು.
ಜ್ಞಾನ ಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ.ಚಂದ್ರಶೇಖರ ಕಂಬಾರ ಮಾತನಾಡಿ, 12ನೇ ಶತಮಾನದ ಕಲ್ಯಾಣ ರಾಜ್ಯದ ಮಾನವೀಯತೆಯ ಕನಸು ಪ್ರಸ್ತುತ ಭ್ರಷ್ಟ ರಾಜಕಾರಣ ವ್ಯವಸ್ಥೆಯಲ್ಲಿ ಕೇವಲ ಕನಸಾಗಿಯೇ ಉಳಿಯಲಿದೆ ಎಂದು ವಿಷಾದಿಸಿದರು. ವಚನಗಳು ಬದುಕಬೇಕೆಂಬ ನಿಟ್ಟಿನಲ್ಲಿ ರಚನೆಯಾದವು. ಸಂಗಮ ಸಾಹಿತ್ಯಕ್ಕಿಂತ ವಿಶಿಷ್ಟವಾದುದು. ವಚನದ ಮೂಲಕ ಹೊಸ ಸಮಾಜವನ್ನು ನಿರ್ಮಾಣ ಮಾಡಲಾಗಿತ್ತು ಎಂದು ತಿಳಿಸಿದರು. ಸಾಹಿತಿ ಎಸ್.ಜಿ.ಸಿದ್ದರಾಮಯ್ಯ, ಕವಿ-ಕೃತಿ ಕುರಿತು ಮಾತನಾಡಿ, ವಚನ ಧರ್ಮದ ಹಲವು ಮಗ್ಗಲುಗಳ ಮೌಲಿಕ ಕೃತಿಯಾಗಿದೆ. ವಚನಗಳ ಬಹುಮುಖ ರಚನೆ, ವಿನ್ಯಾಸದ ಬಗ್ಗೆ ವಿದ್ವಾಂಸರ ಬರಹ ಅವಲೋಕಿಸಿ ಜಾತ್ಯಾತೀತ ಪರಿಕಲ್ಪನೆಯಲ್ಲಿ ಕೃತಿ ರಚಿಸಲಾಗಿದೆ. ವಚನ ಧರ್ಮದ ಆಶಯಗಳನ್ನು ಪ್ರಾಮಾಣೀಕರಿಸಿದೆ. ಅಂದಿನ ಕಾಲದ ಶರಣರು ಪಂಚಭೂತಗಳಿಗೆ ವಂಚನೆ ಮಾಡದಂತೆ ಬದುಕು ನಡೆಸಿದರು. ಸ್ತ್ರೀ ಸಮಾನತೆ, ಅಸಮತೋಲನ, ಆರ್ಥಿಕ ನೀತಿ ಸಂಹಿತೆ ಎಲ್ಲವೂ ಇಂದಿಗೂ ಆದರ್ಶವಾಗಿದೆ ಎಂದರು. ಸಮಾರಂಭದಲ್ಲಿ ಶ್ರೀ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಮುಖಂಡರಾದ ಎಂ.ವಿ.ರಾಜಶೇಖರನ್, ವೀರಣ್ಣ ಮತ್ತಿಕಟ್ಟಿ, ಟಿ.ಎನ್.ಸೀತಾರಾಮ್, ಮಂಜುನಾಥ್ ಕುನ್ನೂರ್ ಮತ್ತಿತರರು ಭಾಗವಹಿಸಿದ್ದರು.