ಸುಳ್ಯ, ಅ.11: ಐವರು ದರೋಡೆಕಾರರ ತಂಡವೊಂದು ಬಾಗಿಲು ಒಡೆದು ಮನೆಯೊಳಗೆ ಪ್ರವೇಶಿಸಿ ದಂಪತಿಗಳನ್ನು ಕಟ್ಟಿ ಹಾಕಿ ಸುಮಾರು ಎಂಟು ಲಕ್ಷಕ್ಕೂ ಹೆಚ್ಚು ಮೌಲ್ಯದ ನಗ, ನಗದು ಲೂಟಿಮಾಡಿ ಪರಾರಿಯಾದ ಘಟನೆ ಶುಕ್ರವಾರ ಸುಳ್ಯದ ಕಾಂತಮಂಗಲದಲ್ಲಿ ನಡೆದಿದೆ. ಸುಳ್ಯದ ಪ್ರಸಿದ್ಧ ಉದ್ಯಮಿ ಆಗ್ರೋ ರಾಮಚಂದ್ರ ಅವರ ಕಾಂತಮಂಗಲದ ಮನೆಯಲ್ಲಿ ಶುಕ್ರವಾರ ತಡರಾತ್ರಿ ದರೋಡೆ ನಡೆದಿದ್ದು, 15 ಪವನ್ ಚಿನ್ನಾಭರಣ ಹಾಗೂ ಸುಮಾರು 65 ಸಾವಿರ ನಗದನ್ನು ಕಳ್ಳರು ದೋಚಿ ಪರಾರಿಯಾಗಿದ್ದಾರೆ.
ಶುಕ್ರವಾರ ರಾತ್ರಿ ಸುಮಾರು 2 ಗಂಟೆಗೆ ಈ ಘಟನೆ ನಡೆದಿದ್ದು, ಮನೆಯ ಹಿಂಬಾಗಿಲನ್ನು ಮುರಿದು ಒಳ ನುಗ್ಗಿದ ಐವರು ದರೋಡೆಕಾರರು ಮನೆ ಯವರಿಗೆ ಚೂರಿ ತೋರಿಸಿ, ಬೆದರಿಸಿ ದರೋಡೆ ಮಾಡಿದ್ದಾರೆ. ಬಾಗಿಲು ಒಡೆಯುವ ಶಬ್ದಕ್ಕೆ ಎಚ್ಚರಗೊಂಡು ರಾಮಚಂದ್ರ ಹಿಂದಿನ ಕೋಣೆಗೆ ಬರುವಷ್ಟರಲ್ಲಿ ಕಳ್ಳರು ಒಳನುಗ್ಗಿದ್ದರು.
ಮುಖ ಮುಚ್ಚಿಕೊಂಡಿದ್ದ ಕಳ್ಳರು ರಾಮಚಂದ್ರರಿಗೆ ಚೂರಿ ತೋರಿಸಿ ಬೆದರಿಸಿ ಅವರನ್ನು ಮಂಚಕ್ಕೆ ಕಟ್ಟಿ ಹಾಕಿದ್ದಾರೆ. ಬೊಬ್ಬೆ ಹೊಡೆ ಯದಂತೆ ಅವರ ಬಾಯಿಯನ್ನು ಪ್ಲಾಸ್ಟರ್‌ನಿಂದ ಬಂದ್ ಮಾಡಿದ್ದಾರೆ. ರಾಮಚಂದ್ರ ಅವರ ಪತ್ನಿ ಮಂಜುಳಾ ಅವರನ್ನು ಮಂಚಕ್ಕೆ ಕಟ್ಟಿ ಹಾಕಿದ್ದಾರೆ. ಶಬ್ದ ಕೇಳಿ ಹೊರಗೆ ಬಂದ ಮನೆ ಕೆಲಸದಾಕೆ ಸುನೀತ ಅವರ ತಲೆಗೆ ಹಲ್ಲೆ ನಡೆಸಿ ಅವರನ್ನೂ ಕಟ್ಟಿ ಹಾಕಿದ್ದಾರೆ. ಕಪಾಟಿನ ಕೀಲಿಕೈ ಎಲ್ಲಿದೆ ಎಂದು ಮಂಜುಳಾ ಅವರಲ್ಲಿ ಕೇಳಿ ಪಡೆದು ಕಪಾಟಿನಲ್ಲಿದ್ದ ಚಿನ್ನಾಭರಣ, 65 ಸಾವಿರ ರೂ. ನಗದನ್ನು ದೋಚಿದ್ದಾರೆ.
ಮಂಜುಳಾ ಅವರ ಕತ್ತಿನಲ್ಲಿದ್ದ ಕರಿಮಣಿ ಚಿನ್ನದ ಸರ, ಕಿವಿಯಲ್ಲಿದ್ದ ವಜ್ರದ ಬೆಂಡೋಲೆಯನ್ನೂ ಕಸಿದು ಪರಾರಿಯಾಗಿದ್ದಾರೆ. 8 ಲಕ್ಷ ರೂ. ವೌಲ್ಯದ ಚಿನ್ನಾಭರಣ, 15 ಸಾವಿರ ರೂ. ವೌಲ್ಯದ ಬೆಳ್ಳಿ ಸೇರಿದಂತೆ ಒಟ್ಟು 8 ಲಕ್ಷದ 80 ಸಾವಿರ ರೂ. ವೌಲ್ಯದ ಸೊತ್ತನ್ನು ದರೋಡೆ ಮಾಡಲಾಗಿದೆ.
ಹುಟ್ಟುಹಬ್ಬ ಕಾರ್ಯಕ್ರಮಕ್ಕೆ ತೆರಳಲು ಸಿದ್ಧತೆ:
ರಾಮಚಂದ್ರ ಅವರ ಮನೆಯಲ್ಲಿ ಅವರ ಪತ್ನಿ ಹಾಗೂ ಕೆಲಸ ದಾಕೆ ಮಾತ್ರ ಇದ್ದು, ಇವರ ಮಗ ಬೆಂಗಳೂರಿನಲ್ಲಿ ಉದ್ಯೋಗ ಮಾಡಿಕೊಂಡಿದ್ದಾರೆ. ಶನಿವಾರ ಮಗನ ಪುತ್ರಿಯ ಹುಟ್ಟುಹಬ್ಬವಾಗಿದ್ದು, ಕಾರ್ಯಕ್ರಮಕ್ಕೆ ತೆರಳಲು ಮನೆಯವರು ಸಿದ್ಧತೆ ಮಾಡಿಕೊಂಡಿದ್ದರು. ರಾತ್ರಿ 2 ಗಂಟೆಗೆ ಆಗಮಿಸಿದ ದರೋಡೆಕೋರರ ತಂಡ ಮನೆಯ ದೂರವಾಣಿ ಕೇಬಲ್‌ನ್ನು ಮೊದಲು ತುಂಡರಿಸಿದೆ. ಬಳಿಕ ಒಳ ಪ್ರವೇಶಿಸಿ ಮೂವರನ್ನು ಕಟ್ಟಿ ಹಾಕಿದ್ದು, ಮನೆಯಲ್ಲಿದ್ದ ಮೂರು ಮೊಬೈಲ್‌ಗಳನ್ನು ಒಟ್ಟಿಗೆ ಕೊಂಡೊಯ್ದಿದ್ದರು. ಒಂದನ್ನು ಮನೆಯ ಹತ್ತಿರದ ಪಾಳುಬಾವಿಗೆ ಬಿಸಾಡಿ ಹೋಗಿದ್ದಾರೆ. ಇನ್ನೆರಡನ್ನು ಒಟ್ಟಿಗೆ ಕೊಂಡೊಯ್ದಿದ್ದಾರೆ.
2ರಿಂದ ಮೂರು ಮುಕ್ಕಾಲು ಗಂಟೆಯವರೆಗೆ ಮನೆ ಶೋಧ ನಡೆಸಿ ದೋಚಿದ ಬಳಿಕ ತಂಡ ಪರಾರಿಯಾಗಿದೆ. ಕೆಲಸದಾಕೆ ಸುನೀತ ಅವರ ಕೈಗೆ ಕಟ್ಟಿದ ಹಗ್ಗ ಸಡಿಲಗೊಂಡಿದ್ದು, ಅದನ್ನು ಅವರು ಬಿಚ್ಚಿ ಬಳಿಕ ರಾಮಚಂದ್ರ ಮತ್ತು ಮಂಜುಳಾ ಅವರನ್ನು ಬಂಧಮುಕ್ತಗೊಳಿಸಿದರು.
ಸುನೀತಾ ಅವರ ಮೊಬೈಲ್‌ನ್ನು ಕಳ್ಳರು ಗಮನಿಸದೇ ಇದ್ದು, ಅದರ ಮೂಲಕ ಪೊಲೀಸರಿಗೆ ಘಟನೆಯ ವಿವರ ನೀಡಲಾಗಿದೆ. ತಕ್ಷಣ ಆಗಮಿಸಿದ ಪೊಲೀಸರು ವ್ಯಾಪಕ ಶೋಧಕಾರ್ಯ ನಡೆಸಿದರು. ತಲೆಗೆ ಗಾಯಗೊಂಡ ಕೆಲಸದಾಕೆ ಸುನೀತಾ ಅವರನ್ನು ಸುಳ್ಯ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಜಾಕೆ ಮಾಧವ ಗೌಡ ಮನೆಗೆ ಭೇಟಿ:
ಆಗ್ರೋ ರಾಮ ಚಂದ್ರರ ಮನೆ ದರೋಡೆ ಪ್ರಕರಣವನ್ನು ಸುಳ್ಯ ಎಪಿಎಂಸಿ ಅಧ್ಯಕ್ಷ ಜಾಕೆ ಮಾಧವ ಗೌಡ ಖಂಡಿಸಿದ್ದು, ತಕ್ಷಣ ಅಪರಾಧಿಗಳನ್ನು ಪತ್ತೆ ಹಚ್ಚುವಂತೆ ಆಗ್ರಹಿಸಿದ್ದಾರೆ. ರಾಮಚಂದ್ರರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದ ಅವರು, ಕೃಷಿಕರಿಗೆ ಸರ್ವ ವಿಧದಲ್ಲೂ ಸೇವೆ ಒದಗಿಸುತ್ತಿದ್ದ ಆಗ್ರೋ ರಾಮಚಂದ್ರರ ಮನೆಯಲ್ಲಿ ಇಂತಹ ಘಟನೆ ನಡೆದಿರುವುದು ಆತಂಕ ತಂದಿದೆ ಎಂದು ಪ್ರತಿಕ್ರಿಯಿಸಿದ್ದಾರೆ.
ವ್ಯಾಪಕ ಶೋಧ ಕಾರ್ಯ..
ಕಾಂತಮಂಗಲದ ದರೋಡೆ ನಡೆದ ಮನೆಗೆ ಶ್ವಾನ ದಳ, ಬೆರಳಚ್ಚು ತಜ್ಞರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಹಿರಿಯ ಪೊಲೀಸ್ ಅಧಿಕಾರಿಗಳೂ ಆಗಮಿಸಿದ್ದು, ಕಳ್ಳರ ಪತ್ತೆಗೆ ವ್ಯಾಪಕ ಶೋಧ ಕಾರ್ಯ ನಡೆಸಿದ್ದಾರೆ.
ಬೆಳಗ್ಗೆ ಆಗಮಿಸಿದ ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ತಪಾಸಣೆ ನಡೆಸಿದರು. ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ಹೆಚ್ಚುವರಿ ಎಸ್ಪಿ ವಿನ್ಸೆಂಟ್ ಶಾಂತಕುಮಾರ್, ಪುತ್ತೂರು ಡಿವೈಎಸ್ಪಿ ಭಾಸ್ಕರ ರೈ, ಸುಳ್ಯ ಸರ್ಕಲ್ ಇನ್ಸ್‌ಪೆಕ್ಟರ್ ಬಿ.ಎಸ್.ಸತೀಶ್, ಸುಳ್ಯ ಎಸ್‌ಐ ಚಂದ್ರಶೇಖರ್, ಸಂಪ್ಯ ಎಸ್‌ಐ ರವಿ, ಉಪ್ಪಿನಂಗಡಿ ಎಸ್‌ಐ ಕುಲಕರ್ಣಿ ನೇತೃತ್ವದಲ್ಲಿ ದರೋಡೆಕೋರರ ಪತ್ತೆಗೆ ತೀವ್ರ ಶೋಧ ಕಾರ್ಯ ನಡೆಯುತ್ತಿದೆ.
ಸಿಸಿಬಿ ಪೊಲೀಸರೂ ತನಿಖೆಯಲ್ಲಿ ಕೈಜೋಡಿಸಿದ್ದಾರೆ. ಸಂಜೆ ವೇಳಗೆ ಎಸ್ಪಿ ಡಾ.ಶರಣಪ್ಪ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ದರೋಡೆಕೋರರು ಒಯ್ದ ಮೊಬೈಲ್ ನಂಬರ್‌ಗೆ ಕರೆ ಮಾಡಿದಾಗ ಪಾಳು ಬಾವಿಯಲ್ಲಿ ರಿಂಗ್ ಆಗುವ ಶಬ್ದ ಕೇಳಿಸಿದ್ದು, ಅದನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಉಳಿದಂತೆ ಇನ್ನೆರಡು ಮೊಬೈಲ್‌ಗಳು ರಿಂಗ್ ಆಗಿದ್ದು, ಟವರ್ ಲೊಕೇಶನ್ ಗುರುತಿಸಿ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.
ದರೋಡೆಕೋರರು ತಮಿಳು, ತೆಲುಗು, ಮಲಯಾಳ ಹಾಗೂ ಕನ್ನಡ ಭಾಷೆಗಳಲ್ಲಿ ಮಾತನಾಡುತ್ತಿದ್ದರು. ಮುಖವನ್ನು ಮುಚ್ಚಿದ್ದು, ಕಣ್ಣನ್ನು ಮಾತ್ರ ಬಿಟ್ಟಿದ್ದರು. ಒಬ್ಬನಿಗೆ ಒದ್ದ ಗಡ್ಡವಿರುವುದನ್ನು ಕೆಲಸದಾಕೆ ಗಮನಿಸಿದ್ದಾಳೆ. ಮನೆಯಲ್ಲಿ ನಾಯಿ ಇಲ್ಲದೆ ಇರುವುದು ಹಾಗೂ ಮನೆಯಲ್ಲಿ ದಂಪತಿ ಮತ್ತು ಕೆಲಸದಾಕೆ ಮಾತ್ರವಿರುವುದನ್ನು ಗಮನಿಸಿದ ತಂಡ ಈ ಕೃತ್ಯ ಎಸಗಿರಬಹುದು ಎಂದು ಶಂಕಿಸಲಾಗಿದೆ. ಮನೆಯಲ್ಲಿ ತೆಲುಗು ಪತ್ರಿಕೆಯೊಂದು ಪತ್ತೆಯಾಗಿದೆ.
ವರದಿ ಕೃಪೆ : ವಾಭಾ