ಕನ್ನಡ ವಾರ್ತೆಗಳು

ಶ್ರೀ ಕ್ಷೇತ್ರ ಕುದ್ರೋಳಿ : ಅ.13ರಂದು ಮಂಗಳೂರು ದಸರಾ ಮಹೋತ್ಸವಕ್ಕೆ ಚಾಲನೆ :ಶಾರದಾ ಮಾತೆ, ನವದುರ್ಗೆಯರ ಪ್ರತಿಷ್ಠಾಪನೆ

Pinterest LinkedIn Tumblr

Kudroli_press_meet_1

ಮಂಗಳೂರು, ಅ. 11: ಕುದ್ರೋಳಿಯ ಗೋಕರ್ಣನಾಥ ಕ್ಷೇತ್ರದ ವತಿಯಿಂದ ನಡೆಯುವ ಮಂಗಳೂರು ದಸರಾಕ್ಕೆ ಅ.13ರಂದು ಮಂಗಳೂರು ಪೊಲೀಸ್ ಆಯುಕ್ತ ಎಸ್.ಮುರುಗನ್ ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಲಿದ್ದಾರೆ ಎಂದು ಕ್ಷೇತ್ರಾಡಳಿತ ಮಂಡಳಿಯ ಅಧ್ಯಕ್ಷ ಎಚ್.ಎಸ್.ಸಾಯಿರಾಮ್ ತಿಳಿಸಿದ್ದಾರೆ.

ಶನಿವಾರ ಕ್ಷೇತ್ರದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಗಳವಾರ ಬೆಳಗ್ಗೆ 11 ಗಂಟೆಗೆ ಗೋಕರ್ಣನಾಥ ಕಲಾಮಂಟಪದಲ್ಲಿ ನವದುರ್ಗೆಯರು ಹಾಗೂ ಶಾರದಾ ಮಾತೆಯ ಪ್ರತಿಷ್ಠಾಪನೆಯೊಂದಿಗೆ ದಸರಾ ಮಹೋತ್ಸವಕ್ಕೆ ಚಾಲನೆ ದೊರೆಯಲಿದೆ. ಸಂಜೆ 6:30ಕ್ಕೆ ಸಂತೋಷಿ ಕಲಾ ಮಂಟಪದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಕರ್ಣಾಟಕ ಬ್ಯಾಂಕ್‌ನ ಅಧ್ಯಕ್ಷ ಜಯರಾಂ ಭಟ್ ಚಾಲನೆ ನೀಡುವರು ಎಂದರು.

Kudroli_press_meet_2

14ರಂದು ಸಂಜೆ ಹೊರೆಕಾಣಿಕೆ ಮೆರವಣಿಗೆ:

ರಾಜ್ಯದಲ್ಲಿ ಮಳೆಯ ಅಭಾವ ಉಂಟಾಗಿರುವ ಹಿನ್ನೆಲೆಯಲ್ಲಿ ಜನರ ಸುಭಿಕ್ಷೆಗಾಗಿ ಕ್ಷೇತ್ರದಲ್ಲಿ ಅ.16ರಂದು ನಡೆಯುವ ಬ್ರಹ್ಮಕಲಶೋತ್ಸವದ ಅಂಗವಾಗಿ ಅ.14ರಂದು ಸಂಜೆ 4 ಗಂಟೆಗೆ ನೆಹರೂ ಮೈದಾನದಿಂದ ಗೋಕರ್ಣ ಕ್ಷೇತ್ರದವರೆಗೆ ಹೊರೆಕಾಣಿಕೆ ಮೆರವಣಿಗೆ ನಡೆಯಲಿದೆ. ಹೊರೆಕಾಣಿಕೆ ತರುವ ಭಕ್ತರು ಅಂದು ಸಂಜೆ 3 ಗಂಟೆಯೊಳಗೆ ನೆಹರೂ ಮೈದಾನದಲ್ಲಿರಬೇಕು ಎಂದು ಕ್ಷೇತ್ರದ ವಕ್ತಾರ ಹರಿಕೃಷ್ಣ ಬಂಟ್ವಾಳ ತಿಳಿಸಿದರು.

ದಸರಾ ಮೆರವಣಿಗೆಯಲ್ಲಿ ಸುಡುಮದ್ದು ಪ್ರದರ್ಶನಕ್ಕೆ ನಿಷೇಧ :

ಕುದ್ರೋಳಿಯ ಗೋಕರ್ಣನಾಥ ಕ್ಷೇತ್ರದ ವತಿಯಿಂದ ನಡೆಯುವ ಮಂಗಳೂರು ದಸರಾದ ಮೆರವಣಿಗೆಯ ಸಂದರ್ಭ ಅಲ್ಲಲ್ಲಿ ಸುಡುಮದ್ದುಗಳ ಪ್ರದರ್ಶನವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಈ ಬಗ್ಗೆ ಸಂಬಂಧಪಟ್ಟವರು ಗಮನ ಹರಿಸಬೇಕು. ಇಲ್ಲವಾದಲ್ಲಿ ಮುಂದೆ ಪೊಲೀಸ್ ಇಲಾಖೆಯಿಂದ ಯಾವುದೇ ರೀತಿಯ ಅಡಚಣೆ ಉಂಟಾದಲ್ಲಿ ಕ್ಷೇತ್ರ ಜವಾಬ್ದಾರಿಯಲ್ಲ ಎಂದು ಹರಿಕೃಷ್ಣ ಬಂಟ್ವಾಳ ತಿಳಿಸಿದರು.

Kudroli_press_meet_3

ಪತ್ರಿಕಾಗೋಷ್ಠಿಯಲ್ಲಿ ಶ್ರೀ ಕ್ಷೇತ್ರದ ಉಪಾಧ್ಯಕ್ಷ ರಾಘವೇಂದ್ರ ಕೂಳೂರು,ಕೋಶಾಧಿಕಾರಿ ಪದ್ಮರಾಜ್ ಆರ್, ಕ್ಷೇತ್ರ ಅಭಿವೃದ್ಧಿ ಮಂಡಳಿಯ ಸದಸ್ಯರಾದ ದೇವೇಂದ್ರ ಪೂಜಾರಿ, ಡಾ.ಬಿ.ಜಿ. ಸುವರ್ಣ, ಎಸ್. ಹರಿಶ್ಚಂದ್ರ, ಡಿ.ಡಿ.ಕಟ್ಟೆಮಾರ್, ಲೀಲಾಕ್ಷ ಕರ್ಕೇರಾ, ಶೇಖರ ಪೂಜಾರಿ ಮುಂತಾದವರು ಉಪಸ್ಥಿತರಿದ್ದರು.

Write A Comment