ಕನ್ನಡ ವಾರ್ತೆಗಳು

ಪುತ್ತೂರು ರಾಜಧಾನಿ ಜುವೆಲ್ಲರ್ಸ್ ಶೂಟೌಟ್ ಪ್ರಕರಣ ; ಭೂಗತ ಪಾತಕಿ ಕಲಿ ಯೋಗಿಶ್ ಕೈವಾಡ ಶಂಕೆ..?

Pinterest LinkedIn Tumblr

Putturu_Shutout_Gold_1

ಪುತ್ತೂರು: ಎರಡು ದಿನಗಳ ಹಿಂದೆ ಪುತ್ತೂರಿನ ಮುಖ್ಯ ರಸ್ತೆಯ ಸಿ.ಪಿ.ಸಿ. ಪ್ಲಾಝಾದ ಒಂದನೇ ಮಹಡಿಯಲ್ಲಿ ಕಾರ್ಯಾಚರಿಸುತ್ತಿರುವ ರಾಜಧಾನಿ ಜ್ಯುವೆಲ್ಲರ್ಸ್‍ಗೆ ಅಪರಿಚಿತರಿಂದ ನಡೆದ ಗುಂಡಿನ ದಾಳಿ ಪ್ರಕರಣ ಹೊಸ ತಿರುವು ಪಡೆದುಕೊಂಡಿದ್ದು, ಪ್ರಕರಣದಲ್ಲಿ ಭೂಗತ ಪಾತಕಿ ಕಲಿ ಯೋಗಿಶ್ ಕೈವಾಡವಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ.

ಅ.6ರಂದು ರಾತ್ರಿ ಅಪರಿಚಿತರಿಂದ ನಡೆದ ಗುಂಡಿನ ದಾಳಿಯನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಆರೋಪಿಗಳ ಪತ್ತೆಗಾಗಿ ವಿವಿಧೆಡೆ ಹುಡುಕಾಟ ನಡೆಸುತ್ತಿದ್ದ ಮಧ್ಯೆಯೇ ಪಾಲುದಾರ ಥಾಣಾಜ್ ಶೇಟ್ ಅವರಿಗೆ ಕರೆಯೊಂದು ಬಂದಿದ್ದು, ತಾನು ಕಲಿ ಯೋಗೀಶನೆಂದೂ ನೀನು ಹಣ ಕೇಳಿದರೂ ಕೊಡದೇ ಇದ್ದುದರಿಂದ ನನ್ನ ಹುಡುಗರ ಮೂಲಕ ಕೃತ್ಯ ಮಾಡಿಸಿರುವುದಾಗಿಯೂ ಅವರಲ್ಲಿ ಹೇಳಿಕೊಂಡಿರುವುದಾಗಿ ತಿಳಿದುಬಂದಿದೆ.

Putturu_Shutout_Gold_2

ಕೇರಳದ ಉಪ್ಪಳದಲ್ಲಿ ನಿನ್ನ ಜ್ಯುವೆಲ್ಲರಿ ಮಳಿಗೆಯ ಸಮಸ್ಯೆಯೊಂದನ್ನು ನಾನು ಮುಗಿಸಿಕೊಟ್ಟಿದ್ದೇನೆ. ಹಾಗಿರುವಾಗ ನಾನು ಕೇಳಿದ ಹಣ ನೀನು ಕೊಡದೇ ಇರುವುದರಿಂದ ನಿನ್ನನ್ನು ಬೆದರಿಸಲು ಈ ಕೃತ್ಯ ಎಸಗಿರುವುದಾಗಿ ಕರೆ ಮಾಡಿ ತಿಳಿಸಿರುವುದಾಗಿ ಮಾಹಿತಿ ಲಭ್ಯವಾಗಿದೆ. ಆದರೆ ಈ ವಿಚಾರವನ್ನು ಪೊಲೀಸರು ತನಿಖೆಯ ದೃಷ್ಟಿಯಿಂದ ಅಧಿಕೃತವಾಗಿಹೊರ ಹಾಕಿಲ್ಲ. ನಿನ್ನೆಯಷ್ಟೇ ಕಲಿ ಯೋಗೀಶನ ಹೆಸರಿನಲ್ಲಿ ಖಾಸಗಿ ಚಾನೆಲೊಂದಕ್ಕೆ ಕರೆ ಮಾಡಿ ಪುತ್ತೂರು ಶೂಟೌಟನ್ನು ನಾನೇ ಮಾಡಿಸಿರುವುದಾಗಿ ಸಮರ್ಥಸುವ ಕರೆಯೊಂದು ಬಂದಿತ್ತು.

ಅ.6ರಂದು ರಾತ್ರಿ 7.30 ರ ಸುಮಾರಿಗೆ ಬೈಕ್‍ನಲ್ಲಿ ಬಂದ ಇಬ್ಬರು ಮುಸುಕುಧಾರಿ ಅಪರಿಚಿತರು ಪುತ್ತೂರಿನ ಮುಖ್ಯ ರಸ್ತೆಯ ಸಿ.ಪಿ.ಸಿ. ಪ್ಲಾಝಾದ ಒಂದನೇ ಮಹಡಿಯಲ್ಲಿ ಕಾರ್ಯಾಚರಿಸುತ್ತಿರುವ ರಾಜಧಾನಿ ಜ್ಯುವೆಲ್ಲರ್ಸ್‍ಗೆ ಗುರಿಯಾಗಿಸಿ ಮೂರು ಸುತ್ತಿನ ಗುಂಡನ್ನು ಪಿಸ್ತೂಲ್ ಮೂಲಕ ಹಾರಿಸಿ ಪರಾರಿಯಾಗಿದ್ದರು. ಮೊದಲಿಗೆ ಒಂದು ಸುತ್ತು ಗುಂಡು ಹಾರಿಸಿದ ಅಪರಿಚಿತರು ಬಳಿಕ ಕೆಲವೇ ನಿಮಿಷಗಳ ಬಳಿಕ ಮತ್ತೆರಡು ಗುಂಡು ಹಾರಿಸಿ ಸ್ಥಳದಿಂದ ಪರಾರಿಯಾಗಿದ್ದರು.

ಮೊದಲು ಹಾರಿಸಿದ ಗುಂಡು ಜ್ಯುವೆಲ್ಲರ್ಸ್ ಮುಂಭಾಗದಲ್ಲಿ ಅಳವಡಿಸಲಾಗಿದ್ದ ಕಟೌಟ್‍ಗೆ ಬಡಿದಿದ್ದು ಇದರಿಂದಾಗಿ ದುಷ್ಕರ್ಮಿಗಳು ಮತ್ತೆರಡು ಬಾರಿ ಗುಂಡಿನ ದಾಳಿ ನಡೆಸಿದ್ದರು. ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸುತ್ತಿರುವುದನ್ನು ಅಲ್ಲೇ ಪಕ್ಕದಲ್ಲಿ ಮೊಬೈಲ್ ಅಂಗಡಿಯಲ್ಲಿದ್ದ ಮಹಿಳೆಯೋರ್ವರು ನೋಡಿದ್ದು, ಅವರು ಆರೋಪಿಗಳು ಮುಸುಕು ಧರಿಸಿದ್ದರು ಮತ್ತು ಬೈಕ್‍ನ ಹಿಂಬದಿ ಸವಾರ ಕಪ್ಪು ಟೀ ಶರ್ಟ್ ಧರಿಸಿದ್ದ ಎಂಬ ಮಾಹಿತಿಯನ್ನು ನೀಡಿದ್ದರು.

ಈ ಎಲ್ಲಾ ಅಂಶಗಳನ್ನು ಆಧರಿಸಿಕೊಂಡು ಪೊಲೀಸರು ಆರೋಪಿಗಳ ಶೋಧ ಕಾರ್ಯ ನಡೆಸುತ್ತಿದ್ದರು. ಘಟನೆಯ ಕುರಿತು ಪಾಲುದಾರ ಥಾಣಾಜ್ ಶೇಟ್ ಎಂಬವರು ನಗರ ಠಾಣೆಗೆ ದೂರು ನೀಡಿದ್ದರು. ಈತನ್ಮಧ್ಯೆ ಭೂಗತ ಪಾತಕಿ ಕಲಿ ಯೋಗೀಶ ಎಂಬಾತನ ಹೆಸರಿನಲ್ಲಿ ಕರೆಗಳು ಬರಲಾರಂಭಿಸಿ ರುವುದ ರಿಂದ  ಪ್ರಕರಣ ನಾಟಕೀಯ ತಿರುವು ಕಂಡಿದೆ.

ಥಾಣಾಜ್ ಶೇಟ್ ಕಂಗಾಲು :

ಒಟ್ಟು ಘಟನೆಯಿಂದಾಗಿ ರಾಜಧಾನಿ ಜ್ಯುವೆಲ್ಲರ್ಸ್ ಪಾಲುದಾರ ಥಾಣಾಜ್ ಶೇಟ್ ಕಂಗಾಲಾಗಿದ್ದಾರೆ. ನನಗೆ ಭೂಗತ ಲೋಕದ ಕರೆ ಬಂದೇ ಇಲ್ಲ ಎಂದು ಹೇಳುವ ಅವರು ಜ್ಯುವೆಲ್ಲರಿ ಮಳಿಗೆಯ ಹೆಸರಿನಲ್ಲಿ ಪದೇ, ಪದೇ ನನ್ನ ಹೆಸರು ಕೇಳಿ ಬರುತ್ತಿದೆ. ನಾನು ಪೊಲೀಸ್ ದೂರು ನೀಡಿದ್ದು ನಿಜ. ಜ್ಯುವೆಲ್ಲರಿಯಲ್ಲಿ ಇದರಲ್ಲಿ ನನಗಿಂತಲೂ ಮೇಲಿನ ಪಾಲುದಾರರಿದ್ದಾರೆ ಎಂದು ತಿಳಿಸಿದ್ದಾರೆ. ಅದಾಗ್ಯೂ ಭೂಗತ ಕರೆ ಬಂದೇ ಇಲ್ಲ ಎಂಬ ಅವರ ಹೇಳಿಕೆಯನ್ನು ಸಂಪೂರ್ಣ ನಂಬುವಂತಿಲ್ಲ ಎಂಬ ಮಾತೂ ಸಾರ್ವಜನಿಕ ವಲಯದಿಂದ ಕೇಳಿ ಬಂದಿದೆ.

Write A Comment