ಮಂಗಳೂರು, ಅ.8 : ನಗರದ ಪಾಂಡೇಶ್ವರ ಮತ್ತು ಬರ್ಕೆ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಎರಡು ಗಾಂಜಾ ಮಾರಾಟ ಪ್ರಕರಣಗಳು ವರದಿಯಾಗಿದ್ದು, ನಾಲ್ವರನ್ನು ಬಂಧಿಸಿರುವ ಪೊಲೀಸರು ಒಟ್ಟು 1.75 ಕೆ.ಜಿ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ. ಮೂವರು ಆರೋಪಿಗಳು ಪರಾರಿಯಾಗಿದ್ದಾರೆ.
ಜೆಪ್ಪು ಮಾರ್ಗನ್ಸ್ ಗೇಟ್ ನ ಭಾರತ್ ಮೈದಾನದಲ್ಲಿ ಆರು ಯುವಕರು ಗಾಂಜಾ ಮಾರಾಟ ಮಾಡುತ್ತಿದ್ದಾರೆ ಎಂಬ ಮಾಹಿತಿ ಪಡೆದ ಪೊಲೀಸರು ಅಲ್ಲಿಗೆ ದಾಳಿ ನಡೆಸಿದಾಗ ಆರೋಪಿಗಳಾದ ಸುರೇಶ್, ಸಚಿನ್ ಮತ್ತು ರಿತೇಶ್ ಸಿಕ್ಕಿ ಬಿದ್ದಿದ್ದು, ಆಶಿಷ್, ಪ್ರವೀಶ್ ಮತ್ತು ಕಿರಣ್ ಎನ್ನುವವರು ಪರಾರಿಯಾಗಿದ್ದಾರೆ.
ಬಂಧಿತ ಆರೋಪಿಗಳಿಂದ 1.045 ಕೆ.ಜಿ. ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದ್ದು, ಇದರ ಮೌಲ್ಯ 31,350 ರೂ.ಗಳು. ಜೊತೆಗೆ ಮೊಬೈಲ್ ಫೋನ್, ನಗದು 350 ರೂ. ಮತ್ತು ಪರಾರಿಯಾಗಿರುವ ಆರೋಪಿಗಳು ಬಿಟ್ಟು ಹೋಗಿದ್ದ ಬೈಕ್ ಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ. ಗಾಂಜಾ ಸೇರಿದಂತೆ ಈ ಎಲ್ಲ ಸೊತ್ತುಗಳ ಒಟ್ಟು ಮೌಲ್ಯ 1.37.500 ರೂ.ಗಳೆಂದು ಹೇಳಲಾಗಿದೆ.
ಈ ಬಗ್ಗೆ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರತ್ಯೇಕ ಪ್ರಕರಣಗಳಲ್ಲಿ ನಗರದ ಜಿಲ್ಲಾ ಕಾರಾಗೃಹದ ಬಳಿ ಗಾಂಜಾ ಮಾರಾಟ ನಡೆಯುತ್ತಿರುವ ಬಗ್ಗೆ ಮಾಹಿತಿ ಪಡೆದ ಬರ್ಕೆ ಪೊಲೀಸರು ಅಲ್ಲಿಗೆ ದಾಳಿ ನಡೆಸಿದಾಗ ಆರೋಪಿ ಮಹಮ್ಮದ್ ಇರ್ಷಾದ್ (23) ಸಿಕ್ಕಿ ಬಿದ್ದಿದ್ದಾನೆ. ಆತನ ಬಳಿಯಿಂದ 15000 ರೂ. ಮೌಲ್ಯದ 700 ಗ್ರಾಂ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ.
ಈ ಬಗ್ಗೆ ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
