ಮಂಗಳೂರು, ಅ.8: ಪ್ರಧಾನಿ ನರೇಂದ್ರ ಮೋದಿ ಅವರ ಬೆಂಗಳೂರು ಭೇಟಿಯ ಸಂದರ್ಭ ನ್ಯಾಸ್ಕಮ್ ಸಂಸ್ಥೆ ಮುಖ್ಯಮಂತ್ರಿಗಳನ್ನು ಆಹ್ವಾನಿಸದೇ ಶಿಷ್ಟಚಾರ ಉಲ್ಲಂಘನೆ ಮಾಡುವ ಮೂಲಕ ರಾಜ್ಯದ ಜನತೆಗೆ ಅಪಮಾನ ಮಾಡಲಾಗಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ವಿಧಾನ ಪರಿಷತ್ ಶಾಸಕ ಐವನ್ ಡಿಸೋಜಾ ಒತ್ತಾಯಿಸಿದ್ದಾರೆ.
ದೇಶದ ಪ್ರಧಾನಮಂತ್ರಿ ರಾಜ್ಯಕ್ಕೆ ಭೇಟಿ ನೀಡಿದಾಗ ಒಕ್ಕೂಟ ವ್ಯವಸ್ಥೆಯ ಸಂಪ್ರದಾಯದಂತೆ ಪ್ರಧಾನಮಂತ್ರಿಗಳ ಜೊತೆ ಮುಖ್ಯಮಂತ್ರಿ ಇರುವುದು ರಾಷ್ಟದ ಶಿಷ್ಟಚಾರದ ಸಂಪ್ರದಾಯ. ರಾಜ್ಯದಲ್ಲಿ ಸಿಲಿಕಾನ್ ವ್ಯಾಲಿಯನ್ನು ಹುಟ್ಟು ಹಾಕಿದ್ದು ರಾಜ್ಯದ ಕಾಂಗ್ರೆಸ್ ಸರಕಾರ. ಅಲ್ಲದೇ, ನ್ಯಾಸ್ಕಮ್ ಸಂಸ್ಥೆ ರಾಜ್ಯದ ನೆಲ, ಜಲ ಮತ್ತು ವಿದ್ಯುತ್ ಎಲ್ಲವನ್ನೂ ಒಕ್ಕೂಟ ವ್ಯವಸ್ಥೆಯಲ್ಲಿ ಅನುಭವಿಸಿ, ರಾಜ್ಯದ ಮುಖ್ಯಮಂತ್ರಿಯವರನ್ನು ಅಹ್ವಾನಿಸದೇ ಶಿಷ್ಟಚಾರ ಉಲ್ಲಂಘಿಸುವ ಮೂಲಕ ರಾಜ್ಯದ ಜನತೆಗೆ ಅವಮಾನ ಮಾಡಿದೆ. ಈ ಶಿಷ್ಟಚಾರ ಉಲ್ಲಂಘನೆಗೆ ಪ್ರಧಾನ ಮಂತ್ರಿ ಕಚೇರಿಯ ನೇರ ಕೈವಾಡ ಇದೆ ಎಂದು ಆರೋಪಿಸಿರುವ ಐವನ್, ಮುಖ್ಯಮಂತ್ರಿಗಳಿಗೆ ಹಾಗೂ ರಾಜ್ಯದ ಜನತೆಗೆ ಅಪಮಾನ ಮಾಡಿದ ಸಂಸ್ಥೆಯು ಯಾವ ಉದ್ದೇಶಕ್ಕಾಗಿ ಮುಖ್ಯಮಂತ್ರಿಯನ್ನು ಆಹ್ವಾನಿಸಿಲ್ಲ ಎಂದು ಸ್ವಷ್ಟನೆ ನೀಡಬೇಕು. ಇಲ್ಲದೇ ಇದ್ದಲ್ಲಿ ಈ ಬಗ್ಗೆ ಮುಂದಿನ ಅಧಿವೇಶನದಲ್ಲಿ ಚರ್ಚೆಗೆ ಅನುವು ಮಾಡಬೇಕು ಮತ್ತು ಸಂಸ್ಥೆಯ ಮೇಲೆ ಕ್ರಮ ಕೈಗೊಳ್ಳಬೇಕೆಂದು ಅವರು ಅಗ್ರಹಿಸಿದ್ದಾರೆ.
ಈ ಬಗ್ಗೆ ರಾಜ್ಯದಾದ್ಯಂತ ಶಿಷ್ಟಾಚಾರ ಉಲ್ಲಂಘನೆಯನ್ನು ಖಂಡಿಸುವಂತಹ ಅವಶ್ಯಕತೆ ಇದೆ. ಒಕ್ಕೂಟ ವ್ಯವಸ್ಥೆ ಬಲಪಡಿಸಲು ಇಂತಹ ಶಿಷ್ಟಚಾರ ಉಲ್ಲಂಘನೆ ಕ್ರಮಗಳನ್ನು ಖಂಡಿಸಬೇಕಾದುದು ರಾಜ್ಯದ ಜನತೆಯ ಕರ್ತವ್ಯ ಎಂದು ಐವನ್ ಹೇಳಿದ್ದಾರೆ.

