ಬೆಂಗಳೂರು, ಅ.3-ಬೆಂಗಳೂರು ನಿರ್ಮಾತೃ ಕೆಂಪೇಗೌಡರ ಸಮಾಧಿ ಸ್ಥಳವನ್ನು ಪ್ರಮುಖ ಐತಿಹಾಸಿಕ ಸ್ಥಳವನ್ನಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ಮೇಯರ್ ಮಂಜುನಾಥರೆಡ್ಡಿ ತಿಳಿಸಿದ್ದಾರೆ. ಬನಶಂಕರಿ ಸಾಮೂಹಿಕ ವಿವಾಹ ವೇದಿಕೆ ಸದಸ್ಯರಾದ ರಾಜಣ್ಣ, ಜಯರಾಮು, ರಂಗಶ್ರೀರಂಗಸ್ವಾಮಿ, ಶಂಭುಲಿಂಗಯ್ಯ, ಶಿವನಂಜಪ್ಪ, ದಾಮೋದರ ನಾಯ್ಡು, ಇತಿಹಾಸ ತಜ್ಞ ತಲಕಾಡು ಚಿಕ್ಕರಂಗೇಗೌಡ ಮತ್ತಿತರರೊಂದಿಗೆ ಪಾಲಿಕೆ ಮಾಜಿ ಸದಸ್ಯ ಎ.ಎಚ್.ಬಸವರಾಜು ಅವರ ನೇತೃತ್ವದ ತಂಡ ಮೇಯರ್ ಮಂಜುನಾಥರೆಡ್ಡಿ ಅವರನ್ನು ಭೇಟಿ ಮಾಡಿ ಮಾಗಡಿಯ ತಿಪ್ಪಸಂದ್ರ ಸಮೀಪದ ಕೆಂಪಾಪುರದಲ್ಲಿ ದೊರಕಿರುವ ಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೇಗೌಡರ ಸಮಾಧಿ ಸ್ಥಳವನ್ನು ರಾಜ್‌ಘಾಟ್ ಮಾದರಿಯಲ್ಲಿ ಅಭಿವೃದ್ಧಿಪಡಿಸುವಂತೆ ಮನವಿ ಸಲ್ಲಿಸಿದ ನಂತರ ಮೇಯರ್ ಮಾತನಾಡಿದರು.
ಬರುವ ಸೋಮವಾರದಂದು ಬೆಂಗಳೂರು ಅಧ್ಯಯನ ಸಮಿತಿ ಸದಸ್ಯರು ಹಾಗೂ ಅಧಿಕಾರಿಗಳ ತಂಡವನ್ನು ಕೆಂಪೇಗೌಡರ ಸಮಾಧಿ ಸ್ಥಳ ಇರುವ ಕೆಂಪಾಪುರಕ್ಕೆ ಕಳುಹಿಸಿ ವರದಿ ರಿಸಿಕೊಳ್ಳುವುದಾಗಿ ತಿಳಿಸಿದರು. ಅತಿ ಶೀಘ್ರದಲ್ಲಿ ಕೆಂಪೇಗೌಡರ ಸಮಾಧಿ ಸ್ಥಳಕ್ಕೆ ಬಿಬಿಎಂಪಿ ಸದಸ್ಯರೊಂದಿಗೆ ತೆರಳಿ ಪರಿಶೀಲಿಸಿ ಪಾಲಿಕೆ ವತಿಯಿಂದಲೇ ಈ ಪ್ರದೇಶವನ್ನು ಪ್ರಮುಖ ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿ ಪಡಿಸಲು ಕ್ರಮಕೈಗೊಳ್ಳುತ್ತೇವೆ ಎಂದು ಮಂಜುನಾಥ್‌ರೆಡ್ಡಿ ಭರವಸೆ ನೀಡಿದರು. ಈ ವೇಳೆ ಎ.ಎಚ್.ಬಸವರಾಜು ಸುದ್ದಿಗಾರರೊಂದಿಗೆ ಮಾತನಾಡಿ, ನಾಡಪ್ರಭು ಕೆಂಪೇಗೌಡರು 16ನೆ ಶತಮಾನದಲ್ಲಿ ಹಲವಾರು ಕಡೆ ಯುದ್ಧ ಮಾಡಿ ಕೆಂಪಾಪುರಕ್ಕೆ ಬಂದು ಅಲ್ಲಿ ಐಕ್ಯರಾದರು ಎಂಬ ಬಗ್ಗೆ ಕುರುಹು ದೊರೆತಿದೆ ಎಂದು ಹೇಳಿದರು.
ನಾವು ಆ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಕೆಂಪೇಗೌಡರ ಗೋಪುರದಲ್ಲಿ ಅಶ್ವಾರೂಢ ಕೆಂಪೇಗೌಡರ ಪ್ರತಿಮೆ, ಕಾಲಭೈರವೇಶ್ವರ, ಕೆಂಪಾಂಬಿಕೆ, ಬಸವಲಿಂಗ ಮತ್ತಿತರ ಕೆತ್ತನೆ ದೊರೆತಿದೆ. ಅಲ್ಲದೆ ಕೆಂಪೇಗೌಡರು ಅಲ್ಲೇ ಐಕ್ಯರಾದರೆಂಬುದಕ್ಕೆ ಶಾಸನ ಕೂಡಾ ಕೆತ್ತನೆಯಾಗಿದೆ ಎಂದು ತಿಳಿಸಿದರು. ಮರೂರು ಗ್ರಾಮದ ಪ್ರಶಾಂತ್ ಎಂಬ ಯವಕ ಕೆಂಪೇಗೌಡರ ಸಮಾಧಿ ಸ್ಥಳವನನ್ನು ಶುಚಿಗೊಳಿಸಿ ಸಾರ್ವಜನಿಕ ಪ್ರದರ್ಶನಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಇತಿಹಾಸತಜ್ಞ ತಲಕಾಡು ಚಿಕ್ಕರಂಗೇಗೌಡರು ಇದೇ ಕೆಂಪೇಗೌಡರು ಐಕ್ಯವಾದ ಸ್ಥಳ ಎಂದು ಢಪಡಿಸಿದ್ದಾರೆ ಎಂದು ಹೇಳಿದರು. ಸಿಲಿಕಾನ್‌ಸಿಟಿ, ಐಟಿಬಿಟಿ ಸಿಟಿ ಎಂಬ ಖ್ಯಾತಿ ಪಡೆದಿರುವ ಬೆಂಗಳೂರಿನ ನಾಗರಿಕರು ಪ್ರತಿದಿನ ಕೆಂಪೇಗೌಡರನ್ನು ನೆನಪು ಮಾಡಿಕೊಳ್ಳಬೇಕು. ಅಂತಹ ಮಹಾನುಭಾವರ ಸಮಾಧಿ ಸ್ಥಳವನ್ನು ಅಭಿವೃದ್ಧಿಪಡಿಸುವುದು ಬಿಬಿಎಂಪಿಯ ಆದ್ಯ ಕರ್ತವ್ಯ. ಹಾಗಾಗಿ ನಾವು ಮೇಯರ್ ಅವರನ್ನು ಭೇಟಿಯಾಗಿ ಒಂದು ವಾರದೊಳಗೆ ಕೆಂಪೇಗೌಡರ ಸಮಾಧಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುವಂತೆ ಮನವಿ ಮಾಡಿದ್ದೇವೆ ಎಂದರು. ಕೆಂಪೇಗೌಡರ ಸಮಾಧಿ ಸ್ಥಳವನ್ನು ರಾಜ್‌ಘಾಟ್ ಮಾದರಿಯಲ್ಲಿ ಅಭಿವೃದ್ಧಿ ಪಡಿಸಬೇಕು. ಸಮಾಧಿ ಸ್ಥಳವಿರುವ ಕೆಂಪಾಪುರ ಗ್ರಾಮವನ್ನು ದತ್ತು ಪಡೆಯಬೇಕೆಂದು ಮಂಜುನಾಥರೆಡ್ಡಿ ಅವರನ್ನು ಕೋರಿದ್ದೇವೆ ಎಂದು ತಿಳಿಸಿದರು.