ನವದೆಹಲಿ: ಎಷ್ಟು ಭಾರತೀಯರು ಒಟ್ಟು ಎಷ್ಟು ಕಪ್ಪುಹಣವನ್ನು ಹೊಂದಿದ್ದಾರೆ ಎನ್ನುವುದು ಇದೀಗ ಪ್ರಕಟವಾಗಿದೆ. 638 ಮಂದಿ ಕಾಳಧನಿಕರು ಸುಮಾರು 3770 ಕೋಟಿ ರೂಪಾಯಿ ಕಪ್ಪಹಣವನ್ನು ಹೊಂದಿರುವುದಾಗಿ ಘೋಷಣೆ ಮಾಡಿದ್ದಾರೆ.
ಸೆಂಟ್ರಲ್ ಬೋರ್ಡ್ ಆಫ್ ಡೈರೆಕ್ಟ್ ಟ್ಯಾಕ್ಸ್ (ಸಿಬಿಟಿಡಿ) ಈ ಮಾಹಿತಿಯನ್ನು ಸರ್ಕಾರಕ್ಕೆ ನೀಡಿದ್ದು, ಹಣಕಾಸು ಸಚಿವಾಲಯ ಪತ್ರಿಕಾ ಪ್ರಕಟಣೆಯ ಮೂಲಕ ಈ ಮಾಹಿತಿಯನ್ನು ಬಿಡುಗಡೆ ಮಾಡಿದೆ. ಸಿಬಿಟಿಡಿ ನೀಡಿರುವ ಮಾಹಿತಿ ಪ್ರಕಾರ 638 ಮಂದಿ ಕಾಳಧನಿಕರು 3770 ಕೋಟಿ ರೂ. ಇಟ್ಟಿದ್ದು ನಿಖರ ಮಾಹಿತಿ ತಿಳಿಯಬೇಕಿದೆ ಎಂದು ಸಚಿವಾಲಯ ತಿಳಿಸಿದೆ.
ಕಪ್ಪುಹಣ, ಆದಾಯ, ಹಾಗೂ ಆಸ್ತಿ ಹೊಂದಿದವರು ಶಿಕ್ಷೆಯಿಂದ ತಪ್ಪಿಸಿಕೊಳ್ಳಬೇಕು ಎಂದರೆ ಸೆಪ್ಟೆಂಬರ್ 30ರ ಒಳಗೆ ಆಸ್ತಿ ವಿವರಗಳನ್ನು ದೆಹಲಿಯ ಆದಾಯ ತೆರಿಗೆ ಕಚೇರಿಯಲ್ಲಿ ಸ್ಥಾಪಿಸಲಾಗಿರುವ ವಿಶೇಷ ಸೇವಾ ಕೇಂದ್ರ ಅಥವಾ ಆನ್ಲೈನ್ ಮೂಲಕ ಘೋಷಣೆ ಮಾಡಬೇಕು ಎಂದು ಕೇಂದ್ರ ಸರ್ಕಾರ ಜುಲೈನಲ್ಲಿ ತಿಳಿಸಿತ್ತು.
ಕಪ್ಪು ಹಣ ಘೋಷಣೆಗೆ ನಿನ್ನೆ ಅಂತಿಮ ದಿನವಾದ ಹಿನ್ನೆಲೆಯಲ್ಲಿ ಸೇವಾ ಕೇಂದ್ರದ ಮುಂಭಾಗ ಕಾಳಧನವನ್ನು ಘೋಷಣೆ ಮಾಡಿಕೊಳ್ಳಲು ಜನರು ಕ್ಯೂ ನಿಂತಿದ್ದರು. ನಿನ್ನೆ ಕಪ್ಪುಹಣವನ್ನು ಘೋಷಣೆ ಮಾಡಿಕೊಂಡಿರುವವರಲ್ಲಿ ರಾಜಸ್ಥಾನ ಮತ್ತು ಕರ್ನಾಟಕದ ಕಾಳಧನಿಕರೇ ಅಧಿಕ ಸಂಖ್ಯೆಯಲ್ಲಿದ್ದರು.
ಕಪ್ಪುಹಣ ಘೋಷಣೆ ಮಾಡುವಾಗ ಹೊಸ ಕಾನೂನಿನ ಅನ್ವಯ ಮೊತ್ತದ ಮೇಲೆ ಶೇ.30ರಷ್ಟು ತೆರಿಗೆ ಹಾಗೂ ತೆರಿಗೆ ಮೇಲೆ ಶೇಕಡಾ ನೂರರಷ್ಟು ದಂಡ ಸೇರಿ ಒಟ್ಟು ಶೇ.60ರಷ್ಟು ಮೊತ್ತವನ್ನು ಸರ್ಕಾರಕ್ಕೆ ಪಾವತಿಸಬೇಕು. ಈ ದಂಡದ ಪಾವತಿಗೆ ಕೊನೆಯ ದಿನ ಡಿಸೆಂಬರ್ 31 ಆಗಿರುತ್ತದೆ. ಒಂದು ವೇಳೆ ಗಡುವನ್ನು ಮೀರಿದ ಬಳಿಕ ಕಪ್ಪು ಹಣ ಪತ್ತೆಯಾದರೆ ಒಟ್ಟು ಆಸ್ತಿಯ ಶೇ.120ರಷ್ಟು ಹಣವನ್ನು ದಂಡವಾಗಿ ಪಾವತಿ ಮಾಡಬೇಕು. ಜೊತೆಗೆ ಕ್ರಿಮಿನಲ್ ಮೊಕದ್ದಮೆ ಹತ್ತು ವರ್ಷ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ಹಣಕಾಸು ಸಚಿವಾಲಯ ತನ್ನ ಸೂಚನೆಯಲ್ಲಿ ಕಾಳ ಧನಿಕರಿಗೆ ಎಚ್ಚರಿಕೆ ನೀಡಿತ್ತು.
