ಮಂಗಳೂರು : ಎತ್ತಿನಹೊಳೆ ಯೋಜನೆ ವಿರೋಧಿಸಿ ನಿರ್ಣಯ ಕೈಗೊಳ್ಳುವ ಚರ್ಚೆಗೆ ಅವಕಾಶ ನೀಡುವ ಕುರಿತು ಪ್ರತಿಪಕ್ಷದ ಸದಸ್ಯರ ಆಗ್ರಹ, ಆಡಳಿತ ಪಕ್ಷದ ಸದಸ್ಯರ ಆಕ್ಷೇಪದ ನಡುವೆಯೇ ಯೋಜನೆ ವಿರೋಧಿಸಿ ಮಂಗಳೂರು ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ಮನಪಾದಲ್ಲಿ ನಡೆದ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿದ್ದ ಮೇಯರ್ ಜೆಸಿಂತಾ ವಿಜಯಾ ಆಲ್ಫ್ರೆಡ್‌ರವರು ಎತ್ತಿನಹೊಳೆ ಯೋಜನೆಯಿಂದ ಪಾಲಿಕಾ ವ್ಯಾಪ್ತಿಯ ನೀರಿನ ಮೂಲವಾಗಿರುವ ನೇತ್ರಾವತಿ ನದಿಗೆ ಧಕ್ಕೆಯಾಗುವ ಹಿನ್ನೆಲೆ ಯಲ್ಲಿ ಯೋಜನೆಯನ್ನು ಕೈಬಿಡುವಂತೆ ಒತ್ತಾಯಿಸಿ ಸರಕಾರಕ್ಕೆ ಪತ್ರ ಬರೆಯಲು ನಿರ್ಣಯಿಸಿರುವುದಾಗಿ ತಿಳಿಸಿದರು.
ಆದರೆ, ಮನಪಾದ ಸಿಪಿಎಂನ ಏಕೈಕ ಸದಸ್ಯ ದಯಾನಂದ ಶೆಟ್ಟಿ ನಿರ್ಣಯ ವನ್ನು ಆಕ್ಷೇಪಿಸಿ, ಎತ್ತಿನಹೊಳೆ ಯೋಜನೆ ಕುರಿತಂತೆ ಸಮಗ್ರ ಚರ್ಚೆಗೆ ಆಗ್ರಹಿಸಿದರು. ಇಂದಿನ ಸಭೆಗೆ ಮುಂಚಿತವಾಗಿಯೇ ಸದಸ್ಯರಾದ ರೂಪಾ ಡಿ. ಬಂಗೇರ, ಅಬ್ದುರ್ರವೂಫ್ ಮತ್ತು ಅಬ್ದುಲ್ಲತೀಫ್ ಎತ್ತಿನಹೊಳೆ ಯೋಜನೆ ವಿರೋಧಿಸಿ ನಿರ್ಣಯ ಕೈಗೊಳ್ಳುವಂತೆ ಮೇಯರ್‌ಗೆ ಗೊತ್ತುವಳಿ ಮಂಡಿಸಿದ್ದರು. ಇದರನ್ವಯ ಸಭೆಯಲ್ಲಿ ಮೇಯರ್‌ರವರು ನಿರ್ಣಯ ಕೈಗೊಳ್ಳಲು ಮುಂದಾದಾಗ ಪ್ರತಿಪಕ್ಷದ ಸದಸ್ಯೆ ರೂಪಾ ಡಿ. ಬಂಗೇರ ತನಗೆ ಮಾತನಾಡಲು ಅವಕಾಶ ನೀಡುವಂತೆ ಆಗ್ರಹಿಸಿದರು. ಆದರೆ ಕಳೆದ ಸಭೆಯಲ್ಲಿ ಈ ಬಗ್ಗೆ ಯಾರೂ ಕಾರ್ಯಸೂಚಿ ಮಂಡಿಸಿರಲಿಲ್ಲ. ಈ ಬಾರಿ ಮಂಡನೆಯಾಗಿದೆ. ಎತ್ತಿನಹೊಳೆ ಯೋಜನೆ ಬಗ್ಗೆ ಸರ್ವ ಸದಸ್ಯರು ವಿರೋಧಿಸುತ್ತಿದ್ದಾರೆ. ಈ ವಿಷಯದಲ್ಲಿ ರಾಜಕೀಯ ಬೇಡ, ಮೇಯರ್ ನಿರ್ಣಯ ಕೈಗೊಳ್ಳಬೇಕೆಂದು ಆಡಳಿತ ಪಕ್ಷದ ಸದಸ್ಯರು ಒತ್ತಾಯಿಸಿದರು. ಆಡಳಿತ ಹಾಗೂ ಪ್ರತಿಪಕ್ಷದ ಸದಸ್ಯರ ನಡುವೆ ಈ ಬಗ್ಗೆ ಕೆಲ ಹೊತ್ತು ವಾಗ್ವಾದ ನಡೆದು ಚರ್ಚೆಗೆ ಅವಕಾಶ ಕಲ್ಪಿಸುತ್ತಿಲ್ಲ ಎಂದು ಆಕ್ಷೇಪಿಸಿ ವಿಪಕ್ಷ ಸದಸ್ಯರು ಮೇಯರ್ ಪೀಠದೆದುರು ತೆರಳಿ ಧರಣಿಗೆ ಮುಂದಾದರು.
ಈ ಸಂದರ್ಭ ಸ್ಥಾಯಿ ಸಮಿತಿಯ ಅಧ್ಯಕ್ಷ ಹರಿನಾಥ್ ಮಾತನಾಡಿ, ಬಿಜೆಪಿಯ ಶಾಸಕ ಸೋಮಶೇಖರ್, ಡಿ.ವಿ.ಸದಾನಂದ ಗೌಡರು ಯೋಜನೆ ಬೇಕು ಎಂದಿದ್ದಾರೆ. ಬಿಜೆಪಿ ಮುಖಂಡ ಪ್ರಹ್ಲಾದ್ ಜೋಶಿ ಬೇಡ ಎಂದು ಹೇಳಲಿ. ಸಂಸದ ನಳಿನ್‌ಕುಮಾರ್ ಕಟೀಲ್ ಬೆಂಗಳೂರಿನಲ್ಲಿ ಯೋಜನೆ ವಿರೋಧಿಸಿ ಪತ್ರಿಕಾಗೋಷ್ಠಿ ನಡೆಸಲಿ ಎಂದು ಕಟಕಿಯಾಡಿದರು. ಅವರೆಲ್ಲರ ಬಗ್ಗೆ ಇಲ್ಲಿ ಮಾತನಾಡು ವುದು ಬೇಡ. ಈಗ ಮನಪಾ ಸದಸ್ಯರು ಯೋಜನೆಗೆ ವಿರೋಧ ವ್ಯಕ್ತಪಡಿಸುತ್ತಿ ರುವುದು. ಕಳೆದ ಸಭೆಯಲ್ಲಿ ಸದಸ್ಯೆ ರೂಪಾ ಡಿ. ಬಂಗೇರ ಈ ಬಗ್ಗೆ ಪ್ರಸ್ತಾಪಿ ಸಿದಾಗ ಆಡಳಿತ ಪಕ್ಷದ ಕೆಲ ಸದಸ್ಯರು ಯೋಜನೆ ಪರವಾಗಿ ಮಾತನಾಡಿದ್ದರು ಎಂದು ವಿಪಕ್ಷ ಸದಸ್ಯ ತಿಲಕ್‌ರಾಜ್ ಛೇಡಿಸಿದರು.
‘‘ನಾನು ಕಳೆದ ಸಭೆಯಲ್ಲೇ ಯೋಜನೆ ಯನ್ನು ವಿರೋಧಿಸಿ ನಿರ್ಣಯ ಕೈಗೊಳ್ಳುವಂತೆ ಆಗ್ರಹಿಸಿದ್ದೆ. ಅಂದೇ ಜನರ ಬಗ್ಗೆ ಕಾಳಜಿ ಹೊಂದಿ ನಿರ್ಣಯಿಸಿದ್ದರೆ ಮತ್ತೆ ಒಂದು ತಿಂಗಳ ವಿಳಂಬ ಆಗುತ್ತಿರಲಿಲ್ಲ. ಇದೀಗ ಮೇಯರ್ ಕಳೆದ ಸಭೆಯಲ್ಲಿ ಆದ ತಪ್ಪನ್ನು ಮರೆಮಾಚಲು ಚರ್ಚೆಗೆ ಅವಕಾಶ ನೀಡದೆ ನಿರ್ಣಯ ಕೈಗೊಂಡಿದ್ದಾರೆ’’ ಎಂದು ರೂಪಾ ಡಿ. ಬಂಗೇರ ಹಾಗೂ ವಿಪಕ್ಷ ನಾಯಕ ಪ್ರೇಮಾನಂದ ಶೆಟ್ಟಿ ಆರೋಪಿಸಿದರು. ಸಭೆಯಲ್ಲಿ ಮನಪಾ ನೂತನ ಆಯುಕ್ತ ಡಾ.ಗೋಪಾಲಕೃಷ್ಣ, ಸ್ಥಾಯಿ ಸಮಿತಿಯ ಅಧ್ಯಕ್ಷರು, ಕಾರ್ಪೊರೇಟರ್‌ಗಳು ಉಪಸ್ಥಿತರಿದ್ದರು



