ಮಂಗಳೂರು, ಅ.01 : ಕೇಂದ್ರ ಸರಕಾರದ ಸ್ಮಾರ್ಟ್ ಸಿಟಿ ಯೋಜನೆಯ ಪ್ರಥಮ 20ರಲ್ಲಿ ಮಂಗಳೂರು ಆಯ್ಕೆಯಾಗುವ ನಿಟ್ಟಿನಲ್ಲಿ ಪೂರಕವಾಗಿ ಅ.4ರಂದು ಸಂಜೆ 5ಕ್ಕೆ ಮಂಗಳೂರು ಮಿನಿ ವಿಧಾನ ಸೌಧ (ಮಂಗಳೂರು ತಾಪಂ ಕಚೇರಿ ಸಮೀಪ) ಎದುರು ಸಾರ್ವಜನಿಕ ಸಂವಾದ ಕಾರ್ಯಕ್ರಮವನ್ನು ಆಯೋಜಿಸಿರುವುದಾಗಿ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ತಿಳಿಸಿದರು.
ಸ್ಮಾರ್ಟ್ ಸಿಟಿ ಯೋಜನೆಯ ಕುರಿತಂತೆ ಸುದ್ದಿಗೋಷ್ಠಿ ಯಲ್ಲಿ ಈ ಮಾಹಿತಿ ನೀಡಿದ ಅವರು, ಸಾರ್ವಜನಿಕರು ಅಧಿಕ ಸಂಖ್ಯೆಯಲ್ಲಿ ಭಾಗವಹಿಸಿ ಪ್ರಥಮ 20ರಲ್ಲೇ ಮಂಗಳೂರು ಆಯ್ಕೆಗೆ ಪೂರಕವಾಗುವಂತೆ ನಗರದ ಅಭಿವೃದ್ಧಿ ಕುರಿತು ಸಲಹೆ ನೀಡುವಂತೆ ಕರೆ ನೀಡಿದರು. ಸ್ಮಾರ್ಟ್ ಸಿಟಿ ಯೋಜನೆಯ ಕುರಿತು ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸುವ ನಿಟ್ಟಿನಲ್ಲಿ ತೆರೆಯಲಾದ ವೆಬ್ಸೈಟ್ಗೆ ಇದುವರೆಗೆ 300 ಮಂದಿಯಿಂದ ಮಾತ್ರ ಅಭಿಪ್ರಾಯ ವ್ಯಕ್ತವಾಗಿದೆ.
ದೇಶದಲ್ಲಿ ಸ್ಮಾರ್ಟ್ ಸಿಟಿ ಯೋಜನೆಗೆ ಸಂಬಂಧಿಸಿ ಸಾರ್ವಜನಿಕ ಅಭಿಪ್ರಾಯ ಸಂಗ್ರಹದಲ್ಲಿ ಮಂಗಳೂರು 3ನೆ ಸ್ಥಾನದಲ್ಲಿದೆ. ಯೋಜನೆಗೆ ಸಂಬಂಧಿಸಿ ಸಾರ್ವಜನಿಕರ ಭಾಗವಹಿಸುವಿಕೆ ಅತೀ ಪ್ರಮುಖ ಎಂದು ಜಿಲ್ಲಾಧಿಕಾರಿ ಎ.ಬಿ. ಇಬ್ರಾಹೀಂ ಅಭಿಪ್ರಾಯಿಸಿದರು. ಮಂಗಳೂರು ಸ್ಮಾರ್ಟ್ ಸಿಟಿಗೆ ಸಂಬಂಧಿಸಿ ಮುಂದಿನ ಅಭಿವೃದ್ಧಿಗೆ ಪೂರಕವಾದ ಪ್ರಸ್ತಾವನೆಯನ್ನು ಡಿ.15ರೊಳಗೆ ಕೇಂದ್ರ ಸರಕಾರಕ್ಕೆ ಸಲ್ಲಿಸಬೇಕಾಗಿದೆ.
ಸಾರ್ವಜನಿಕರ ಭಾಗವಹಿಸುವಿಕೆಯಿಂದ ಕೂಡಿದ ನಗರದ ಸುಸ್ಥಿರ ಹಾಗೂ ಸಮಗ್ರ ಅಭಿವೃದ್ಧಿ ಸ್ಮಾರ್ಟ್ ಸಿಟಿ ಪರಿಕಲ್ಪನೆಯಲ್ಲಿ ಅಡಕವಾಗಿದೆ ಎಂದು ಮಂಗಳೂರು ಮಹಾನಗರ ಪಾಲಿಕೆಯ ಸ್ಮಾರ್ಟ್ ಸಿಟಿ ಯೋಜನೆಯ ಸಮಾಲೋಚಕ ದಿಲೀಪ್ಕುಮಾರ್ ಮಾಹಿತಿ ನೀಡಿದರು.

