ಸುರತ್ಕಲ್, ಅ.1: ಎನ್‌ಐಟಕೆ ಸಮೀಪ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಟೋಲ್‌ಗೇಟ್‌ನಲ್ಲಿ ಅ.1ರಿಂದ ಟೋಲ್ ಸಂಗ್ರಹಿಸಲು ಸಜ್ಜಾಗಿರುವಂತೆಯೇ ಟೋಲ್ ಗೇಟ್ ತೆರವುಗೊಳಿಸಬೇಕೆಂದು ಆಗ್ರಹಿಸಿ ಸುರತ್ಕಲ್ ನಾಗರಿಕ ಸಮಿತಿ ನೇತೃತ್ವದಲ್ಲಿ ರಾಜಕೀಯ ಮುಖಂಡರು, ಡಿವೈಎಫ್‌ಐ ಸೇರಿದಂತೆ ಹಲವು ಜನಪರ ಸಂಘಟನೆಗಳು ಹಾಗೂ ಹಳೆಯಂಗಡಿ, ಮುಕ್ಕ, ಸುರತ್ಕಲ್ ನಾಗರಿಕರು ಬುಧವಾರ ಎನ್‌ಐಟಿಕೆ ಬಳಿ ಹೆದ್ದಾರಿ ತಡೆದು ಧರಣಿ ನಡೆಸಿದರು.
ಈ ವೇಳೆ ಮಾತನಾಡಿದ ಶಾಸಕ ಮೊಯ್ದಿನ್ ಬಾವ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅವೈಜ್ಞಾನಿಕವಾಗಿ ಕಾಮಗಾರಿ ನಡೆಸಿ, ಇದೀಗ ಹೈಕೋರ್ಟ್‌ನ ಆದೇಶ ವನ್ನು ತಪ್ಪಾಗಿ ಅರ್ಥೈಸಿಕೊಂಡು ಸಾರ್ವಜನಿಕರ ಹಗಲು ದರೋಡೆಗೆ ಮುಂದಾಗಿದೆ. ಸದ್ಯ ಹೈಕೋರ್ಟ್ ಕೇವಲ ಟೋಲ್‌ಗೇಟ್ ನಿರ್ಮಾಣಕ್ಕೆ ಮಾತ್ರ ಅನು ಮತಿ ಸೂಚಿಸಿದ್ದು, ಟೋಲ್ ಸಂಗ್ರಹಕ್ಕಲ್ಲ. ಇದು ಕಾನೂನು ಬಾಹಿರ ವಸೂಲಿಯಾಗಿರುವ ಕಾರಣ ಇದು ಟೋಲ್ ಸಂಗ್ರಹವಲ್ಲ, ಹಫ್ತಾ ವಸೂಲಿ ಎಂದು ಟೀಕಿಸಿದರು.
ಬಿ.ಸಿ.ರೋಡ್‌ನಿಂದ ಎನ್‌ಐಟಿಕೆವರೆಗಿನ ಚುತು ಷ್ಪಥ ಕಾಮಗಾರಿ 2005ರಲ್ಲಿ ಆರಂಭಗೊಂಡಿದ್ದು ಈವರೆಗೂ ಪೂರ್ಣಗೊಂಡಿಲ್ಲ. ಅವೈಜ್ಞಾನಿಕ ರೀತಿ ಯಲ್ಲಿ ಕಾಮಗಾರಿ ನಡೆಸಿರುವ ಗುತ್ತಿಗೆದಾರರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಕಾನೂನಿನಂತೆ ಕನಿಷ್ಠ 6 ಪಥಗಳ ಟೋಲ್ ಸಂಗ್ರಹ ಕೇಂದ್ರ, ಮೂಲಭೂತ ಸೌಕರ್ಯಗಳಾದ ಚರಂಡಿ, ಶೌಚಾಲಯ, ವಿಶ್ರಾಂತಿ ಕೊಠಡಿ, ಬೃಹತ್ ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ ಇದ್ಯಾವುದನ್ನು ಕಲ್ಪಿಸದೆ ತರಾತುರಿಯಲ್ಲಿ ಟೋಲ್ ಸಂಗ್ರಹಕ್ಕೆ ಮುಂದಾಗಿರುವುದು ಕಾನೂನುಬಾಹಿರ ಎಂದರು.
ಪ್ರತಿ ಟೋಲ್‌ಗೇಟ್‌ಗೆ ಕನಿಷ್ಠ 60 ಕಿ.ಮೀ. ಅಂತರ ಕಾಯ್ದ್ದುಕೊಳ್ಳಬೇಕೆಂಬ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ನಿರ್ದೇಶನಗಳನ್ನು ಗಾಳಿಗೆ ತೂರಿ ಅವೈಜ್ಞಾನಿಕ ರೀತಿಯಲ್ಲಿ ತರಾತುರಿಯಲ್ಲಿ ನಿರ್ಮಿ ಸಿರುವ ಟೋಲ್‌ಗೇಟ್‌ನಿಂದ ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ಹೆಚ್ಚಿನ ತೊಂದರೆಗಳಾಗಲಿದೆ. ಕಾನೂನುಬಾಹಿರವಾಗಿ ನಿರ್ಮಿಸಿರುವ ಟೋಲ್‌ಗೇಟನ್ನು ಶೀಘ್ರ ಕಿತ್ತೊಗೆಯಬೇಕಿದೆ. ಟೋಲ್ ಗೇಟ್ ಗುತ್ತಿಗೆದಾರರೊಂದಿಗೆ ಸಹಕರಿಸಿರುವ ಸಂಸದರು, ರಾಜಕೀಯ ನೇತಾರರಿಗೆ ಬಹಿಷ್ಕಾರ ಹಾಕುವ ಜೊತೆಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಎಸ್‌ಡಿಪಿಐ ಮಾಜಿ ಜಿಲ್ಲಾ ಧ್ಯಕ್ಷ ಅಬೂಬಕರ್ ಕುಳಾಯಿ ತಿಳಿಸಿದರು.
ಟೋಲ್‌ಗೇಟ್ ಹೆಸರಿನಲ್ಲಿ ಸಾರ್ವಜನಿಕರ ರಕ್ತ ಹೀರುವ ಕೆಲಸವಾಗುತ್ತಿದೆ. ಸ್ಥಳೀಯ ಒಂದು ಗುಂಪು ಈ ವಿಚಾರದಲ್ಲಿಯೂ ರಾಜಕೀಯ ಮಾಡು ತ್ತಿದೆ. ಆದರೆ ಈ ವಿಚಾರದಲ್ಲಿ ಜನರ ತೀರ್ಪೇ ಅಂತಿಮ ಎಂದ ಬೆಳಪು ದೇವಿ ಪ್ರಸಾದ್ ಶೆಟ್ಟಿ, ಇದು ಕೇವಲ ಸಾಂಕೇತಿಕ ಪ್ರತಿಭಟನೆಯಷ್ಟೇ. ಟೋಲ್ ಸಂಗ್ರಹಕ್ಕೆ ಮುಂದಾದಲ್ಲಿ ಉಗ್ರ ಹೋರಾಟ ಸಂಘಟಿಸ ಲಾಗುವುದು ಎಂದು ಎಚ್ಚರಿಸಿದರು.
ಡಿವೈಎಫ್‌ಐ ನಗರಾಧ್ಯಕ್ಷ ಇಮ್ತಿಯಾಝ್, ಯುವ ಕಾಂಗ್ರೆಸ್ ದ.ಕ. ಅಧ್ಯಕ್ಷ ಮಿಥುನ್ ರೈ ಮಾತನಾಡಿದರು.
ಮುಕ್ಕ ಪೇಟೆಯಿಂದ ಟೋಲ್‌ಗೇಟ್ ಗುತ್ತಿಗೆದಾರ ರಿಗೆ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಧಿಕ್ಕಾರ ಕೂಗುತ್ತಾ ಸಾಗಿಬಂದ ರ್ಯಾಲಿ ಎನ್‌ಐಟಿಕೆ ಟೋಲ್‌ಗೇಟ್ ಬಳಿ ಸಮಾವೇಶಗೊಂಡಿತು. ಇದರಿಂದ ಸುಮಾರು 1:30 ಗಂಟೆಗಳ ಕಾಲ ರಾಷ್ಟ್ರೀಯ ಹೆದ್ದಾರಿ ಬಂದ್ ಆಗಿದ್ದು, ಸಂಚಾರ ಅಸ್ತವ್ಯಸ್ತಗೊಂಡಿತ್ತು.
ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಉಪಮೇಯರ್ ಪುರುಷೋತ್ತಮ ಚಿತ್ರಾಪುರ, ನಾಗರಿಕ ಸಮಿತಿಯ ಅಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ, ಸ್ಥಳೀಯ ಕಾರು, ರಿಕ್ಷಾ ಚಾಲಕ ಮಾಲಕರ ಸಂಘ ಅಲ್ಲದೇ ಹಳೆಯಂಗಡಿ, ಮುಕ್ಕ, ಸುರತ್ಕಲ್‌ನ ನಾಗರಿಕರು ಸೇರಿದಂತೆ ಭಾರೀ ಸಂಖ್ಯೆಯಲ್ಲಿ ಜನರು ಭಾಗವಹಿಸಿದ್ದರು. ಈ ವೇಳೆ ಪೊಲೀಸರು ಬಿಗಿ ಭದ್ರತೆ ವ್ಯವಸ್ಥೆ ಕಲ್ಪಿಸಿದ್ದರು.
ಧರಣಿಯಲ್ಲಿ ಕೇಳಿಬಂದ ಆಗ್ರಹ :
ಅವೈಜ್ಞಾನಿಕ, ಕಾನೂನುಬಾಹಿರ ಟೋಲ್‌ಗೇಟ್ ಕಿತ್ತೊಗೆಯಬೇಕು / ಶಿೀಘ್ರವೇ ಪರಿಪೂರ್ಣ ರಾ.ಹೆದ್ದಾರಿ ನಿರ್ಮಾಣ ಮಾಡಬೇಕು / ಹೆದ್ದಾರಿ ಕಾಮಗಾರಿ ಮುಗಿಸಲು ಗಡುವು ನಿಗದಿಪಡಿಸಬೇಕು.
ಟೋಲ್ ಸಂಗ್ರಹಕ್ಕೆ ಒಂದು ವಾರ ತಡೆ ನೀಡಿದ ಜಿಲ್ಲಾಧಿಕಾರಿ
ಪ್ರಸ್ತಾವಿತ ಸುರತ್ಕಲ್ ಟೋಲ್‌ಗೇಟ್‌ನಲ್ಲಿ ಅ.1ರಿಂದ 7 ದಿನಗಳ ಕಾಲ ಟೋಲ್ ಸಂಗ್ರಹ ತಡೆ ಹಿಡಿಯಲಾಗಿದೆ ಎಂದು ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ವರದಿ ಕೃಪೆ : ವಾಭಾ











