ಎಚ್.ಡಿ. ಕೋಟೆ (ಮೈಸೂರು ಜಿಲ್ಲೆ): ಕಬಿನಿ ಜಲಾಶಯದಿಂದ ತಮಿಳುನಾಡಿಗೆ ನೀರು ಹರಿಸುತ್ತಿರುವುದನ್ನು ಖಂಡಿಸಿ, ಜಲಾಶಯದ ಸಮೀಪ ನುಗ್ಗಲು ಯತ್ನಿಸಿದ ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿದ ಘಟನೆ ತಾಲ್ಲೂಕಿನ ಬೀಚನಹಳ್ಳಿಯಲ್ಲಿ ಶುಕ್ರವಾರ ನಡೆದಿದೆ.
ರೈತ ಸಂಘ, ಹಸಿರು ಸೇನೆ ಮತ್ತು ವಿವಿಧ ಕನ್ನಡಪರ ಸಂಘಟನೆಗಳು ಬಡಗಲಪುರ ನಾಗೇಂದ್ರ ನೇತೃತ್ವದಲ್ಲಿ ತಾಲ್ಲೂಕಿನ ಬೀಚನಹಳ್ಳಿ ಗ್ರಾಮದಲ್ಲಿರುವ ಕಬಿನಿ ಜಲಾಶಯದ ಕಾರ್ಯನಿರ್ವಹಣಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನಾ ಸ್ಥಳಕ್ಕೆ ಬಂದ ಜಲಾಶಯದ ಕಾರ್ಯಪಾಲಕ ಎಂಜಿನಿಯರ್ ಮೋಹನ್‌ಕುಮಾರ್ ಅವರು ‘ನೀರು ನಿಲುಗಡೆ ಸಾಧ್ಯವಿಲ್ಲ’ ಎಂದರು. ಇದರಿಂದ ಸಿಟ್ಟಿಗೆದ್ದ ರೈತರು ಜಲಾಶಯಕ್ಕೆ ನುಗ್ಗಲು ಪ್ರಯತ್ನಿಸಿದರು. ಆಗ ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿ ವಾಹನದಲ್ಲಿ ಕರೆದೊಯ್ದರು.
ಪ್ರತಿಭಟನೆಯಲ್ಲಿ ಕನ್ನಡ ಪರ ಹೋರಾಟಗಾರರಾದ ಶಿವಶಂಕರ್, ತಾಲ್ಲೂಕಿನ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಮಾಗುಡಿಲು ರವಿಕುಮಾರ್, ಯಡತೊರೆಪಾಳ್ಯದ ಸ್ವಾಮಿ ಬೋಯಿ, ಶ್ರೀಕಂಠೇರಾಜೇ ಅರಸ್, ಡೈರಿ ವೆಂಕಟೇಶ್, ಭಾನು ಮೋಹನ್, ಸುರೇಶ್ ಬಾಬು, ರೈತರಾದ ಬಸವರಾಜು, ಚೌಡಹಳ್ಳಿ ಜವರಯ್ಯ, ಚಿಕ್ಕಣ್ಣ, ಪುಟ್ಟಪ್ಪ, ಶಿವಲಿಂಗಯ್ಯ, ಚಂದ್ರಶೇಖರ್, ತುಂಗ, ಕುಮಾರ್ ಇದ್ದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಭಿನವ್ ಖರೆ, ಡಿವೈಎಸ್ಪಿ ಜಯರಾಮ್, ಇನ್‌ಸ್ಪೆಕ್ಟರ್ ಮೂರ್ತಿ ರಾವ್, ಪ್ರಸನ್ನಕುಮಾರ್, ಸಬ್‌ಇನ್‌ಸ್ಪೆಕ್ಟರ್‌ಗಳಾದ ಬಾಲಕೃಷ್ಣ, ಸುರೇಶ್ ಮತ್ತು ಸಿಬ್ಬಂದಿ ಬಂದೋಬಸ್ತ್ ಒದಗಿಸಿದ್ದರು.
ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಬಡಗಲಪುರ ನಾಗೇಂದ್ರ ಮಾತನಾಡಿ, ಅತ್ಯಂತ ಭೀಕರ ಬರಗಾಲದಲ್ಲೂ ರಾಜ್ಯದ ಜನರಿಗೆ ಅನ್ಯಾಯವೆಸಗಿ, ಕೇವಲ ಕುರ್ಚಿ ವ್ಯಾಮೋಹದಿಂದ ತಮಿಳುನಾಡಿಗೆ ನೀರು ಹರಿಸಲಾಗುತ್ತಿದೆ. ನೀರು ಬಿಡುವು ದನ್ನು ಕೂಡಲೇ ಸ್ಥಗಿತಗೊಳಿಸದಿದ್ದರೆ ಸರ್ಕಾರದ ಕುರ್ಚಿಗೆ ಕಂಟಕವಾಗಲಿದೆ. ಒಣಗುತ್ತಿರುವ ಫಸಲನ್ನು ಉಳಿಸಿ ಕೊಳ್ಳದ ಪರಿಸ್ಥಿತಿಯಲ್ಲಿ ನಾವಿದ್ದೇವೆ. ಮುಖ್ಯವಾಗಿ ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗೂ ತತ್ವಾರ ಉಂಟಾ ಗುವ ಸಂಭವವಿದೆ. ಆದರೂ ನಮ್ಮ ಜಲಾಶಯಗಳಿಂದ ತಮಿಳುನಾಡಿಗೆ ನೀರು ಬಿಡುತ್ತಿರುವ ರಾಜ್ಯ ಸರ್ಕಾರದ ನಿಲುವು ಸರಿಯಲ್ಲ ಎಂದರು.