ಕರ್ನಾಟಕ

ನಾರಂಗ್ ವರದಿ ನಂತರವೂ ಸುಲಿಗೆ ಯತ್ನ!

Pinterest LinkedIn Tumblr

LOKAyukta-boardಬೆಂಗಳೂರು: ಲೋಕಾಯುಕ್ತ ಸಂಸ್ಥೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಲೋಕಾಯುಕ್ತ ಬೆಂಗಳೂರು ಎಸ್‌ಪಿ ಸೋನಿಯಾ ನಾರಂಗ್‌ ವರದಿ ಸಲ್ಲಿಸಿದ ನಂತರವೂ ಅಲ್ಲಿ ಭ್ರಷ್ಟಾಚಾರ ನಡೆದಿದೆ! ವಿಶೇಷ ತನಿಖಾ ತಂಡ (ಎಸ್‌ಐಟಿ) ನಡೆಸುತ್ತಿರುವ ತನಿಖೆ ವೇಳೆ ಈ ಸಂಗತಿ ಬೆಳಕಿಗೆ ಬಂದಿದೆ.

ಕಾರ್ಯನಿರ್ವಾಹಕ ಎಂಜಿನಿಯರ್‌ ಎಂ.ಎನ್. ಕೃಷ್ಣಮೂರ್ತಿ ಅವರಿಂದ ಲೋಕಾಯುಕ್ತ ಕಚೇರಿಯಲ್ಲಿ ₹  1 ಕೋಟಿ ಲಂಚ ಕೇಳಿದ ಘಟನೆ ನಡೆದಿದ್ದು ಮೇ 4ರಂದು. ಈ ಬಗ್ಗೆ ಸೋನಿಯಾ ನಾರಂಗ್ ಅವರು ವರದಿ ಸಲ್ಲಿಸಿದ್ದು ಮೇ 11ರಂದು. ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯತ್‌ ಕಚೇರಿಯಲ್ಲಿ ಸಹಾಯಕ ಎಂಜಿನಿಯರ್‌ ಆಗಿರುವ ಎಂ.ಬಿ. ನಾಗರಾಜು ಅವರಿಂದ ಹಣ ಕೀಳಲು ಮೇ 20ರಂದು ಪ್ರಯತ್ನ ನಡೆದಿತ್ತು!

ನಾಗರಾಜು ಅವರ ಮೊಬೈಲ್‌ ದೂರವಾಣಿಗೆ ಮೇ 20ರಂದು ಕರೆ ಮಾಡಿದ ವ್ಯಕ್ತಿ, ‘ನಾನು ಲೋಕಾಯುಕ್ತ ಪೊಲೀಸ್‌ ಇನ್‌ಸ್ಪೆಕ್ಟರ್‌ ಕೃಷ್ಣಪ್ಪ. ನಿಮ್ಮ ವಿರುದ್ಧ ದೂರು ಬಂದಿದೆ, ತಕ್ಷಣ ಲೋಕಾಯುಕ್ತ ಕಚೇರಿಗೆ ಬನ್ನಿ’ ಎಂದರು. ‘ಕೆಲಸದಲ್ಲಿ ತೊಡಗಿದ್ದೇನೆ. ನಾಳೆ ಬರುತ್ತೇನೆ’ ಎಂದು ನಾಗರಾಜು ಹೇಳಿದರು.

ಆದರೂ, ನಾಗರಾಜು ಅವರಿಗೆ ನಾಲ್ಕೈದು ಬಾರಿ ಕರೆ ಮಾಡಿದ ಈ ವ್ಯಕ್ತಿ ಅವತ್ತೇ ಬರಬೇಕು ಎಂದು ಒತ್ತಡ ಹೇರಿದರು. ಸ್ನೇಹಿತರೊಬ್ಬರ ಜೊತೆ ಲೋಕಾಯುಕ್ತ ಕಚೇರಿಗೆ ಮಧ್ಯಾಹ್ನ 3.30ಕ್ಕೆ ಬಂದ ನಾಗರಾಜು ಅವರು ತಮಗೆ ಕರೆ ಬಂದಿದ್ದ ಮೊಬೈಲ್‌ ದೂರವಾಣಿ ಸಂಖ್ಯೆಗೆ ಕರೆ ಮಾಡಿದರು ಎಂಬ ವಿವರ ಎಸ್‌ಐಟಿ ಸಲ್ಲಿಸಿರುವ ಮೊದಲನೆಯ ದೋಷಾರೋಪ ಪಟ್ಟಿಯಲ್ಲಿದೆ.

ಇನ್‌ಸ್ಪೆಕ್ಟರ್‌ ಕೃಷ್ಣಪ್ಪ ಎಂದು ಪರಿಚಯಿಸಿಕೊಂಡಿದ್ದ ವ್ಯಕ್ತಿ ಇನ್ನೊವಾ ಕಾರಿನಲ್ಲಿ ಬಂದರು. ನಾಗರಾಜು ಅವರನ್ನು ಕಾರಿಗೆ ಹತ್ತಿಸಿಕೊಂಡರು. ಆಗ ಜೀನ್ಸ್‌ ಪ್ಯಾಂಟ್‌, ಟೀಶರ್ಟ್‌ ಧರಿಸಿದ್ದ ವ್ಯಕ್ತಿಯೊಬ್ಬರು ಲೋಕಾಯುಕ್ತ ಕಚೇರಿಯಿಂದ ಬಂದು ಅದೇ ಕಾರಿನಲ್ಲಿ ಕುಳಿತರು. ನಾಗರಾಜು ಅವರನ್ನು ತಾಜ್‌ ವೆಸ್ಟೆಂಡ್‌ ಹೋಟೆಲ್‌ಗೆ ಕರೆದೊಯ್ಯಲಾಯಿತು.

ಕೃಷ್ಣಪ್ಪ ಎಂದು ಹೇಳಿಕೊಂಡಿದ್ದ ವ್ಯಕ್ತಿ ಅಲ್ಲಿ, ‘ನಿಮ್ಮ ವಿರುದ್ಧ  ದೂರು ಬಂದಿದೆ. ನೀವು ಸಿಕ್ಕಾಪಟ್ಟೆ ಆಸ್ತಿ ಸಂಪಾದಿಸಿದ್ದೀರಿ. ನಿಮ್ಮನ್ನು ಶೀಘ್ರದಲ್ಲೇ ಬಂಧಿಸುತ್ತೇವೆ. ನಮಗೆ ದೊಡ್ಡವರ ಪರಿಚಯ ಇದೆ. ನೀವು ಎಷ್ಟು ಹಣ ಕೊಡಬಲ್ಲಿರಿ, ನಿಮ್ಮನ್ನು ಉಳಿಸುತ್ತೇವೆ’ ಎಂದರು.

ಎಷ್ಟು ಹಣ ಕೊಡಲು ಸಾಧ್ಯ ಎಂಬುದನ್ನು ನಂತರ ತಿಳಿಸುವುದಾಗಿ ನಾಗರಾಜು ಹೇಳಿದರು. ನಾಗರಾಜು ಅವರಿಗೆ ಮೂರು ದಿನಗಳ ನಂತರ ಮತ್ತೆ ಕರೆ ಮಾಡಿದ ಇನ್‌ಸ್ಪೆಕ್ಟರ್‌ ಕೃಷ್ಣಪ್ಪ ಹೈಕೋರ್ಟ್‌ ಬಳಿ ಬರುವಂತೆ ಸೂಚಿಸಿದರು. ಅಲ್ಲಿಗೆ ಹೋದಾಗ, ಕೃಷ್ಣಪ್ಪ ಮೊಬೈಲ್‌ ಕೊಟ್ಟು ಒಬ್ಬರ ಬಳಿ ಮಾತನಾಡುವಂತೆ ನಾಗರಾಜು ಹೇಳಿದರು.

ಅತ್ತ ಕಡೆಯಿಂದ ಮಾತನಾಡಿದ ವ್ಯಕ್ತಿ, ‘₹ 5 ಲಕ್ಷ ಕೊಡದಿದ್ದರೆ ನಿಮ್ಮ ಮನೆ ಮೇಲೆ ಲೋಕಾಯುಕ್ತ ದಾಳಿ ನಡೆಯುತ್ತದೆ’ ಎಂದು ಬೆದರಿಸಿದರು.
ಒಂದೆರಡು ದಿನಗಳ ನಂತರ ಮತ್ತೆ ಆ ವ್ಯಕ್ತಿ ಕರೆ ಮಾಡಿದರು. ‘ನಿಮ್ಮ ಬಗ್ಗೆ ಮನೆಯಲ್ಲಿ ಎಲ್ಲರಿಗೂ ತಿಳಿಸಿದ್ದೇನೆ. ಇನ್ನೊಮ್ಮೆ ನೀವು ಕರೆ ಮಾಡಿದರೆ ನಿಮ್ಮ ವಿರುದ್ಧ ದೂರು ಕೊಡಬೇಕಾಗುತ್ತದೆ’ ಎಂದು ನಾಗರಾಜು ಗಟ್ಟಿಯಾಗಿ ಹೇಳಿದರು.

ಮಾರನೆಯ ದಿನ ಮತ್ತೆ ಕರೆ ಮಾಡಿದ ಕೃಷ್ಣಪ್ಪ, ‘ನೀವು ಬಹಳ ಒಳ್ಳೆಯವರು. ನೈಸ್‌ ರಸ್ತೆ ಜಂಕ್ಷನ್ ಬಳಿ ಬನ್ನಿ. ಕಾಫಿ ಕುಡಿಯೋಣ’ ಎಂದರು. ಅಲ್ಲಿಗೆ ಹೋದ ನಾಗರಾಜು ಅವರಿಗೆ, ‘ನೀವು ದುಡ್ಡು ಕೊಡುವುದು ಬೇಡ. ಆದರೆ, ನಾನು ಕರೆ ಮಾಡಿದ್ದ ಸಂಗತಿಯನ್ನು ಯಾರಿಗೂ ತಿಳಿಸಬೇಡಿ. ನೀವೂ ನಮ್ಮವರೇ’ ಎಂದರು.

ಕೃಷ್ಣಪ್ಪ ಎಂದು ಹೇಳಿಕೊಂಡು ಕರೆ ಮಾಡಿದ್ದ, ಭೇಟಿಯಾಗಿದ್ದ ವ್ಯಕ್ತಿ ಶಂಕರೇಗೌಡ ಎಂದು ನಾಗರಾಜು ಗುರುತಿಸಿದ್ದಾರೆ. ಕೃಷ್ಣಮೂರ್ತಿ ಅವರಿಗೆ ಲಂಚ ಕೇಳಿದ ಪ್ರಕರಣದಲ್ಲಿ ಶಂಕರೇಗೌಡ ಅವರನ್ನು ಎಸ್‌ಐಟಿ ಬಂಧಿಸಿತ್ತು.

Write A Comment