ಕರ್ನಾಟಕ

ಗುಂಪು ಘರ್ಷಣೆಗೆ ನಲುಗಿದ ಮುಧೋಳ

Pinterest LinkedIn Tumblr

fireಮುಧೋಳ (ಬಾಗಲಕೋಟೆ): ಕ್ಷುಲ್ಲಕ ಕಾರಣಕ್ಕೆ ದುಷ್ಕರ್ಮಿಗಳು ಒಂದು ಗುಂಪಿಗೆ ಸೇರಿದವರ ಮನೆ, ಅಂಗಡಿ–ಮುಂಗಟ್ಟು ಮತ್ತು ವಾಹನಗಳಿಗೆ ಬೆಂಕಿ ಹಚ್ಚಿ ಸುಟ್ಟು ಹಾಕಿದ ಘಟನೆ ಮುಧೋಳ ಪಟ್ಟಣದಲ್ಲಿ ಬುಧವಾರ ರಾತ್ರಿ ನಡೆದಿದ್ದು, ತ್ವೇಷಮಯ ವಾತಾವರಣ ಮನೆಮಾಡಿದೆ.

ಪೊಲೀಸರು ಒಟ್ಟು 69 ಜನರನ್ನು ಬಂಧಿಸಿದ್ದು, ಪರಿಸ್ಥಿತಿ ನಿಯಂತ್ರಣಕ್ಕೆ ಬರುವವರೆಗೂ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಇಲ್ಲಿನ ಜನತಾ ಹೌಸಿಂಗ್‌ ಕಾಲೋನಿಯಲ್ಲಿ ಪ್ರತಿಷ್ಠಾಪಿಸಲಾಗಿದ್ದ ಗಣೇಶನ ಮೂರ್ತಿ ಮೆರವಣಿಗೆ ಸಾಗುತ್ತಿದ್ದಾಗ ಪ್ರಾರ್ಥನಾ ಮಂದಿರವೊಂದರ ಬಳಿ ಮೆರವಣಿಗೆ ಮೇಲೆ ಕಲ್ಲು ತೂರಾಟ ನಡೆಯಿತು ಎನ್ನಲಾಗಿದೆ. ಇದರಿಂದ ಸಿಟ್ಟಿಗೆದ್ದ ಮೆರವಣಿಗೆಯಲ್ಲಿ ಸಾಗುತ್ತಿದ್ದವರು ಪ್ರತಿಯಾಗಿ ಕಲ್ಲು ಹಾಗೂ ಬಾಟಲಿಗಳನ್ನು ಪ್ರಾರ್ಥನಾ ಮಂದಿರ ಮತ್ತು ಸುತ್ತಮುತ್ತಲಿನ ಮನೆಗಳ ಮೇಲೆ ತೂರಿದರು. ಉದ್ರಿಕ್ತ ಗುಂಪು, ಜನತಾ ಕಾಲೋನಿಯಲ್ಲಿರುವ ಲೋಕೋಪಯೋಗಿ ವಸತಿ ಗೃಹಗಳ ಮೇಲೂ ಕಲ್ಲು ಹಾಗೂ ಬಾಟಲಿಗಳನ್ನು ತೂರಿತು.

ವಾಹನ ಸ್ಫೋಟಿಸಲು ಯತ್ನ: ಲೋಕೋಪಯೋಗಿ ವಸತಿ ಗೃಹಗಳ ಮುಂದೆ ನಿಲ್ಲಿಸಿದ್ದ ವಾಹನಗಳಿಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು, ಜೀಪೊಂದನ್ನು ಚಾಲು ಮಾಡಿ, ಅದಕ್ಕೆ ಬೆಂಕಿ ಹಚ್ಚಿ ಸಮೀಪದ ಮನೆಗಳಿಗೆ ಡಿಕ್ಕಿ ಹೊಡೆಸಿ ಸ್ಫೋಟಿಸಲು ಸಹ ಯತ್ನಿಸಿದ್ದಾರೆ. ತಕ್ಷಣ ಅಲ್ಲಿದ್ದ ಕೆಲವರು, ಹೊತ್ತಿ ಉರಿಯುತ್ತಾ ಸಾಗುತ್ತಿದ್ದ ಜೀಪು ಮುಂದಕ್ಕೆ ಚಲಿಸದಂತೆ ಅದರ ಚಕ್ರಗಳಿಗೆ ಕಲ್ಲುಗಳನ್ನು ಅಡ್ಡವಾಗಿ ಇಟ್ಟು ಭಾರಿ ಅನಾಹುತ ತಪ್ಪಿಸಿದ್ದಾರೆ.

Write A Comment