ಬೆಂಗಳೂರು: ಲೋಕಾಯುಕ್ತ ಭ್ರಷ್ಟಾಚಾರ ಪ್ರಕರಣದಲ್ಲಿ ಬಂಧಿತ ವಿ. ಭಾಸ್ಕರ್ ಮತ್ತು ಅಶೋಕ್ ಕುಮಾರ್ ಜೊತೆ ಹೈದರಾಬಾದ್‌ಗೆ ಹೋಗಿ ಬರಲು ಹಾನಗಲ್‌ನ ಕಾಂಗ್ರೆಸ್ ಶಾಸಕ ಮನೋಹರ ತಹಶೀಲ್ದಾರ ಹಾಗೂ ಅವರ ಆಪ್ತ ಶಿವಯೋಗಿ ಹಿರೇಮಠ ವಿಮಾನ ಟಿಕೆಟ್ ಖರೀದಿಸಿದ್ದರು.
ಈ ಸಂಗತಿ ಲೋಕಾಯುಕ್ತದಲ್ಲಿನ ಭ್ರಷ್ಟಾಚಾರ ಪ್ರಕರಣಗಳ ತನಿಖೆ ನಡೆಸುತ್ತಿರುವ ಎಸ್‌ಐಟಿ ಗಮನಕ್ಕೆ ಬಂದಿದೆ. ಅಶ್ವಿನ್ ರಾವ್ ಕಾಯಂ ನಿವಾಸ ಇರುವುದು ಹೈದರಾಬಾದ್‌ನಲ್ಲಿ.
ನಿಗಮ, ಮಂಡಳಿ ಅಧ್ಯಕ್ಷ ಸ್ಥಾನ ಭರವಸೆ ನೀಡಿದ್ದ ಅಶ್ವಿನ್ ರಾವ್
ಬೆಂಗಳೂರು: ‘ಮನೋಹರ ತಹಶೀಲ್ದಾರ, ಶಿವಯೋಗಿ ಹಿರೇಮಠ, ವಿ. ಭಾಸ್ಕರ್ ಮತ್ತು ಅಶೋಕ್ ಕುಮಾರ್ ಹೆಸರಿನಲ್ಲಿ ಕಳೆದ ಏಪ್ರಿಲ್ 5ರಂದು ಬೆಂಗಳೂರಿನಿಂದ ಹೈದರಾಬಾದ್‌ಗೆ, ಏಪ್ರಿಲ್ 6ರಂದು ಅಲ್ಲಿಂದ ಬೆಂಗಳೂರಿಗೆ ಬರಲು ವಿಮಾನ ಟಿಕೆಟ್ ಕಾಯ್ದಿರಿಸಲಾಗಿತ್ತು. ಟಿಕೆಟ್ ಮೊತ್ತ ₹50 ಸಾವಿರವನ್ನು ಶಿವಯೋಗಿ ಹಿರೇಮಠ ಪಾವತಿಸಿದ್ದರು’ ಎಂದು ಟಿಕೆಟ್ ಏಜೆಂಟರೊಬ್ಬರು ಎಸ್‌ಐಟಿಗೆ ಸಾಕ್ಷ್ಯ ಹೇಳಿದ್ದಾರೆ.
‘ಯಾವುದಾದರೂ ನಿಗಮ ಅಥವಾ ಮಂಡಳಿಯಲ್ಲಿ ಅಧ್ಯಕ್ಷ ಸ್ಥಾನ ಕೊಡಿಸುವುದಾಗಿ ಅಶ್ವಿನ್ ನನಗೆ ಭರವಸೆ ನೀಡಿದ್ದರು’ ಎಂದು ಶಿವಯೋಗಿ ಅವರು ಭ್ರಷ್ಟಾಚಾರ ಪ್ರಕರಣಗಳು ಬಹಿರಂಗಗೊಂಡ ನಂತರ ಹೇಳಿದ್ದರು.
‘ತಮ್ಮ ವಿರುದ್ಧ ದಾಖಲಾಗಿದ್ದ ದೂರು ರದ್ದು ಮಾಡಲು ಮನೋಹರ ತಹಶೀಲ್ದಾರ ಅವರು ಲೋಕಾಯುಕ್ತರ ಪುತ್ರ ಅಶ್ವಿನ್ ರಾವ್ ಪ್ರಭಾವ ಬಳಸಿದ್ದರು’ ಎಂಬ ದೂರು ಎಸ್‌ಐಟಿಗೆ ಸಲ್ಲಿಕೆಯಾಗಿದ್ದನ್ನು ಇಲ್ಲಿ ಸ್ಮರಿಸಬಹುದು.
ದೂರಿನಲ್ಲಿ ಏನಿತ್ತು?: ಹಾವೇರಿಯ ವಕೀಲ ಪಿ.ಎಸ್. ಹೆಬ್ಬಾಳ ಎಂಬುವವರು ಎಸ್‌ಐಟಿಗೆ ನೀಡಿರುವ ದೂರಿನಲ್ಲಿ, ‘ಮನೋಹರ ತಹಶೀಲ್ದಾರ ವಿರುದ್ಧದ ಪ್ರಕರಣವನ್ನು ಲೋಕಾಯುಕ್ತದ ಹಿಂದಿನ ರಿಜಿಸ್ಟ್ರಾರ್ ಎಚ್.ಆರ್. ದೇಶಪಾಂಡೆ ಅವಸರದಲ್ಲಿ ಮುಕ್ತಾಯಗೊಳಿಸಿದರು’ ಎಂದು ಆರೋಪಿಸಿದ್ದರು.
‘ಅಲ್ಲದೆ, ತಾಲ್ಲೂಕು ಪಂಚಾಯತ್ ನೌಕರ ಟಿ.ಎಚ್. ಗೆಜ್ಜಿಹಳ್ಳಿ ಎಂಬುವವರ ವಿರುದ್ಧ ದೂರು ನೀಡಿದಾಗ ನನ್ನನ್ನು ಹಲವು ಬಾರಿ ಸಂಪರ್ಕಿಸಿದ ಶಿವಯೋಗಿ ಹಿರೇಮಠ, ತನಗೆ ಅಶ್ವಿನ್ ರಾವ್ ಗೊತ್ತು; ದೂರಿನಿಂದ ಏನೂ ಆಗದು ಎಂದು ಹೇಳಿದ್ದರು’ ಎಂದು ಹೆಬ್ಬಾಳ ಎಸ್ಐಟಿಗೆ ತಿಳಿಸಿದ್ದರು.