ಬೆಂಗಳೂರು: ತಲೆ ಮೇಲೆ ಕಲ್ಲು ಎತ್ತಿ ಹಾಕಿ ಒಂದೂವರೆ ವರ್ಷದ ಗಂಡು ಮಗುವನ್ನು ಭೀಕರವಾಗಿ ಹತ್ಯೆಗೈದಿದ್ದ ಅಲ್ಲುಜ ಅಲಿಯಾಸ್ ಮೂರ್ತಿ (19), ಅದಕ್ಕೂ ಮೊದಲು ಆ ಮಗುವಿನ ಮೇಲೆ ಅಸಹಜ ಲೈಂಗಿಕ ಕ್ರಿಯೆ ನಡೆಸಿದ್ದ ಎಂಬ ಆಘಾತಕಾರಿ ಸಂಗತಿ ಮರಣೋತ್ತರ ಪರೀಕ್ಷೆಯಿಂದ ಹೊರ ಬಿದ್ದಿದೆ.
‘ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಮಾಡಲಾಗಿದ್ದು, ಲೈಂಗಿಕ ಕ್ರಿಯೆ ನಡೆದಿರುವುದನ್ನು ವೈದ್ಯರು ಖಚಿತಪಡಿಸಿದ್ದಾರೆ. ಅಲ್ಲದೇ, ಆರೋಪಿ ಮೂರ್ತಿ ಸಹ ಮಗುವಿನ ಮೇಲೆ ಲೈಂಗಿಕ ಕ್ರಿಯೆ ನಡೆಸಿದ್ದಾಗಿ ವಿಚಾರಣೆ ವೇಳೆ ಹೇಳಿಕೆ ಕೊಟ್ಟಿದ್ದಾನೆ’ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಇದೇ ಮೊದಲಲ್ಲ: ‘ತಮಿಳುನಾಡಿನ ಕೃಷ್ಣಗಿರಿ ಮೂಲದ ಮೂರ್ತಿ, ಎರಡು ವರ್ಷಗಳ ಹಿಂದೆ ನಗರಕ್ಕೆ ಬಂದಿದ್ದ. ಆರ್ಎಂಸಿ ಯಾರ್ಡ್ನಲ್ಲಿ ಬಿಸಾಡಿದ ತರಕಾರಿಗಳನ್ನು ಆಯ್ದು, ಅಂಗಡಿಗೆ ಮಾರಾಟ ಮಾಡುತ್ತಿದ್ದ. ಬಂದ ಹಣವನ್ನು ಮಾದಕ ವಸ್ತು ಹಾಗೂ ಮದ್ಯ ಖರೀದಿಗೆ ಬಳಸುತ್ತಿದ್ದ.
‘2014ರಲ್ಲಿ ಆರೋಪಿ, ಸಹಚರರ ಜತೆ ಸೇರಿ ಮನೆಯೊಂದರಲ್ಲಿ ಕಳ್ಳತನ ಮಾಡಿದ್ದ. ಆ ನಂತರ ಹಣ ಹಂಚಿಕೊಳ್ಳುವ ವಿಚಾರದಲ್ಲಿ ಪರಸ್ಪರರ ನಡುವೆ ಜಗಳವಾಗಿತ್ತು. ಆಗ ಮೂರ್ತಿ ಹಾಗೂ ಇತರರು, ಒಬ್ಬ ಸಹಚರರನನ್ನು ಕೊಂದಿದ್ದರು. ಮಾದಕ ವಸ್ತು ತಿಂದು ಮತ್ತಿನಲ್ಲಿದ್ದ ಮೂರ್ತಿ, ಕೊಲೆಯಾದ ಯುವಕನ ಮೇಲೆ ಲೈಂಗಿಕ ಕ್ರಿಯೆ ನಡೆಸಿದ್ದ. ಅಲ್ಲದೆ, ಗುದದ್ವಾರಕ್ಕೆ ಕಬ್ಬಿಣದ ಸರಳನ್ನು ತೂರಿಸಿ ಭೀಕರತೆ ಮೆರೆದಿದ್ದ’ ಎಂದು ಮಾಹಿತಿ ನೀಡಿದರು.
‘ಆ ಪ್ರಕರಣದಲ್ಲಿ ಮೂರು ಮಂದಿಯನ್ನು ಬಂಧಿಸಲಾಗಿತ್ತು. ಮೂರ್ತಿಗೆ ಆಗಿನ್ನು 17 ವರ್ಷವಾಗಿದ್ದ ಕಾರಣ ಆತನನ್ನು ಬಾಲಮಂದಿರಕ್ಕೆ ಕಳುಹಿಸಲಾಗಿತ್ತು. ಅಲ್ಲಿಂದ ಇದೇ ಸೆ.5ರಂದು ಬಿಡುಗಡೆಯಾಗಿದ್ದ ಆತ, ಮತ್ತೊಂದು ಹೀನಾಯ ಕೃತ್ಯ ಎಸಗಿದ್ದಾನೆ. ಮೂರ್ತಿಯನ್ನು ಸದ್ಯ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ’ ಎಂದರು.
ಬಿಡುಗಡೆಯಾದ ಬಳಿಕ ಮತ್ತೆ ಆರ್ಎಂಸಿ ಯಾರ್ಡ್ಗೆ ತೆರಳಿದ್ದ ಮೂರ್ತಿ, ಹತ್ತಿರದ ಬಾರ್ಗೆ ಹೋಗಿದ್ದ. ಅಲ್ಲಿ ಮಗುವಿನ ತಂದೆಯ ಪರಿಚಯವಾಗಿತ್ತು. ಕ್ರಮೇಣ ಪರಸ್ಪರರ ಗೆಳೆತನ ಗಟ್ಟಿಯಾಯಿತು. ಆರೋಪಿ ಒಂದೆರಡು ಬಾರಿ ಅವರ ಮನೆಗೆ ಹೋಗಿ ಬಂದಿದ್ದ. ಸೆ.13ರ ಮಧ್ಯಾಹ್ನ ಕೂಡ ಇಬ್ಬರೂ ಒಟ್ಟಿಗೆ ಮದ್ಯಪಾನ ಮಾಡಿದ್ದರು. ಆ ನಂತರ ಮಗುವಿನ ತಂದೆ ಊಟಕ್ಕೆಂದು ಮೂರ್ತಿಯನ್ನು ಮನೆಗೆ ಕರೆದುಕೊಂಡು ಹೋಗಿದ್ದರು. ಆಗ ಮನೆ ಅಂಗಳದಲ್ಲಿ ಆಟವಾಡುತ್ತಿದ್ದ ಮಗುವನ್ನು ಅಪಹರಿಸಿದ್ದ.
‘ಮಗುವನ್ನು ಅಪಹರಿಸಿ ಗೊರಗುಂಟೆಪಾಳ್ಯಕ್ಕೆ ಕರೆದುಕೊಂಡು ಬಂದೆ. ಕುಡಿದ ಮತ್ತಿನಲ್ಲಿ ಲೈಂಗಿಕ ಕ್ರಿಯೆ ನಡೆಸಿದೆ. ಮಗು ಅಳಲಾರಂಭಿಸಿದಾಗ ಟವೆಲ್ನಿಂದ ಬಾಯಿ ಮುಚ್ಚಿ ಉಸಿರುಗಟ್ಟಿಸಿದ್ದೆ. ನಂತರ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಂದೆ’ ಎಂದು ಮೂರ್ತಿ ಹೇಳಿಕೆ ಕೊಟ್ಟಿರುವುದಾಗಿ ಪೊಲೀಸರು ಮಾಹಿತಿ ನೀಡಿದರು.
