ಬೆಂಗಳೂರು, ಸೆ.9: ವಿದ್ಯುತ್ ಕ್ಷಾಮ ಇಡೀ ರಾಜ್ಯವನ್ನು ಆವರಿಸಿದೆ. ಹಿಂದೆಂದೂ ಇಂತಹ ಪರಿಸ್ಥಿತಿ ಜನರನ್ನು ಕಾಡಿರಲಿಲ್ಲ. ಸರ್ಕಾರದ ನಿರ್ಲಕ್ಷ್ಯ ಧೋರಣೆಯಿಂದ ರಾಜ್ಯದ ಜನತೆ ಕಾರ್ಗತ್ತಲಲ್ಲಿ ಕಾಲ ಕಳೆಯುವಂತಾಗಿದೆ. ವಿದ್ಯುತ್ ಅಭಾವದ ನೆಪವೊಡ್ಡಿ, ಬೆಂಗಳೂರಿನಲ್ಲಿ ನಿತ್ಯ 4 ಗಂಟೆ, ಗ್ರಾಮೀಣ ಭಾಗದಲ್ಲಿ ಸುಮಾರು 10 ಗಂಟೆ ಲೋಡ್ಶೆಡ್ಡಿಂಗ್ ಜಾರಿ ಮಾಡಿರುವುದರಿಂದ ಜನತೆ ಸರ್ಕಾರದ ವಿರುದ್ಧ ಬಹಿರಂಗವಾಗಿಯೇ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ನಗರ ವಾಸಿಗಳು, ಗ್ರಾಮೀಣರು, ರೈತಾಪಿ ವರ್ಗ, ಗೃಹಿಣಿಯರು ಹಾಗೂ ವಿದ್ಯಾರ್ಥಿ ಸಮುದಾಯದವರು ಸರ್ಕಾರಕ್ಕೆ `ಹಿಡಿಶಾಪ` ಹಾಕುತ್ತಿದ್ದಾರೆ.
ಬೆಂಗಳೂರಿನಲ್ಲಿ 3 ಗಂಟೆ ಇದ್ದ ಲೋಡ್ ಶೆಡ್ಡಿಂಗ್ ಇಂದಿನಿಂದ ನಾಲ್ಕು ಗಂಟೆಗೆ ವಿಸ್ತರಿಸಲಾಗಿದ್ದು, ಬೆಳಿಗ್ಗೆ, ಮಧ್ಯಾಹ್ನ ಸಂಜೆ ಹಾಗೂ ರಾತ್ರಿ ವೇಳೆ ತಲಾ ಒಂದೊಂದು ಗಂಟೆ ಕಡಿತ ಎಂದು ಅಧಿಕಾರಿಗಳು ತಿಳಿಸಿದ್ದರೂ, ಅದಕ್ಕಿಂತ ಹೆಚ್ಚಿನ ಅವಧಿಗೆ ವಿದ್ಯುತ್ ಸಂಪರ್ಕ ಕಡಿತ ಮಾಡಲಾಗುತ್ತಿದೆ.
ಇನ್ನು ಗ್ರಾಮೀಣ ಜನರ ಪಡಿಪಾಟಿಲು ದೇವರಿಗೆ ಪ್ರೀತಿ, ರೈತರು, ವಿದ್ಯುತ್ ಯಾವಾಗ ಬರುತ್ತದೆ ಎಂದು ತಲೆ ಮೇಲೆ ಕೈ ಇಟ್ಟುಕೊಂಡು ಕೂರುವ ಸ್ಥಿತಿ ಎದುರಾಗಿದೆ. ಗೃಹಿಣಿಯರು ಹಾಗೂ ವಿದ್ಯಾರ್ಥಿಗಳ ಗೋಳು ಕೇಳುವವರೇ ಇಲ್ಲವಾಗಿದೆ.
ಯಾವಾಗ ವಿದ್ಯುತ್ ಸಂಪರ್ಕ ಕಡಿತವಾಗುತ್ತೊ, ಯಾವಾಗ ಇರುತ್ತದೆಯೋ ಎಂಬ ಗೊಂದಲದಲ್ಲೇ ಜನತೆ ಕಾಲ ಕಳೆಯುವಂತಾಗಿದೆ.
ಒಂದೆಡೆ ಬರಗಾಲ, ಇನ್ನೊಂದೆಡೆ, ವಿದ್ಯುತ್ಗೂ ಬರ, ಇವೆರಡರ ಹೊಡೆತಕ್ಕೆ ಸಿಲುಕಿರುವ ಜನತೆ, ಕಂಡ ಕಂಡಲ್ಲಿ ಸರ್ಕಾರದ ವೈಫಲ್ಯ ಕುರಿತು ಚರ್ಚೆ ಮಾಡುವಂತಾಗಿದೆ. ಯಾವಾಗ ದಂಗೆ ಏಳುತ್ತಾರೋ ಎಂಬ ಸ್ಥಿತಿ ನಿರ್ಮಾಣವಾಗಿದೆ ಎಂದರೂ ಅತಿಶಯೋಕ್ತಿಯಾಗದು.
