ಕರ್ನಾಟಕ

ಯುವಜನತೆ ಮತ್ತು ಪ್ರಜಾತಂತ್ರಕ್ಕಾಗಿ ಅಂಬೇಡ್ಕರ್ ಅಭಿಯಾನ ಕಾರ್ಯಕ್ರಮ: ಸಂಪತ್ತಿನ ಅಸಮರ್ಪಕ ಹಂಚಿಕೆ ಪ್ರಜಾಪ್ರಭುತ್ವಕ್ಕೆ ಕಂಟಕ: ದೇವನೂರು

Pinterest LinkedIn Tumblr

devanoorumahadevaಬೆಂಗಳೂರು, ಸೆ.8: ದೇಶದಲ್ಲಿ ಸಂಪತ್ತು ಸಮರ್ಪಕವಾಗಿ ಹಂಚಿಕೆಯಾಗದಿರುವುದು ಮುಂದಿನ ದಿನಗಳಲ್ಲಿ ಪ್ರಜಾಪ್ರಭುತ್ವಕ್ಕೆ ಕಂಟಕವಾಗಲಿದೆ ಎಂದು ಹಿರಿಯ ಸಾಹಿತಿ ದೇವನೂರ ಮಹಾದೇವ ಅವರು ಕಳವಳ ವ್ಯಕ್ತಪಡಿಸಿದರು.
ಮಂಗಳವಾರ ನಗರದ ಸರಕಾರಿ ಕಲಾ ಕಾಲೇಜಿನಲ್ಲಿ ಅಂಬೇಡ್ಕರ್ ಅಧ್ಯಯನ ಕೇಂದ್ರ ಆಯೋಜಿಸಿದ್ದ ಯುವಜನತೆ ಮತ್ತು ಪ್ರಜಾತಂತ್ರಕ್ಕಾಗಿ ಅಂಬೇಡ್ಕರ್ ಅಭಿಯಾನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬಂಡವಾಳಗಾರರು ಬಂಡವಾಳ ಶಾಹಿಗಳಾಗಬೇಕೇ ಹೊರತು ಬಕಾಸುರರಲ್ಲ. ಬಂಡವಾಳಗಾರರಿಂದ ದೇಶದಲ್ಲಿಂದು ಶುದ್ಧ ಗಾಳಿ, ಕುಡಿಯುವ ನೀರು ಕಲುಷಿತವಾಗಿದ್ದು, ಅಂತರ್ಜಲದ ಮಟ್ಟ ಕುಸಿಯುತ್ತಿದೆ ಹಾಗೂ ಖನಿಜ ಸಂಪತ್ತು ಖಾಲಿಯಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಬಂಡವಾಳಗಾರರು ಲಾಭಕ್ಕಾಗಿ ದೇಶದ ಸಂಪನ್ಮೂಲಗಳನ್ನು ನಾಶ ಮಾಡುತ್ತಿದ್ದು, ತಮ್ಮ ಸ್ವಂತ ಹಿತಾಸಕ್ತಿಗಳಿಗಾಗಿ ಅವುಗಳನ್ನು ಬಳಸಿಕೊಳ್ಳುತ್ತಿದ್ದಾರೆ. ಹೀಗಾಗಿ ಯುವ ಸಮುದಾಯ ಇದರ ವಿರುದ್ಧ ಹೋರಾಟ ನಡೆಸಬೇಕಿದೆ ಎಂದು ಅವರು ಕರೆ ನೀಡಿದರು.
ದೇಶದಲ್ಲಿ ಎಲ್ಲರಿಗೂ ಸಮಾನವಾದ ಮತದಾನದ ಹಕ್ಕು ದೊರೆತಿದೆ. ಆದರೆ, ಮಕ್ಕಳಿಗಿಂದು ಸಮಾನ ಶಿಕ್ಷಣ ದೊರೆಯುತ್ತಿಲ್ಲ. ಶಿಕ್ಷಣದಲ್ಲಿ ತಾರತಮ್ಯ ವ್ಯವಸ್ಥೆಯಿದೆ. ಎಲ್ಲರಿಗೂ ಸಮಾನ ಶಿಕ್ಷಣ ದೊರೆಯುವ ನಿಟ್ಟಿನಲ್ಲಿ ಶಿಕ್ಷಣವು ಸಾರ್ವಜನಿಕ ಶಿಕ್ಷಣವಾಗಬೇಕು ಎಂದು ತಿಳಿಸಿದರು.
ಅಂಬೇಡ್ಕರ್ ಅವರು ಕೆಳವರ್ಗದ ಸಮುದಾಯಗಳಿಗೆ ವೈಚಾರಿಕ ಪ್ರತಿಮೆಯಾಗಿದ್ದರು. ಅವರು ಸಂವಿಧಾನ ಕುರಿತು ಅಪಾರವಾದ ಪ್ರೀತಿಯನ್ನು ಹೊಂದ್ದಿದರು. ಅದು ಯಾವ ರೀತಿ ಎಂದರೆ ತಾಯಿ ತನ್ನ ಮಗುವನ್ನು ಪ್ರೀತಿಸುವ ಹಾಗೆ ಅವರು ಸಂವಿಧಾನವನ್ನು ಪ್ರೀತಿಸುತ್ತಿದ್ದರು. ದೇಶದ ಎಲ್ಲ ಪ್ರಜೆಗಳಿಗೆ ಸಮಾನತೆ ದೊರೆಯಬೇಕು ಎಂಬುದು ಅವರ ಗುರಿಯಾಗಿತ್ತು ಎಂದು ನೆನೆದರು.
ಸದ್ಯದ ಸ್ಥಿತಿಯಲ್ಲಿ ಪ್ರಜಾಪ್ರಭುತ್ವವನ್ನು ನೀನು ಹೇಗಿದ್ದಿಯಾ ಎಂದು ಕೇಳಿದರೆ, ನನ್ನನ್ನು ನೆಲಕ್ಕೆ ಹಾಕಿಕೊಂಡು ತುಳಿಯುತ್ತಿದ್ದಾರೆ, ದಿನೇ ದಿನೇ ಜಾತಿ ಪದ್ಧತಿ ಹೆಚ್ಚುತ್ತಿದೆ ಹಾಗೂ ಬಡವರು-ಶ್ರೀಮಂತರ ನಡುವಿನ ಅಂತರ ಬೆಳೆಯುತ್ತಲಿದೆ. ಇಂತಹ ಸ್ಥಿತಿಯಲ್ಲಿ ನಾನು ಹೇಗೆ ಉಳಿಯಲು ಸಾಧ್ಯ ಎಂದು ನೋವಿನಿಂದ ಉತ್ತರಿಸುತ್ತದೆ ಎಂದು ಹೇಳಿದರು.
ಇಂದು ದೇಶದಲ್ಲಿ ವೈಚಾರಿಕತೆಯ ಮನೋಭಾವ ಕಡಿಮೆಯಾಗಿ, ಜಾತಿ ಪದ್ಧತಿ, ಅಸ್ಪಶ್ಯತೆ ಹಾಗೂ ಕಂದಾಚಾರಗಳು ಹೆಚ್ಚಾಗುತ್ತಿವೆ. ಸಾಮಾಜಿಕ ಹಾಗೂ ಆರ್ಥಿಕ ಕ್ಷೇತ್ರಗಳಲ್ಲಿ ಸಮಾನತೆಯನ್ನು ತರುವ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ ಎಂದು ತಿಳಿಸಿದರು.
ನಂತರ ಮಾತನಾಡಿದ ಅಭಿಯಾನದ ಮುಖ್ಯ ಸಂಯೋಜಕ ಪ್ರೊ.ವಿ.ಎಸ್.ಶ್ರೀಧರ್, ದೇಶವೆಲ್ಲ ಒಗ್ಗಟ್ಟಾಗದ ಹೊರತು ಸಾಮಾಜಿಕ ಬದಲಾವಣೆಯನ್ನು ಜಾರಿಗೆ ತರಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಹೋರಾಟ ಮಾಡುವ ಯುವಕರ ಸಂಖ್ಯೆ ಕಡಿಮೆಯಾಗುತ್ತಿರುವುದು ಹೋರಾಟಕ್ಕೆ ಹಿನ್ನಡೆಯಾಗಿದೆ ಎಂದು ತಿಳಿಸಿದರು.
ಸಾರ್ವಜನಿಕ ಶಿಕ್ಷಣಕ್ಕಾಗಿ ನಡೆಯುವ ಹೋರಾಟಗಳು ಕಡಿಮೆಯಾಗುತ್ತಿವೆ. ದೇಶದಲ್ಲಿ ಜಾತಿ ವಿಷಮತೆ ಹೆಚ್ಚುತ್ತಿದೆ. ಈ ಜಾತಿ ವಿಷಮತೆಯನ್ನು ಕಡಿಮೆ ಮಾಡಲು ಅಂತರ್ಜಾತಿ ವಿವಾಹಗಳ ಸಂಖ್ಯೆ ಹೆಚ್ಚಾಗಬೇಕು ಹಾಗೂ ಯುವಕರಲ್ಲಿ ಹೋರಾಟದ ಕಿಚ್ಚು ಹೆಚ್ಚಿಸಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಕಾನೂನು ಶಾಲೆಯ ಪ್ರಾಧ್ಯಾಪಕ ಡಾ.ಎಸ್.ಜಾಫೆಟ್, ಪಿಯುಸಿಎಲ್‌ನ ಡಾ.ಲಕ್ಷ್ಮೀನಾರಾಯಣ, ಸರಕಾರಿ ಕಲಾ ಕಾಲೇಜಿನ ಪ್ರಾಂಶುಪಾಲ ಪ್ರೊ.ವೆಂಕಟಶಾಮಿ, ನ್ಯಾಷನಲ್ ಕಾಲೇಜಿನ ಪ್ರಾಧ್ಯಾಪಕ ಡಾ.ರಂಗನಾಥ ಕಂಟನಕುಂಟೆ ಸೇರಿದಂತೆ ಪ್ರಮುಖರು ಹಾಜರಿದ್ದರು.

ಸಂವಿಧಾನ ಧ್ವಂಸಗೊಳಿಸುವ ಹುನ್ನಾರ
ಇತ್ತೀಚೆಗೆ ಸಂವಿಧಾನವನ್ನು ಅಂಬೇಡ್ಕರ್ ರಚನೆ ಮಾಡಿಲ್ಲ ಎಂಬ ಚರ್ಚೆ ಶುರುವಾಗಿರುವುದು ಸಂವಿಧಾನಕ್ಕೆ ಒದಗಿರುವ ಅಪಾಯವಾಗಿದೆ. ಚರ್ಚೆಯನ್ನು ಶುರು ಮಾಡಿರುವುದರ ಹಿಂದೆ ಸಂವಿಧಾನವನ್ನು ಧ್ವಂಸಗೊಳಿಸುವ ಹುನ್ನಾರವಿದೆ. ಹೀಗಾಗಿ ಸಂವಿಧಾನ ರಕ್ಷಣೆಗೆ ಹೋರಾಟ ಶುರುವಾಗಬೇಕಿದೆ.
ದೇವನೂರ ಮಹಾದೇವ, ಹಿರಿಯ ಸಾಹಿತಿ

Write A Comment