ಬೆಂಗಳೂರು, ಸೆ.7: ಬಿಬಿಎಂಪಿಯಲ್ಲಿ ಅಧಿಕಾರ ಹಿಡಿಯಲು ಹತಾಶ ಸ್ಥಿತಿ ತಲುಪಿದ ಬಿಜೆಪಿ ಮುಖಂಡರು ಕಾಂಗ್ರೆಸ್ ಪಕ್ಷವನ್ನು ಟೀಕಿಸುತ್ತಿರುವುದನ್ನು ಖಂಡಿಸಿ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾರ್ಯಕರ್ತರು ನಗರದಲ್ಲಿಂದು ಬೃಹತ್ ಪ್ರತಿಭಟನಾ ಪ್ರದರ್ಶನ ನಡೆಸಿದರು.
ನಗರದ ಆನಂದರಾವ್ ವೃತ್ತದ ಮಹಾತ್ಮಗಾಂಧೀಜಿ ಪ್ರತಿಮೆ ಮುಂದೆ ಪ್ರತಿಭಟನಾ ಪ್ರದರ್ಶನ ನಡೆಸಿದ ಕಾಂಗ್ರೆಸ್ ಕಾರ್ಯಕರ್ತರು, ಬಿಬಿಎಂಪಿಯಲ್ಲಿ ಅಧಿಕಾರ ಹಿಡಿಯಲು ಆಗದ, ಕೈಗೆಟಕದ ದ್ರಾಕ್ಷಿ ಹುಳಿ ಎಂದು ಬಿಜೆಪಿ ನಾಯಕರು ವರ್ತಿಸುತ್ತಿದ್ದಾರೆ ಎಂದು ತರಾಟೆಗೆ ತೆಗೆದುಕೊಂಡರು.
ಕಳ್ಳ (ಆರ್. ಅಶೋಕ್), ಮಳ್ಳ (ಜಗ್ಗೇಶ್), ಸುಳ್ಳ (ಅನಂತ್ಕುಮಾರ್) ರಂತೆ ನಾಯಕರು ವರ್ತಿಸುತ್ತಿದ್ದಾರೆ. ಬಿಬಿಎಂಪಿಯಲ್ಲಿ ರಾಜಮಾರ್ಗದಲ್ಲಿ ಅಧಿಕಾರ ಹಿಡಿಯದೆ ಪಕ್ಷೇತರರನ್ನು ಅವಮಾನಗೊಳಿಸಿದ ಈ ನಾಯಕರು ಕಾಂಗ್ರೆಸ್ ಮೇಲೆ ಗೂಬೆ ಕೂರಿಸುತ್ತಿದ್ದಾರೆ ಎಂದು ಆಪಾದಿಸಿದರು.
ನಗರದಲ್ಲಿ ಕುದುರೆಯನ್ನು ಬಿಟ್ಟಿದ್ದೇವೆ. ತಾಕತ್ತಿದ್ದರೆ ಈ ಕುದುರೆಯನ್ನು ಅಶೋಕ್ ಅವರು ಕಟ್ಟಿ ಹಾಕಿ ಸೆ. 11 ರಂದು ನಡೆಯುವ ಮೇಯರ್ ಚುನಾವಣೆಯಲ್ಲಿ ಅಧಿಕಾರ ಹಿಡಿಯಲಿ ಎಂದು ಕಾರ್ಯಕರ್ತರು ಸವಾಲು ಹಾಕಿದರು.
ಬಿಜೆಪಿ ನಾಯಕರು ಆಸೆ ಬುರುಕುತನ ಪ್ರದರ್ಶಿಸಿ ಅಧಿಕಾರ ಹಿಡಿಯಲು ಇನ್ನಿಲ್ಲದ ಪ್ರಯತ್ನ ನಡೆಸುತ್ತಿದ್ದಾರೆ ಎನ್ನುವ ಮೂಲಕ ಧಿಕ್ಕಾರದ ಘೋಷಣೆಗಳನ್ನು ಕೂಗಿದರು. ಸಂವಿಧಾನ ವಿರೋಧಿ ನೀತಿ ಅನುಸರಿಸುತ್ತಿರುವ ಬಿಜೆಪಿ ನಾಯಕರು ಕುದುರೆ ವ್ಯಾಪಾರ ನಡೆಸುವ ಮಟ್ಟಕ್ಕೆ ಇಳಿದಿದ್ದಾರೆ ಎಂದು ಕಾರ್ಯಕರ್ತರು ದೂರಿದರು.
