ಬೆಂಗಳೂರು, ಆ.10: ಪ್ರತಿಷ್ಠಿತ ಅಬೆರ್ಕ್ರೋಂಬಿ ಮತ್ತು ಫಿಚ್ ನ್ಯೂಯಾರ್ಕ್ ಬ್ರಾಂಡ್ನ ಶರ್ಟ್ಗಳನ್ನು ನಕಲಿಯಾಗಿ ತಯಾರಿಸಿ ಸಾಗಾಣಿಕೆ ಮಾಡಿ ಮಾರಾಟ ಮಾಡುತ್ತಿದ್ದ ಇಬ್ಬರು ವಂಚಕರನ್ನು ಸಿಸಿಬಿ ಪೊಲಿಸರು ಬಂಧಿಸಿ 15 ಲಕ್ಷ ಮೌಲ್ಯದ ಶರ್ಟ್ಗಳನ್ನು ವಶಪಡಿಸಿಕೊಂಡಿದ್ದಾರೆ.ಮೂಲತಃ ಹಾಸನ ಜಿಲ್ಲೆ ಶಾಂತಿಗ್ರಾಮದ ದೀಪಕ್ (32) ಮತ್ತು ಬೊಮ್ಮನಹಳ್ಳಿ ಬೇಗೂರು ರಸ್ತೆಯ ಕಿಶೋರ್ (20) ಬಂಧಿತ ವಂಚಕರು.
ನಗರದಲ್ಲಿ ಕೆಲವರು ಪ್ರತಿಷ್ಠಿತ ಅಬೆರ್ಕ್ರೋಂಬಿ ಮತ್ತು ಫಿಚ್ ನ್ಯೂಯಾರ್ಕ್ ಕಂಪನಿಯ ಹೆಸರು, ಲೋಗೋಗಳನ್ನು ಬಳಸಿ ಕಳಪೆ ಗುಣಮಟ್ಟದ ಶರ್ಟ್ಗಳಿಗೆ ಹಾಕಿ ಅಸಲಿ ಕಂಪನಿಯ ಶರ್ಟ್ಗಳೆಂದು ನಂಬಿಸಿ ಹೊರರಾಜ್ಯಕ್ಕೆ ಕಳುಹಿಸಿ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಸಂಗ್ರಹಿಸಿದ ಸಿಸಿಬಿ ಪೊಲೀಸರು ಗಾಂಧಿನಗರದ 2ನೇ ಕ್ರಾಸ್ನ ಪಾದಚಾರಿ ಮಾರ್ಗದಲ್ಲಿ ಈ ಇಬ್ಬರನ್ನು ಬಂಧಿಸಿದ್ದಾರೆ.ಈ ವಂಚಕರಿಂದ 15 ಲಕ್ಷ ಮೌಲ್ಯದ 3 ಸಾವಿರ ನಕಲಿ ಶರ್ಟ್ಗಳು, ಬಿಲ್ಗಳು, ಚೆಕ್ಬುಕ್, 2 ಮೊಬೈಲ್ ವಶಪಡಿಸಿಕೊಂಡು ಉಪ್ಪಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಆರೋಪಿಗಳು ಸುಮಾರು ಒಂದು ವರ್ಷದಿಂದ ಈ ದಂಧೆಯಲ್ಲಿ ತೊಡಗಿದ್ದುದು ಪ್ರಾಥಮಿಕ ವಿಚಾರಣೆಯಿಂದ ತಿಳಿದುಬಂದಿದೆ.
