ಮಂಗಳೂರು: ಬೈಕ್ನಲ್ಲಿ ಬಂದ ನಾಲ್ಕು ಮಂದಿ ಅಪರಿಚಿತರು ದಾರಿ ಕೆಳುವ ನೆಪದಲ್ಲಿ ರಿಕ್ಷಾಚಾಲಕ ಹಾಗೂ ಅದರಲ್ಲಿದ್ದ ಪ್ರಯಾಣಿಕನಿಗೆ ಮಾರಾಕಾಯುಧಗಳಿಂದ ಮಾರಾಣಾಂತಿಕವಾಗಿ ಹಲ್ಲೆ ನಡೆಸಿ ಪರಾರಿಯಾದ ಘಟನೆ ಬಂಟ್ವಾಳ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಸಜೀಪಮುನ್ನೂರು ಗ್ರಾಮದ ಕಂದೂರು ಬಳಿ ಗುರುವಾರ ತಡ ರಾತ್ರಿ ನಡೆದಿದ್ದು, ಹಲ್ಲೆಯಲ್ಲಿ ಗಂಭೀರ ಗಾಯಗೊಂಡು ನಗರದ ಯುನಿಟಿ ಆಸ್ಪತ್ರೆಗೆ ದಾಖಲಾಗಿದ್ದ ನಝೀರ್ ಚಿಕಿತ್ಸೆ ಫಲಕಾರಿಯಾಗದೇ ಶುಕ್ರವಾರ ಮಧ್ಯಾಹ್ನ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಇದೇ ಗ್ರಾಮದ ಆಲಾಡಿ ನಿವಾಸಿಗಳಾದ ಮುಹಮ್ಮದ್ ಮುಸ್ತಫಾ ಮತ್ತು ನಾಸೀರ್ ಎಂಬವರ ಮೇಲೆ ನಿನ್ನೆ ತಡರಾತ್ರಿ ದಾಳಿ ಅಪರಿಚಿತ ದುಷ್ಕರ್ಮಿಗಳು ದಾಳಿ ಮಾಡಿ ಪರಾರಿಯಾಗಿದ್ದರು. ಈ ಸಂದರ್ಭ ಗಂಭೀರವಾಗಿ ಗಾಯಗೊಂಡ ಮಹಮ್ಮದ್ ಮುಸ್ತಾಫ ಹಾಗೂ ನಝೀರ್ ನನ್ನು ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ಯುನಿಟಿ ಅಸ್ಪತ್ರೆಗೆ ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಘಟನೆ ವಿವರ : ಗುರುವಾರ ರಾತ್ರಿ 10.45ರ ಸುಮಾರಿಗೆ ಮುಹಮ್ಮದ ಮುಸ್ತಫಾ ಎಂಬವರು ತನ್ನ ಸಂಬಂಧಿ ಮಹಿಳೆಯೋರ್ವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಊರಿಗೆ ತರಳಲು ತಡರಾತ್ರಿ ಮೇಲ್ಕಾರ್ಗೆ ಬಂದಿದ್ದರು. ಈ ವೇಳೆ ನಝೀರ್ ಎಂಬವರು ಪತ್ನಿಯ ತವರಿಗೆ ಹೋಗಲು ಅಲ್ಲಿಯೇ ನಿಂತಿದ್ದರು. ಮುಸ್ತಫಾರವರು ಅಟೋದಲ್ಲಿ ತೆರಳಲು ಸಿದ್ದರಾದಾಗ ತಾನೂ ಕೂಡ ಅಟೋದಲ್ಲಿ ಬರುವಾದಾಗಿ ಹೇಳಿದ ನಝೀರ್ ಇವರಿದ್ದ ಅಟೋದಲ್ಲಿ ಪ್ರಯಾಣ ಆರಂಭಿಸಿದ್ದರು.
ರಿಕ್ಷಾ ಸಜೀಪ ಮೂಡ ಶಿವ ಮಂದಿರದ ಬಳಿ ತಲಪುತ್ತಿದ್ದಂತೆ ಬೈಕ್ನಲ್ಲಿ ಬಂದಿದ್ದ ಇಬ್ಬರು ರಿಕ್ಷಾ ತಡೆದು ಬೊಳ್ಳಾಯಿಗೆ ಹೋಗುವ ದಾರಿ ಯಾವುದೆಂದು ಕೇಳಿದ್ದರು. ಇದೇ ಸಮಯದಲ್ಲಿ ಇವರ ಹಿಂದೆಯೇ ಇನ್ನೊಂದು ಬೈಕ್ನಲ್ಲಿ ಬಂದಿದ್ದ ಇಬ್ಬರು ರಿಕ್ಷಾ ನಿಲ್ಲುತ್ತಿದ್ದಂತೆಯೇ ಆಟೋ ಚಾಲಕ ಮುಸ್ತಾಫನ ಮೇಲೆ ಮಾರಕಾಯುಧಗಳಿಂದ ಕಡಿದು ಹಲ್ಲೆ ನಡೆಸಿದ್ದಾರೆ. ತಕ್ಷಣ ಮುಸ್ತಾಫ ಅಲ್ಲಿಂದ ತಪ್ಪಿಸಿಕೊಂಡಿದ್ದಾನೆ. ಇವರ ಎದೆ ಹಾಗೂ ಕೈಗೆ ಗಾಯವಾಗಿತ್ತು. ಇದೇ ವೇಳೆ ರಿಕ್ಷಾದಲ್ಲಿ ಕುಳಿತಿದ್ದ ನಝೀರ್ನನ್ನು ನೋಡಿದ ದುಷ್ಕರ್ಮಿಗಳು ಆತನ ಮೇಲೂ ಮಾರಣಾಂತಿಕವಾಗಿ ಹಲ್ಲೆ ನಡೆಸಿ ತಲೆಗೆ, ಎದೆಗೆ, ಕೈಗೆ ತಲವಾರಿನಿಂದ ಇರಿದು ಪರಾರಿಯಾಗಿದ್ದಾರೆ.
ಕೆಲ ಹೊತ್ತುಗಳ ಬಳಿಕ ಗಾಯಗೊಂಡ ಚಾಲಕ ರಿಕ್ಷಾದ ಬಳಿಗೆ ಬಂದು ನೊಡಿದಾಗ ನಝೀರ್ ಗಂಭೀರ ಗಾಯಗೊಂಡು ರಕ್ತದ ಮಡುವಿನಲ್ಲಿ ಒದ್ದಾಡುತ್ತಿರುವುದು ಕಂಡು ಬಂದಿದೆ. ತಕ್ಷಣ ರಿಕ್ಷಾವನ್ನು ಮೆಲ್ಕಾರ್ನತ್ತ ತಿರುಗಿಸಿದ ಮುಸ್ತಾಫ ಅಲ್ಲಿಗೆ ತನ್ನ ಸ್ನೇಹಿತ ಅನ್ವಾರ್ ಎಂಬಾತನ್ನು ಬರಲು ಹೇಳಿ ಬಳಿಕ ಅನ್ವರ್ನ ರಿಕ್ಷಾದಲ್ಲಿ ತುಂಬೆಯ ಖಾಸಗಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದುಕೊಂಡು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಯುನಿಟಿ ಅಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಇಂದು ಮಧ್ಯಾಹ್ನ ಚಿಕಿತ್ಸೆ ಫಲಕಾರಿಯಾಗದೆ ನಝೀರ್ ಮೃತಪಟ್ಟಿದ್ದಾರೆ. ಇನ್ನೋರ್ವ ಗಾಯಾಳು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಘಟನೆಯ ಬಳಿಕ ಹಲ್ಲೆ ನಡೆಸಿದ ದುಷ್ಕರ್ಮಿಗಳು ತಲೆಮರೆಸಿಕೊಂಡಿದ್ದು ಯಾವ ಕಾರಣಕ್ಕೆ ಹಲ್ಲೆ ನಡೆದಿದೆ ಎನ್ನುವುದು ಗೊತ್ತಾಗಿಲ್ಲ. ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಗಳ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಸಜೀಪಮುನ್ನೂರು ಹಾಗೂ ಸಜೀಪಮೂಡ ಗ್ರಾಮದ ಆಯಕಟ್ಟಿನ ಪ್ರದೇಶದಲ್ಲಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಹಿರಿಯ ಪೊಲೀಸ್ ಅಧಿಕಾರಿಗಳು ಬಂಟ್ವಾಳ ನಗರ ಪೊಲೀಸ್ ಠಾಣೆಗೆ ಆಗಮಿಸಿದ್ದು ಆರೋಪಿಗಳ ಪತ್ತೆಗೆ ಮಾರ್ಗದರ್ಶನ ಮಾಡಿದ್ದಾರೆ.








