ರಾಷ್ಟ್ರೀಯ

ಲಲಿತ್ ಮೋದಿಯನ್ನು ಜೈಲಿನಿಂದ ದೂರವಿಡಲು ಎಷ್ಟು ಹಣ ಪಡೆದಿದ್ದೀರಿ?: ಸುಷ್ಮಾಗೆ ರಾಹುಲ್ ಗಾಂಧಿ ನೇರ ಸವಾಲು

Pinterest LinkedIn Tumblr

lalit-modi-sushma-swaraj

ಹೊಸದಿಲ್ಲಿ: ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರ ಕುಟುಂಬಕ್ಕೆ ಐಪಿಎಲ್ ಮಾಜಿ ಮುಖ್ಯಸ್ಥ ಲಲಿತ್ ಮೋದಿಯಿಂದ ಹಣ ಸಂದಾಯವಾಗಿದೆ ಎಂದು ಗಂಭೀರವಾಗಿ ಆರೋಪಿಸಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, ಲಲಿತ್ ಮೋದಿಯನ್ನು ಜೈಲಿನಿಂದ ದೂರವಿಡಲು ಸುಷ್ಮಾ ಎಷ್ಟು ಹಣ ಪಡೆದುಕೊಂಡಿದ್ದಾರೆ ಎಂಬುದನ್ನು ದೇಶಕ್ಕೆ ತಿಳಿಸಬೇಕು ಎಂದು ಆಗ್ರಹಿಸಿದ್ದಾರೆ.

‘ಡಕಾಯಿತಿ ಅಥವಾ ಕಳ್ಳತನ ನಡೆದಾಗಲೆಲ್ಲಾ ಹಣಕಾಸು ವಿನಿಮಯ ನಡೆದೇ ನಡೆಯುತ್ತದೆ. ಇಲ್ಲೂ ಕೂಡ ಹಣ ವರ್ಗಾವಣೆಯಾಗಿದೆ. ಸುಷ್ಮಾ ಕುಟುಂಬ ಲಲಿತ್ ಮೋದಿಯಿಂದ ಹಣ ಪಡೆದಿದೆ’ ಎಂದು ಸಂಸತ್ತಿನ ಹೊರಗೆ ಮಾತನಾಡುತ್ತಾ ರಾಹುಲ್ ಹೇಳಿದರು.

ಲಲಿತ್ ಮೋದಿಗೆ ವೀಸಾ ದೊರಕಿಸಲು ತಾನೆಂದಿಗೂ ಶಿಫಾರಸು ಮಾಡಿಲ್ಲ; ಅವರ ಪತ್ನಿ ಚಿಂತಾಜನಕ ಸ್ಥಿತಿಯಲ್ಲಿರುವ ಸಮಯದಲ್ಲಿ ಚಿಕಿತ್ಸೆಯ ವೇಳೆ ಲಲಿತ್ ಕೂಡ ಅಲ್ಲಿರಬೇಕು ಎಂಬ ಕಾರಣಕ್ಕೆ ಮನವಿ ಮಾಡಿದ್ದರು. ಆದರೆ, ‘ಲಲಿತ್‌ಗೆ ಪೋರ್ಚುಗಲ್‌ಗೆ ತೆರಳಲು ವೀಸಾ ನೀಡಿದರೆ ಭಾರತದ ಜತೆಗಿನ ಸಂಬಂಧಕ್ಕೆ ಧಕ್ಕೆಯಾಗಬಹುದೇ’ ಎಂಬ ಬ್ರಿಟಿಷ್ ಸರಕಾರದ ಪ್ರಶ್ನೆಗೆ ‘ಧಕ್ಕೆಯಾಗುವುದಿಲ್ಲ’ ಎಂದಷ್ಟೇ ಉತ್ತರಿಸಿದ್ದೆ ಎಂದು ಸುಷ್ಮಾ ಅವರು ಗುರುವಾರ ಲೋಕಸಭೆಯಲ್ಲಿ ಸುದೀರ್ಘ ವಿವರಣೆ ನೀಡಿದ್ದರು. ಸಾವಿನಂಚಿನಲ್ಲಿದ್ದ ಮಹಿಳೆಯ ಮೊರೆಗೆ ಮಾನವೀಯತೆಯ ನೆಲೆಯಲ್ಲಿ ಸ್ಪಂದಿಸಿದ್ದೆ ಎಂದೂ ಸುಷ್ಮಾ ಸ್ಪಷ್ಟಪಡಿಸಿದ್ದರು.

ಲಲಿತ್ ಮೋದಿಗೆ ಸಹಾಯ ಮಾಡಿದ್ದಾರೆಂದು ಆರೋಪಿಸಿರುವ ಕಾಂಗ್ರೆಸ್, ಅವರ ತಲೆದಂಡಕ್ಕೆ ಆಗ್ರಹಿಸಿ ಶುಕ್ರವಾರವೂ ಪ್ರತಿಭಟನೆ ಮುಂದುವರಿಸಿದೆ.

‘ಕಳ್ಳತನ ನಡೆದಾಗಲೆಲ್ಲಾ ರಹಸ್ಯ ಕಾಪಾಡಲಾಗುತ್ತದೆ. ಈ ವಿಷಯದಲ್ಲಿಯೂ ಸುಷ್ಮಾ ವಿಷಯ ಬಚ್ಚಿಟ್ಟಿದ್ದಾರೆ. ಈ ನಿರ್ಧಾರದ ಬಗ್ಗೆ ಸುಷ್ಮಾ ಹೊರತುಪಡಿಸಿ ಅವರ ಸಚಿವಾಲಯದ ಯಾರಿಗೂ ವಿಷಯ ಗೊತ್ತಿರಲಿಲ್ಲ. ಈ ನಿರ್ಧಾರದ ಬಳಿಕವೇ ಬ್ರಿಟನ್ ಸರಕಾರವು ತನ್ನ ನಿಲುವು ಬದಲಿಸಿತು’ ಎಂದು ರಾಹುಲ್ ಗಾಂಧಿ ಆರೋಪಿಸಿದರು.

Write A Comment