ಬೆಂಗಳೂರು, ಜು.20: ಬೇಲಿಕೇರಿ ಅಕ್ರಮ ಅದಿರು ಸಾಗಾಣಿಕೆ ಆರೋಪದಲ್ಲಿ ಸಿಬಿಐನಿಂದ ಬಂಧಿತರಾಗಿರುವ ಬಳ್ಳಾರಿ ಕಾಂಗ್ರೆಸ್ ಶಾಸಕ ಅನಿಲ್ಲಾಡ್ ಅವರಿಗೆ ಸಿಬಿಐ ವಿಶೇಷ ನ್ಯಾಯಾಲಯ ಎರಡು ವಾರಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿ, ಆಕ್ಷೇಪ ಸಲ್ಲಿಸಲು ಎರಡು ದಿನಗಳ ಕಾಲ ಅವಕಾಶ ಕಲ್ಪಿಸಿದೆ.
ಕಳೆದ ಜುಲೈ 15 ರಂದು ಅನಿಲ್ಲಾಡ್ ಅವರನ್ನು ಸಿಬಿಐ ಅಧಿಕಾರಿಗಳು ಅಕ್ರಮ ಅದಿರು ಸಾಗಣಿಕೆ ಆರೋಪದಡಿಯಲ್ಲಿ ಬಂಧಿಸಿದ್ದರು. ನಂತರ ಅವರನ್ನು ಸಿಬಿಐ ವಿಶೇಷ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು. ನ್ಯಾಯಾಲಯ ನಾಲ್ಕು ದಿನಗಳ ಕಾಲ ಸಿಬಿಐ ವಶಕ್ಕೆ ನೀಡಿತ್ತು. ಬಳ್ಳಾರಿ ಮತ್ತಿತರೆಡೆ ಅವರನ್ನು ಕರೆದೊಯ್ದು ವಿಚಾರಣೆ ನಡೆಸಿದ ಸಿಬಿಐ ಅಧಿಕಾರಿಗಳು ಇಂದು ಕಷ್ಟಡಿ ಮುಗಿದ ಕಾರಣ ನ್ಯಾಯಾಲಯದ ಮುಂದೆ ಹಾಜರುಪಡಿಸಿ ಇನ್ನು ಕೆಲ ಕಾಲ ಕಸ್ಟಡಿಗೆ ನೀಡುವಂತೆ ಮನವಿ ಮಾಡಿದರು.
ವಿಚಾರಣೆ ನಡೆಸಿದ ನ್ಯಾಯಾಲಯ ಅನಿಲ್ಲಾಡ್ ಅವರನ್ನು ಎರಡು ವಾರಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ನೀಡಿದೆ. ಈ ಸಂಬಂಧ ಆಕ್ಷೇಪಣೆಗಳಿದ್ದರೆ ಜುಲೈ 22ರೊಳಗೆ ಸಲ್ಲಿಸಲು ಸೂಚನೆ ನೀಡಿದೆ. ಅಕ್ರಮ ಅದಿರು ಸಾಗಾಣಿಕೆಯಲ್ಲಿ ಜೈಲಿಗೆ ಹೋಗುತ್ತಿರುವ ಪ್ರಥಮ ಕಾಂಗ್ರೆಸ್ ಶಾಸಕ ಅನಿಲ್ ಲಾಡ್ ಇವರಾಗಿದ್ದಾರೆ. ಈಗಾಗಲೇ ಬಿಜೆಪಿ ಬಿಎಸ್ಆರ್ ಸೇರಿದಂತೆ 8 ಜನ ಶಾಸಕರು ಜೈಲಿನ ರುಚಿ ಕಂಡಿದ್ದಾರೆ. ಆ ಸಾಲಿಗೆ ಈಗ ಅನಿಲ್ಲಾಡ್ ಸೇರ್ಪಡೆಯಾಗಿದ್ದಾರೆ. ಸತೀಶ್ ಶೈಲ್ ಅವರ ಮಲ್ಲಿಕಾರ್ಜುನ್ ಸಿಪ್ಟಿಂಗ್ ಕಂಪನಿಯ ಮೂಲಕ 1500 ಮೆಟ್ರಿಕ್ ಟನ್ ಅದಿರನ್ನು ಅಕ್ರಮವಾಗಿ ರಫ್ತು ಮಾಡಿದ ಆರೋಪದಡಿಯಲ್ಲಿ ಸಿಬಿಐ ಅಧಿಕಾರಿಗಳು ಅನಿಲ್ಲಾಡ್ ಅವರನ್ನು ಬಂಧಿಸಿದ್ದರು.
