ಬೆಂಗಳೂರು, ಜು.17: ಬಾಳೆಹಣ್ಣು, ಮಾವಿನಹಣ್ಣುಗಳನ್ನು ಕ್ಯಾಲ್ಸಿಯಂ ಕಾರ್ಬೈಡ್ ರಾಸಾಯನಿಕ ಬಳಸಿ ಹಣ್ಣು ಮಾಡುವುದರಿಂದ ಗ್ರಾಹಕರು ಕ್ಯಾನ್ಸರ್‌ನಂತಹ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಇದನ್ನು ತಡೆಯಲು ಸೂಕ್ತ ಕಾಯ್ದೆ ರೂಪಿಸಬೇಕೆಂದು ವಿಧಾನಸಭೆಯಲ್ಲಿ ಶಾಸಕರು ಪಕ್ಷಭೇದ ಮರೆತು ಒತ್ತಾಯಿಸಿದರು.
ಪ್ರಶ್ನೋತ್ತರ ವೇಳೆಯಲ್ಲಿ ಬಿಜೆಪಿಯ ಶಾಸಕ ಸಿ.ಟಿ.ರವಿ, ಕ್ಯಾಲ್ಸಿಯಂ ಕಾರ್ಬೈಡ್ ರಾಸಾಯನಿಕ ಬಳಸಿ ಮಾವು, ಬಾಳೆಹಣ್ಣುಗಳನ್ನು ಬಲವಂತವಾಗಿ ಹಣ್ಣು ಮಾಡಲಾಗುತ್ತಿದೆ. ಇದನ್ನು ತಿಂದವರಿಗೆ ಕ್ಯಾನ್ಸರ್‌ನಂತಹ ರೋಗಗಳು ಬರುತ್ತವೆ. ಸರ್ಕಾರ ಇದನ್ನು ತಡೆಗಟ್ಟಲು ಯಾವ ಕ್ರಮ ಕೈಗೊಂಡಿದೆ ಎಂದು ಪ್ರಶ್ನಿಸಿದರು.
ಉತ್ತರ ನೀಡಿದ ತೋಟಗಾರಿಕೆ ಸಚಿವ ಶ್ಯಾಮನೂರು ಶಿವಶಂಕರಪ್ಪ, ರಾಸಾಯನಿಕ ಬಳಸಿ ಬಲವಂತವಾಗಿ ಹಣ್ಣು ಮಾಡುವವರ ವಿರುದ್ಧ ಜಿಲ್ಲಾಧಿಕಾರಿ ನ್ಯಾಯಾಲಯದಲ್ಲಿ ಕೇಸು ದಾಖಲಿಸಲಾಗುತ್ತಿದೆ. ಈಗಾಗಲೇ ಮೈಸೂರು, ಬಳ್ಳಾರಿ, ಚಿತ್ರದುರ್ಗ, ಶಿವಮೊಗ್ಗ ಮತ್ತಿತರ ಜಿಲ್ಲೆಗಳಲ್ಲಿ ದಾಳಿ ನಡೆಸಿ ಕೃತಕವಾಗಿ ಹಣ್ಣು ಮಾಡಿರುವ ಹಣ್ಣುಗಳನ್ನು ನಾಶ ಮಾಡಲಾಗಿದೆ. ಎಂದು ತಿಳಿಸಿದರು. ತೋಟಗಾರಿಕೆ ಇಲಾಖೆಗೆ ನೇರವಾಗಿ ಕಾರ್ಯಾಚರಣೆ ಮಾಡುವ ಅಧಿಕಾರವಿಲ್ಲ. ಆಹಾರ ಇಲಾಖೆ ಮತ್ತು ಪಾಲಿಕೆಗಳ ವತಿಯಿಂದ ಇಂತಹ ದಾಳಿಗಳನ್ನು ಮಾಡಲಾಗುತ್ತಿದೆ ಎಂದು ಅವರು ತಿಳಿಸಿದರು. ಜತೆಗೆ ಕೃತಕ ಮಾಗುವಿಕೆಯಿಂದ ಆಗುವ ಪರಿಣಾಮಗಳ ಬಗ್ಗೆ ವ್ಯಾಪಕ ಪ್ರಚಾರ ನೀಡಲಾಗುತ್ತಿದೆ. ಇಥಲಿನ್/ಈಥೇಲ್ ಉಪಯೋಗಿಸಿ ಸುರಕ್ಷಿತ ಕ್ರಮದಲ್ಲಿ ಹಣ್ಣು ಮಾಡುವ ವಿಧಾನವನ್ನು ಅನುಸರಿಸಲು ರೈತರಿಗೆ ಪ್ರೋತ್ಸಾಹಿಸಲಾಗುತ್ತಿದೆ ಎಂದು ಹೇಳಿದರು.
ಬಿಜೆಪಿ ಶಾಸಕ ಸುರೇಶ್‌ಕುಮಾರ್ ಮತ್ತು ಜೆಡಿಎಸ್‌ನ ಕೆ.ಎಂ.ಶಿವಲಿಂಗೇಗೌಡ ಮಾತನಾಡಿ, ಪಕ್ವ ಆಗದೇ ಇರುವ ಕಲ್ಲಂಗಡಿಗೆ ರಾಸಾಯನಿಕ ಇಂಜಕ್ಷನ್ ಚುಚ್ಚಿ ಕೆಂಪು ಬಣ್ಣಕ್ಕೆ ತಿರುಗುವಂತೆ ಮಾಡಲಾಗಿದೆ. ಅದು ರುಚಿ ಇರುವುದಿಲ್ಲ. ಆದರೆ, ಹಣ್ಣಾದಂತೆ ಕಂಡುಬರುತ್ತದೆ. ಇದು ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಸರ್ಕಾರ ಇಂತಹ ವಿಷಯಗಳನ್ನು ಗಂಭೀರವಾಗಿ ಪರಿಗಣಿಸಬೇಕು. ಇಂತಹ ದಂಧೆಗಳನ್ನು ತಡೆಯಲು ಪ್ರಬಲ ವ್ಯವಸ್ಥೆಯನ್ನು ರೂಪಿಸಬೇಕು. ಅಗತ್ಯವಾದರೆ ವಿಶೇಷ ಕಾಯ್ದೆಯನ್ನು ಜಾರಿಗೆ ತನ್ನಿ ಎಂದು ಸಲಹೆ ನೀಡಿದರು. ಶಾಸಕರಾದ ಅಶೋಕ್‌ಖೇಣಿ, ಕೋನರೆಡ್ಡಿ, ವಿಶ್ವೇಶ್ವರಹೆಗಡೆ ಕಾಗೇರಿ ಇದಕ್ಕೆ ಸಹಮತ ವ್ಯಕ್ತಪಡಿಸಿದರು. ವಿಷಯದ ಗಂಭೀರತೆ ಅರಿತ ಸಭಾಧ್ಯಕ್ಷರು ಅರ್ಧಗಂಟೆ ಪ್ರತ್ಯೇಕ ಚರ್ಚೆಗೆ ಅವಕಾಶ ನೀಡುವುದಾಗಿ ಭರವಸೆ ನೀಡಿದರು.
