ಹರಾರೆ: ಏಕದಿನ ಪಂದ್ಯದಲ್ಲಿ ಜಿಂಬಾಬ್ವೆಯನ್ನು ವೈಟ್ ವಾಷ್ ಮಾಡಿ ಜೋಶ್ನಲ್ಲಿರುವ ಭಾರತ, ಮೊದಲ ಟಿ20 ಪಂದ್ಯವನ್ನೂ 54 ರನ್ಗಳಿಂದ ಗೆದ್ದಿದೆ. ಟಾಸ್ ಗೆದ್ದು, ಬ್ಯಾಟಿಂಗ್ ಆಯ್ದುಕೊಂಡ ಅಜಿಂಕ್ಯ ರೆಹಾನೆ ನೇತೃತ್ವದ ಭಾರತ ನಿಗದಿತ 20 ಓವರ್ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ 178 ರನ್ ಗಳಿಸಿತ್ತು.
ಅಜೇಯ ರಾಬಿನ್ ಉತ್ತಪ್ಪ 35 ಬಾಲ್ಗಳಲ್ಲಿ, ನಾಲ್ಕು ಬೌಂಡರಿ ಹೊಡೆದು, 39 ರನ್ ಗಳಿಸಿದರು. ಎರಡು ಬೌಂಡರಿಗಳೊಂದಿಗೆ ನಾಯಕ ಅಜಿಂಕ್ಯ ರಹಾನೆ 32 ಬಾಲ್ಗಳಲ್ಲಿ, 33 ರನ್ ಗಳಿಸಿದರೆ, ಮುರಳಿ ವಿಜಯ್ 19 ಬಾಲ್ಗಳಲ್ಲಿ ಒಂದು ಸಿಕ್ಸ್ ಹಾಗೂ ನಾಲ್ಕು ಬೌಂಡರಿಗಳೊಂದಿಗೆ ಭಾರತದ ರನ್ ರೇಟ್ ಹೆಚ್ಚಿಸಿದರು. ಸಿಕಂದರ್ ರಾಜಾ ಬಾಲಿಗೆ ಮುರಳಿ ರನ್ಔಟ್ ಆದರು.
ಜಿಂಬಾಬ್ವೆಯ ಕ್ರಿಸ್ ಎಂಪೌಫು ನಾಲ್ಕು ಓವರ್ಗಳಲ್ಲಿ, 33 ರನ್ ನೀಡಿ ಮೂರು ವಿಕೆಟ್ಗಳನ್ನು ಪಡೆದರೆ, ಗ್ರೇಮ್ ಕ್ರೀಮರ್, ನಾಲ್ಕು ಓವರ್ಗಳಲ್ಲಿ 20 ರನ್ಗಳನ್ನು ನೀಡಿ, ಒಂದು ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು.
ಜಿಂಬಾಬ್ವೆ ಏಳು ವಿಕೆಟ್ ನಷ್ಟಕ್ಕೆ 124 ರನ್: ಭಾರತದ 179 ರನ್ ಬೆನ್ನಟ್ಟಿದ್ದ ಜಿಂಬಾಬ್ವೆ, ನಿಗದಿತ 20 ಓವರ್ಗಳಲ್ಲಿ, ಏಳು ವಿಕೆಟ್ ಪತನಕ್ಕೆ ಕೇವಲ 124 ರನ್ ಗಳಿಸಿತು.
ಆರಂಭಿಕ ಆಟಗಾರರಾದ ಹ್ಯಾಮಿಲ್ಟನ್ ಮಸಕಡ್ಜ ಹಾಗೂ ಚಮು ಚಿಭುಭಾ ಅನುಕ್ರಮವಾಗಿ 28 ಹಾಗೂ 23 ರನ್ ಗಳಿಸಿ, ತಂಡಕ್ಕೆ ಉತ್ತಮ ಮೊತ್ತ ಸೇರಿಸುವಲ್ಲಿ ಯಶಸ್ವಿಯಾಗಿದ್ದರು. ಆದರೆ, ಅಕ್ಸರ್ ಪಟೇಲ್ ಹಾಗೂ ಹರಭಜನ್ ಸಿಂಗ್ ಬಾಲ್ಗೆ ಈ ಎರಡು ವಿಕೆಟ್ ಪತನವಾದ ನಂತರ ಜಿಂಬಾಬ್ವೆ ತಂಡ ಕಳಪೆ ಪ್ರದರ್ಶನ ತೋರಿತು. ನಂತರ ಬಂದ ಬ್ಯಾಟ್ಸ್ಮೆನ್ 15 ರನ್ ಗಳಿಸುವಲ್ಲಿಯೂ ಯಶ ಕಾಣಲಿಲ್ಲ.
ಅಕ್ಸರ್ ಪಟೇಲ್ ಹಾಗೂ ಹರಭಜನ್ ತಲಾ ನಾಲ್ಕು ಓವರ್ಗಳಲ್ಲಿ ಅನುಕ್ರಮವಾಗಿ ಮೂರು ಮತ್ತು ಎರಡು ವಿಕೆಟ್ ಪಡೆದು, ಕೇವಲ 17 ಮತ್ತು 29ರನ್ ನೀಡುವ ಮೂಲಕ ಜಿಂಬಾಬ್ವೆಯ ಕಳಪೆ ಪ್ರದರ್ಶನಕ್ಕೆ ಕಾರಣರಾದರು.
ಮೋಹಿತ್ ಶರ್ಮಾ ಮೂರು ಓವರ್ಗಳಲ್ಲಿ 17 ರನ್ ನೀಡಿ, ಒಂದು ವಿಕೆಟ್ ಪಡೆದರು. ಗ್ರೀಮ್ ಕ್ರೀಮರ್ ಅವರನ್ನು ರನ್ ಔಟ್ ಮಾಡುವಲ್ಲಿಯೂ ಶರ್ಮಾ ಯಶಸ್ವಿಯಾದರು.
