ಕರ್ನಾಟಕ

ರಾಜ್ಯದಲ್ಲಿ ಖಾಲಿ ಇವೆ 2.22ಲಕ್ಷ ಸರ್ಕಾರಿ ಹುದ್ದೆಗಳು

Pinterest LinkedIn Tumblr

Siddaramiha--postessglfhgdಬೆಂಗಳೂರು, ಜು.15-ರಾಜ್ಯದ ವಿವಿಧ ಇಲಾಖೆಗಳಲ್ಲಿ 2,22,286ವಿವಿಧ ವರ್ಗದ ಹುದ್ದೆಗಳು ಖಾಲಿ ಇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಸಭೆಗೆ ತಿಳಿಸಿದ್ದಾರೆ. ಕಾಂಗ್ರೆಸ್‌ನ ಶಾಸಕ ಎನ್.ಎ.ಹ್ಯಾರಿಸ್ ಪ್ರಶ್ನೆಗೆ ಲಿಖಿತ ಉತ್ತರ ನೀಡಿರುವ ಮುಖ್ಯಮಂತ್ರಿ, ಶಿಕ್ಷಣ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಗೃಹ, ಸಮಾಜಕಲ್ಯಾಣ ಇಲಾಖೆಗಳಲ್ಲಿ ಹೆಚ್ಚಿನ ಹುದ್ದೆಗಳು ಖಾಲಿ ಇವೆ.

ಒಟ್ಟು 49 ಇಲಾಖೆಗಳಲ್ಲಿ 70,568 ಅಧಿಕಾರಿ ಹುದ್ದೆಗಳು ಮಂಜೂರಾಗಿದ್ದು, 18,304 ಹುದ್ದೆಗಳು ಖಾಲಿ ಇವೆ ಎಂದು ಹೇಳಿದ್ದಾರೆ. ಮಂಜೂರಾಗಿದ್ದ 6,80,866 ವಿವಿಧ ಇಲಾಖೆಗಳ ಸಿಬ್ಬಂದಿ ಪೈಕಿ 2,03,982 ಸಿಬ್ಬಂದಿ ಹುದ್ದೆಗಳು ಖಾಲಿ ಇವೆ. ಕಂದಾಯ, ಕಾನೂನು, ಹಣಕಾಸು, ಪಶುಸಂಗೋಪನೆ, ಕೃಷಿ ಇಲಾಖೆಗಳಲ್ಲೂ ಹೆಚ್ಚಿನ ಸಂಖ್ಯೆಯ ಹುದ್ದೆಗಳು ಖಾಲಿ ಇವೆ. ಆದರೆ, ನೀರಾವರಿ ಇಲಾಖೆಯಲ್ಲಿ ಯಾವುದೇ ಅಧಿಕಾರಿ ಹಾಗೂ ಸಿಬ್ಬಂದಿ ಹುದ್ದೆಗಳು ಖಾಲಿ ಇಲ್ಲ. ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಲ್ಲಿ ಕೇವಲ 19 ಹುದ್ದೆ ಖಾಲಿ ಇದ್ದರೆ, ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿ 44 ಹುದ್ದೆಗಳು, ವಸತಿ ಇಲಾಖೆಯಲ್ಲಿ 2, ಪರಿಸರ ಮತ್ತು ಜೀವಶಾಸ್ತ್ರ ಇಲಾಖೆಯಲ್ಲಿ 13, ಕೈಮೊಗ್ಗ ಮತ್ತು ಜವಳ ಇಲಾಖೆಯಲ್ಲಿ 27 ಹುದ್ದೆಗಳು ಖಾಲಿ ಉಳಿದಿವೆ ಎಂದು ಮುಖ್ಯಮಂತ್ರಿ ವಿವರಿಸಿದ್ದಾರೆ.

ಶಿಕ್ಷಣ ಇಲಾಖೆಯಲ್ಲಿ 5,688 ಹುದ್ದೆಗಳೂ ಮಂಜೂರಾಗಿದ್ದು, 1096 ಹುದ್ದೆಗಳು ಖಾಲಿ ಇವೆ. 2,69,364 ಸಿಬ್ಬಂದಿ ಹುದ್ದೆ ಮಂಜೂರಾಗಿದ್ದು, 48,396ಹುದ್ದೆಗಳು ಖಾಲಿ ಇವೆ. ಖಾಲಿ ಇರುವ ಹುದ್ದೆಗಳಿಗೆ ಆಡಳಿತ ಹಾಗೂ ಆರ್ಥಿಕ ಇಲಾಖೆಯ ಅನುಮತಿ ಪಡೆದು ಭರ್ತಿ ಮಾಡಬೇಕಾಗುತ್ತದೆ. ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಇಲಾಖಾ ಮುಖ್ಯಸ್ಥರು ಸಚಿವಾಲಯದ ಆಡಳಿತ  ಇಲಾಖೆಗೆ ಪ್ರಸ್ತಾವನೆ ಸಲ್ಲಿಸಬೇಕಾಗುತ್ತದೆ. ಸಂವಿಧಾನದ ಅನುಚ್ಛೇದ 371ಜೆ ಅಡಿಯಲ್ಲ ಸ್ಥಳೀಯ ವೃಂದದ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಆರ್ಥಿಕ ಮಿತವ್ಯಯದ ಆದೇಶ ಅನ್ವಯಿಸುವುದಿಲ್ಲ. ಆರ್ಥಿಕ ಇಲಾಖೆ ಈಗಾಗಲೇ ಈ ಬಗ್ಗೆ  ಸಹಮತ ನೀಡಿದೆ. ಖಾಲಿ ಹುದ್ದೆಗಳ ಭರ್ತಿಗೆ ಇಲಾಖೆಗಳು ಅನುಮತಿ ಪಡೆದ ನಂತರ ಕರ್ನಾಟಕ ಲೋಕಸೇವಾ ಆಯೋಗ ಹಾಗೂ ಇತರೆ ಆಯ್ಕೆ ಪ್ರಾಧಿಕಾರಗಳ ಮೂಲಕ ನೇಮಕಾತಿ ಪ್ರಕ್ರಿಯೆ ಪ್ರಾರಂಭಿಸಬಹುದಾಗಿದೆ. ಆಯಕಟ್ಟಿನ ಹುದ್ದೆಗಳಲ್ಲಿ ಆಡಳಿತಾತ್ಮಕ ತೊಂದರೆಗಳ ನಿವಾರಣೆಗೆ ಪ್ರಭಾವಿ ವ್ಯವಸ್ಥೆ ಮೂಲಕ ಕೆಲಸ ಕುಂಠಿತವಾಗದಂತೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಮುಖ್ಯಮಂತ್ರಿ ಸ್ಪಷ್ಟಪಡಿಸಿದ್ದಾರೆ. ವಯೋ ನಿವೃತ್ತಿ ಮತ್ತಿತರ ಕಾರಣಗಳಿಂದ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಹುದ್ದೆಗಳು ಭರ್ತಿಯಾಗದೆ ಉಳಿದಿವೆ ಎಂದಿದ್ದಾರೆ.

Write A Comment