ಬೆಂಗಳೂರು: ಹದಿನೈದು ವರ್ಷದ ಬಾಲಕನೊಬ್ಬ ತನ್ನ ಸಂಬಂಧಿಕರ ಮೂರೂವರೆ ವರ್ಷದ ಮಗುವನ್ನು ಲಟ್ಟಣಿಗೆಯಿಂದ ಹೊಟ್ಟೆಗೆ ಗುದ್ದಿ ಕೊಲೆ ಮಾಡಿರುವ ಘಟನೆ ಹೆಣ್ಣೂರು ಸಮೀಪದ ನ್ಯಾನಪ್ಪನಹಳ್ಳಿಯಲ್ಲಿ ಸೋಮವಾರ ನಡೆದಿದೆ.
ಮೂಲತಃ ಹಾಸನದ ರವಿ ಹಾಗೂ ಶಿವಮ್ಮ ದಂಪತಿಯ ಪುತ್ರ ಪ್ರೀತಮ್ ಕೊಲೆಯಾದವನು. ಆರೋಪಿ ಬಾಲಕ ನನ್ನು ಹುಳಿಮಾವು ಪೊಲೀಸರು ಬಂಧಿಸಿದ್ದಾರೆ. ಎಲೆಕ್ಟ್ರಿಷಿಯನ್ ಆಗಿರುವ ರವಿ, ಮಕ್ಕಳ ವಿದ್ಯಾಭ್ಯಾಸದ ದೃಷ್ಟಿಯಿಂದ ವಾಸ್ತವ್ಯವನ್ನು ಹಾಸನದಿಂದ ನಗರಕ್ಕೆ ಬದಲಾಯಿಸಿದ್ದರು. ಇನ್ನು ಮೈಸೂರಿನ ಕೆ.ಆರ್.ನಗರದ ಆರೋಪಿ ಬಾಲಕ, ಮೂರು ತಿಂಗಳ ಹಿಂದೆ ನಗರಕ್ಕೆ ಬಂದಿದ್ದ. ಹುಳಿಮಾವು ಬಳಿ ಇರುವ ‘ಸ್ಮೈಲ್ ಲಿಂಕ್’ ಹೋಟೆಲ್ನಲ್ಲಿ ಕೆಲಸ ಮಾಡಿಕೊಂಡು, ಸ್ನೇಹಿತರ ಜತೆ ನ್ಯಾನಪ್ಪನಹಳ್ಳಿಯಲ್ಲೇ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ.
ಶಿವಮ್ಮ ಅವರಿಗೆ ದೂರದ ಸಂಬಂಧಿಯಾದ ಬಾಲಕ, ಆಗಾಗ್ಗೆ ಅವರ ಮನೆಗೆ ಹೋಗಿ ಬರುತ್ತಿದ್ದ. ಅಂತೆಯೇ ಸೋಮವಾರ ಮಧ್ಯಾಹ್ನ ಕೂಡ ತೆರಳಿದ್ದ ಆತ, ಪಾಠ ಹೇಳಿ ಕೊಡುವುದಾಗಿ ಪ್ರೀತಮ್ನನ್ನು ತನ್ನ ಮನೆಗೆ ಕರೆದುಕೊಂಡು ಹೋಗಿದ್ದ.ಮಧ್ಯಾಹ್ನ ಮೂರು ಗಂಟೆ ಸುಮಾರಿಗೆ ಶಿವಮ್ಮ ಅವರು ಮಗನನ್ನು ಕರೆದುಕೊಂಡು ಬರುವಂತೆ ಹಿರಿಯ ಮಗಳು ಪೃಥ್ವಿಯನ್ನು ಬಾಲಕನ ಮನೆಗೆ ಕಳುಹಿಸಿದ್ದರು. ಆಗ ಆತ, ‘ಪ್ರೀತಮ್ ಓದಿಕೊಳ್ಳುತ್ತಿದ್ದಾನೆ. ಸಂಜೆ ನಾನೇ ಮನೆಗೆ ಕರೆದುಕೊಂಡು ಬರುತ್ತೇನೆ’ ಎಂದು ಹೇಳಿ ಕಳುಹಿಸಿದ್ದ. ಆದರೆ, ಐದು ಗಂಟೆಯಾದರೂ ವಾಪಸ್ ಬಾರದಿದ್ದಾಗ ಶಿವಮ್ಮ ಅವರೇ ಬಾಲಕನ ಮನೆಗೆ ಹೋದರು. ಅಸ್ವಸ್ಥನಾಗಿ ಬಿದ್ದಿದ್ದ ಮಗನನ್ನು ಕಂಡು ಜೋರಾಗಿ ಚೀರಿಕೊಂಡರು. ಅವರ ಚೀರಾಟ ಕೇಳಿದ ಸ್ಥಳೀಯರು, ಆರೋಪಿ ಬಾಲಕನನ್ನು ಹಿಡಿದುಕೊಂಡು ಪೊಲೀಸರ ವಶಕ್ಕೆ ಒಪ್ಪಿಸಿದರು. ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆ ಪ್ರೀತಮ್ ಮೃತಪಟ್ಟ ಎನ್ನಲಾಗಿದೆ.
‘ಪ್ರೀತಮ್ಗೆ ಇಂಗ್ಲಿಷ್ ಅಕ್ಷರಗಳನ್ನು ಹೇಳಲು ಬರುತ್ತಿರಲಿಲ್ಲ. ಆ ಅಕ್ಷರಗಳನ್ನು ಬರೆದುಕೊಟ್ಟು ತಿದ್ದುವಂತೆ ಹೇಳಿ ಅಂಗಡಿಗೆ ಹೋಗಿದ್ದೆ. ವಾಪಸ್ ಬರುವಷ್ಟರಲ್ಲಿ ನನ್ನ ಬಟ್ಟೆ–ಶೂಗಳನ್ನು ಚೆಲ್ಲಾ ಪಿಲ್ಲಿ ಮಾಡಿದ್ದ. ಹೀಗಾಗಿ ಲಟ್ಟಣಿಗೆಯಿಂದ ಹೊಟ್ಟೆಗೆ ಹೊಡೆದೆ’ ಎಂದು ಬಾಲಕ ಹೇಳಿಕೆ ಕೊಟ್ಟಿರುವುದಾಗಿ ಪೊಲೀಸರು ಹೇಳಿಕೆ ಕೊಟ್ಟಿದ್ದಾರೆ.
ಪಿನ್ನಿಂದ ಚುಚ್ಚಿದ್ದಾನೆ
‘ಪ್ರೀತಮ್ನ ಹೊಟ್ಟೆ ಮೇಲೆ ಬಾಲಕ ನಾಲ್ಕು ಕಡೆ ಪಿನ್ನಿಂದ ಚುಚ್ಚಿದ್ದಾನೆ. ಅದನ್ನು ಬಿಟ್ಟರೆ ಬೇರಾವುದೇ ಗಾಯದ ಗುರುತುಗಳು ಪತ್ತೆಯಾಗಿಲ್ಲ. ಪಿನ್ನಿಂದ ಚುಚ್ಚಿರುವ ಬಗ್ಗೆ ಕೇಳಿದರೆ ತನಗೇನು ಗೊತ್ತಿಲ್ಲವೆಂದು ಉತ್ತರಿಸುತ್ತಾನೆ. ಮನೋ ವೈದ್ಯರ ಮೂಲಕ ಸಮಾಲೋಚನೆ ಮಾಡಿಸಿ, ಬಾಲಕನಿಂದ ಹೇಳಿಕೆ ಪಡೆಯುವ ಪ್ರಯತ್ನ ನಡೆಯುತ್ತಿದೆ’ ಎಂದು ಹಿರಿಯ ಅಧಿಕಾರಿಗಳು ತಿಳಿಸಿದರು.
