ಮಂಗಳೂರು,ಜೂನ್.25 : ವಿಮಾನ ನಿಲ್ದಾಣ ಪ್ರಾಧಿಕಾರ ಹಾಗೂ ಕಾರ್ಗೊ ಸರ್ವಿಸ್ ಸೆಂಟರ್ ಇಂಡಿಯಾ ಇದರ ಆಶ್ರಯದಲ್ಲಿ ಮಂಗಳೂರು ಬಜ್ಪೆ ವಿಮಾನ ನಿಲ್ದಾಣದಲ್ಲಿ ನೂತನವಾಗಿ ನಿರ್ಮಾಣವಾದ ದೇಶೀಯ ಕಾರ್ಗೊ ಟರ್ಮಿನಲ್‌ನ್ನು ಮಂಗಳೂರು ವಿಮಾನ ನಿಲ್ದಾಣದ ಪ್ರಾಧಿಕಾರದ ನಿರ್ದೇಶಕ ಜಿ.ಟಿ. ರಾಧಾಕೃಷ್ಣ ಅವರು ಗುರುವಾರ ಉದ್ಘಾಟಿಸಿದ್ದರು.
ಕಾರ್ಗೊ ಸೆಂಟರ್ ಆಗಿರುವುದರಿಂದ ಮಂಗಳೂರು ವಿಮಾನ ನಿಲ್ದಾಣದ ಆದಾಯ ಹೆಚ್ಚುತ್ತಿದೆ. ಉದ್ಯಮಿಗಳಿಗೆ ಅನುಕೂಲವಾಗಿದೆ. ಮಂಗಳೂರಿನಲ್ಲಿ ಕಾರ್ಗೊ ಸಾಗಾಟಕ್ಕೆ ಉತ್ತಮ ಸೌಲಭ್ಯವಿದೆ. ಇಲ್ಲಿ ಪ್ರತಿದಿನ 30 ವಿಮಾನಗಳು ಹಾರಾಟ ನಡೆಸುತ್ತಿವೆ. ತಿಂಗಳಿಗೆ ಎರಡು ಸಾವಿರ ಟನ್ ಕಾರ್ಗೊ ನಿರ್ವಹಣೆಯಾಗುತ್ತಿದೆ ಎಂದವರು ಹೇಳಿದರು.
ಕಾರ್ಗೊ ಸರ್ವಿಸ್ ಸೆಂಟರ್ ಇಂಡಿಯಾ ಅಧ್ಯಕ್ಷರಾದ ತುಷಾರ್ ಜಾನಿ ಮಾತನಾಡಿ, ಪ್ರಮುಖ ವಿಮಾನ ನಿಲ್ದಾಣಗಳನ್ನು ಹೊರತುಪಡಿಸಿ ದೇಶದಲ್ಲಿರುವ 22 ಏರ್‌ಪೋರ್ಟ್‍ಗಳಲ್ಲಿ ಮಂಗಳೂರಿನಲ್ಲಿ ಮೊದಲ ಬಾರಿಗೆ ಕಾರ್ಗೊ ವ್ಯವಸ್ಥೆ ಅಳವಡಿಸಲಾಗಿದೆ. ದಿಲ್ಲಿ, ಮುಂಬೈ ಹಾಗೂ ಚೆನ್ನೈ ವಿಮಾನ ನಿಲ್ದಾಣಕ್ಕೆ ಕಾರ್ಗೊ ಸಾಗಾಟವಾಗಲಿದೆ. ಮುಂದೆ ಮಂಗಳೂರು ಪ್ರಮುಖ ವಿಮಾನ ನಿಲ್ದಾಣವಾಗಿ ಹೊರಹೊಮ್ಮಲಿದೆ ಎಂದರು.
ಕೆನರಾ ಚೇಂಬರ್ ಆಫ್ ಕಾಮರ್ಸ್‍ನ ಅಧ್ಯಕ್ಷ ನಿಗಮ್ ಬಿ. ವಾಸಾನಿ, ಉಡುಪಿ ಕೆನರಾ ಚೇಂಬರ್ ಆಫ್ ಕಾಮರ್ಸ್‍ನ ಅಧ್ಯಕ್ಷ ಶ್ರೀಕೃಷ್ಣ ರಾವ್ ಕೊಡಂಚ ಮೊದಲಾದವರು ಈ ಸಂಧರ್ಭದಲ್ಲಿ ಉಪಸ್ಥಿತರಿದ್ದರು.





