ಕರ್ನಾಟಕ

ಸಾಲದ ಬಾಧೆ ತಾಳಲಾರದೇ ರೈತನೋರ್ವ ಕಬ್ಬಿನ ಗದ್ದೆಗೆ ಬೆಂಕಿ ಹಾಕಿ ಅದಕ್ಕೆ ಹಾರಿ ಆತ್ಮಹತ್ಯೆ

Pinterest LinkedIn Tumblr

ningegowadda1

ಪಾಂಡವಪುರ, ಜೂ. 25: ಸಾಲದ ಬಾಧೆ ತಾಳಲಾರದೇ ರೈತನೋರ್ವ ಕಬ್ಬಿನ ಗದ್ದೆಗೆ ಬೆಂಕಿ ಹಾಕಿ ನಂತರ ತಾನು ಸಹ ಬೆಂಕಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲ್ಲೂಕಿನ ಗಾಣದಹೊಸೂರು ಗ್ರಾಮದಲ್ಲಿ ನಡೆದಿದೆ.

ಗಾಣದಹೊಸೂರು ನಿವಾಸಿ ನಿಂಗೇಗೌಡ (50) ಎಂಬಾತನೇ ಆತ್ಮಹತ್ಯೆ ಮಾಡಿಕೊಂಡಿರುವ ದುರ್ದೈವಿ ರೈತ.

ಈತ ಕೃಷಿ ಪತ್ತಿನ ಬ್ಯಾಂಕ್, ಸಹಕಾರ ಸಂಘಗಳು ಸೇರಿದಂತೆ ಇನ್ನಿತರೆ ಕಡೆ ಸಾಲ ಮಾಡಿದ್ದನು ಎನ್ನಲಾಗಿದೆ. ತಾನು ಬೆಳೆದ ಬೆಳೆಯಲ್ಲಿ ಯಾವುದೇ ಆದಾಯ ಬಾರದ ಹಿನ್ನೆಲೆಯಲ್ಲಿ ಖಿನ್ನತೆಯಿಂದ ಬಳಲುತ್ತಿದ್ದ ಈತ ಸಾಲ ತೀರಿಸಲು ಹರಸಾಹಸ ಪಡುತ್ತಿದ್ದನು. ಆದರೇ ಬರುತ್ತಿದ್ದ ಅಲ್ಪ ಆಧಾಯದಲ್ಲಿ ಸಾಲ ತೀರಿಸಲು ಸಾಧ್ಯವಾಗಲಿಲ್ಲ. ಇತ್ತ ಕಡೆ ಸಾಲ ಹೆಚ್ಚುತ್ತಿದ್ದರೆ ಅತ್ತ ಕಡೆ ಬೆಳೆಗೆ ಒಳ್ಳೆಯ ಬೆಂಬಲ ಬೆಲೆಯೂ ಸಿಗುತ್ತಿರಲಿಲ್ಲ. ಈ ಹಿನ್ನೆಲೆಯಲ್ಲಿ ಇಂದು ಮುಂಜಾನೆ ತಾನು ಕಷ್ಟ ಪಟ್ಟು 8-9 ತಿಂಗಳಿನಿಂದ ಬೆಳೆದ ಕಬ್ಬಿನ ಗದ್ದೆಗೆ ಬೆಂಕಿ ಹಾಕಿ ನಂತರ ಆತನೂ ಸಹ ಅದೇ ಬೆಂಕಿಗೆ ಹಾರಿ ಆತ್ಮಹತ್ಯೆಗೆ ಶರಣಾದನು.

ವಿಷಯ ತಿಳಿಯುತ್ತಿದ್ದಂತೆ ಪಾಂಡವಪುರ ಅಸಿಸ್ಟೆಂಟ್ ಕಮಿಷನರ್ ನಾಗರಾಜು, ತಹಶಿಲ್ದಾರ್ ಶಂಕರಪ್ಪ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು. ಅಗ್ನಿ ಶಾಮಕ ದಳದವರು ಆಗಮಿಸಿ ಬೆಂಕಿಯನ್ನು ಹಾರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೇ ನಿಂಗೇಗೌಡ ಯಾವ ಯಾವ ಬ್ಯಾಂಕುಗಳು ಸೇರಿದಂತೆ ಬೇರೆ ಕಡೆ ಕೈ ಸಾಲ ಮಾಡಿರುವ ಮೊತ್ತದ ಬಗ್ಗೆ ನಿಖರವಾದ ಮಾಹಿತಿ ತಿಳಿದು ಬಂದಿಲ್ಲ. ಪಾಂಡವಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

Write A Comment