ಕರ್ನಾಟಕ

ಇನ್ನು ಮುಂದೆ ಸರಗಳ್ಳರ ವಿರುದ್ಧವೂ ಗೂಂಡಾಕಾಯ್ದೆ

Pinterest LinkedIn Tumblr

Bang-Police-M.NReddy

ಬೆಂಗಳೂರು, ಜೂ.23: ಸರಗಳ್ಳರನ್ನು ಗೂಂಡಾಕಾಯ್ದೆಯಡಿ ಬಂಧಿಸಲು ನಿರ್ದೇಶನ ನೀಡಿದ್ದು, ಶೀಘ್ರದಲ್ಲೇ ಇದು ಜಾರಿಗೆ ಬರಲಿದೆ ಎಂದು ನಗರ ಪೊಲೀಸ್ ಆಯುಕ್ತ ಎಂ.ಎನ್.ರೆಡ್ಡಿ ತಿಳಿಸಿದರು.

ಆಗ್ನೇಯ ವಿಭಾಗದ ಪೊಲೀಸರು ಕಳೆದ ಐದು ತಿಂಗಳಿನಿಂದ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿ ವಶಪಡಿಸಿಕೊಂಡ ಸುಮಾರು 7ಕೋಟಿ ರೂ. ಮೌಲ್ಯದ ಮಾಲು ವೀಕ್ಷಿಸಿ ಮಾತನಾಡಿದ ಅವರು, ಸ್ಥಳೀಯರು ಹಾಗೂ ಹೊರಗಿನಿಂದ ಬಂದು ಸರಕಳವು ಮಾಡುವವರ ಬಗ್ಗೆ ನಿಗಾ ಇರಿಸಲಾಗಿದೆ ಎಂದರು.

ಅಪರಾಧಿಗಳ ಹಿನ್ನೆಲೆ, ಅಪರಾಧ ಎಸಗಲು ಕಾರಣವೇನು ಎಂಬುದನ್ನು ಪತ್ತೆಹಚ್ಚಿ ಅವರಲ್ಲಿ ಅರಿವು ಮೂಡಿಸಿದಾಗ ಅಪರಾಧಗಳನ್ನು ನಿಯಂತ್ರಿಸಲು ಸಾಧ್ಯ ಎಂದು ಅಭಿಪ್ರಾಯಪಟ್ಟರು. ಅಪರಾಧಿಗಳನ್ನು ಪತ್ತೆಹಚ್ಚಿ ಮಾಲು ವಶಪಡಿಸಿಕೊಳ್ಳುವುದು ಒಂದು ಸಾಧನೆಯೇ. ಆದರೆ, ಅದರ ಬುಡವನ್ನು ಅರಿತು ಸರಿಪಡಿಸಿದಾಗ ಅಪರಾಧಗಳು ನಿಯಂತ್ರಣಕ್ಕೆ ಬರುತ್ತವೆ ಎಂದು ತಿಳಿಸಿದರು.

ಅಪರಾಧಗಳಲ್ಲಿ ಶೇ.40ರಷ್ಟು ಆಗ್ನೇಯ ವಿಭಾಗದಲ್ಲಿ ನಡೆಯುತ್ತಿದೆ. ಇದಕ್ಕೆ ಈ ಭಾಗದಲ್ಲಿ ಐಟಿ ಸೆಕ್ಟಾರ್‌ಗಳು ಇರುವುದು ಒಂದು ಕಾರಣ ಇರಬಹುದು. ಕಳೆದ ಒಂದು ವರ್ಷದಲ್ಲಿ ಡಿಸಿಪಿ ರೋಹಿಣಿ ಕಟೋಚ್ ಸಫಟ್ ಅವರು ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಅದರ ಪರಿಣಾಮ ಇಷ್ಟು ದೊಡ್ಡ ಮೊತ್ತದ ಕಳವು ಮಾಲು ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದರು. ಸಾರ್ವಜನಿಕರು ತಾವು ಧರಿಸಿದ ಆಭರಣಗಳನ್ನು ರಸ್ತೆಯಲ್ಲಿ ಪ್ರದರ್ಶನ ಮಾಡಿಕೊಂಡು ಓಡಾಡಬಾರದು. ಅಪರಾಧ ನಡೆದ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದಾಗ ಮಾತ್ರ ಅಪರಾಧ ತಡೆಗೆ ಸಹಕಾರಿಯಾಗುತ್ತದೆ ಎಂದು ತಿಳಿಸಿದರು. ಅಪರಾಧ ಪ್ರಕರಣಗಳ ನಿಯಂತ್ರಣ ಕುರಿತು ಸ್ಲಂ ವಾಸಿಗಳಲ್ಲಿ ಜಾಗೃತಿ ಮೂಡಿಸಿ ಉದ್ಯೋಗ ಕಲ್ಪಿಸುವ ಉದ್ದೇಶದಿಂದ ಸ್ಲಂ ದತ್ತು ಯೋಜನೆ ಜಾರಿಗೆ ತರಲು ನಿರ್ಧರಿಸಲಾಗಿದೆ ಎಂದು ಹೇಳಿದರು.
ಖಾಸಗಿ ಸಹಭಾಗಿತ್ವದಲ್ಲಿ ಸ್ಲಂ ದತ್ತು ಯೋಜನೆ ಜಾರಿಗೆ ತರಲು ನಿರ್ಧರಿಸಿದ್ದು, ಈ ಸಂಬಂಧ ಯುವಜನ ಸಬಲೀಕರಣ ಇಲಾಖೆಯ ಜತೆ ಮಾತುಕತೆ ನಡೆಸುತ್ತೇವೆ ಎಂದು ಹೇಳಿದರು.

ಇದೇ ವೇಳೆ ಆರೋಪಿಗಳನ್ನು ಬಂಧಿಸಿ ಕಳವು ಮಾಲು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುವ ಆಗ್ನೇಯ ವಿಭಾಗದ ಪೊಲೀಸರಿಗೆ 5 ಲಕ್ಷ ರೂ. ಬಹುಮಾನವನ್ನು ಆಯುಕ್ತರು ಘೋಷಣೆ ಮಾಡಿದರು.

Write A Comment