ಬೆಂಗಳೂರು, ಜೂ.5- ಪರಿಸರಕ್ಕೆ ಮಾರಕವಾಗಿರುವ ಪ್ಲಾಸ್ಟಿಕ್ ನಿಷೇಧಿಸಲು ಮುಂದಿನ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಇಂದಿಲ್ಲಿ ತಿಳಿಸಿದರು. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವತಿಯಿಂದ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆಯಲ್ಲಿ ಮಾತನಾಡಿದ ಅವರು,
ಮೊದಲ ಹಂತದಲ್ಲಿ ಬೆಂಗಳೂರು ನಗರದಲ್ಲಿ ಪ್ಲಾಸ್ಟಿಕ್ ನಿಷೇಧಿಸಲಾಗುವುದು. ಜತೆಗೆ ಕೆಎಸ್‌ಆರ್‌ಟಿಸಿಯ ಎಲ್ಲ ಘಟಕದಲ್ಲೂ ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಿ ನಿಷೇಧಿಸುವುದಕ್ಕೆ ಪ್ರಯತ್ನಿಸಲಾಗುವುದು ಎಂದರು. ಪ್ರಧಾನಿ ನರೇಂದ್ರ ಮೋದಿ ದೇಶಾದ್ಯಂತ ಸ್ವಚ್ಛ ಭಾರತ ಆಂದೋಲನಕ್ಕೆ ಕರೆ ಕೊಟ್ಟಿದ್ದಾರೆ. ಆದರೆ, ಇದರಿಂದ ಯಾವುದೇ ಪ್ರಯೋಜನವಾಗಿಲ್ಲ ಎಂದರು. ಪರಿಸರ ದಿನಾಚರಣೆಯಂದು ಋತುಮಾನದಲ್ಲಿ ಹಣ್ಣು ಬಿಡುವಂತಹ ಜನೋಪಯೋಗಿ ಸಸಿಗಳನ್ನು ನೆಡುವಂತೆ ಅವರು ಇದೇ ಸಂದರ್ಭದಲ್ಲಿ ಸಿಬ್ಬಂದಿಗಳಿಗೆ ಸಲಹೆ ನೀಡಿದರು.
27 ಕೆಎಸ್‌ಆರ್‌ಟಿಸಿ ಘಟಕಗಳಲ್ಲಿ ಕಲುಷಿತ ನೀರು ಪುನರ್‌ಬಳಕೆ ಮಾಡುವ ವ್ಯವಸ್ಥೆ ಅಳವಡಿಸಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು. 2014-15ನೆ ಸಾಲಿನಲ್ಲಿ 7,892 ಬಸ್‌ಗಳನ್ನು ಈ ರೀತಿ ತಪಾಸಣೆಗೊಳಪಡಿಸಲಾಗಿದ್ದು, 114 ಬಸ್‌ಗಳ ಮಿತಿಗಿಂತ ಹೆಚ್ಚು ಹೊಗೆ ಉಗುಳಿದ ಬಸ್‌ಗಳು ಪತ್ತೆಯಾಗಿವೆ. ಪ್ರಸಕ್ತ ಸಾಲಿನ 14,091 ಬಸ್‌ಗಳ ಹೊಗೆ ತಪಾಸಣೆ ನಡೆಸಲಾಗಿದೆ. ಅಲ್ಲದೆ, ಕೇಂದ್ರ ಮೋಟಾರು ವಾಹನ ತಿಂಗಳಿಗೊಮ್ಮೆ ವಾಯುಮಾಲಿನ್ಯ ಪರಿಶೀಲಿಸಬೇಕು. ದೃಢೀಕರಣ ಪತ್ರ ಬಸ್‌ಗಳಲ್ಲಿ ಪ್ರದರ್ಶಿಸಲಾಗಿದೆ. ಕಪ್ಪು ಹೊಗೆ ಉಗುಳುವ ಬಸ್‌ಗಳನ್ನು ಗುರುತಿಸಿ ಸಂಸ್ಥೆಗೆ ಗಮನಕ್ಕೆ ತಂದರೆ ಒಂದು ಸಾವಿರ ರೂ. ಬಹುಮಾನ ನೀಡಲಾಗುವುದು ಎಂದು ಘೋಷಿಸಿದರು. ಪರಿಸರ ಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿ ಬಸ್ ನಿಲ್ದಾಣ, ಸೌರದೀಪ ಬಳಕೆ, ಯಥನಾಲ್ ಮಿಶ್ರಿತ ಡೀಸೆಲ್ ಬಳಕೆಯನ್ನು ಈಗಾಗಲೇ ಪ್ರಾರಂಭಿಸಲಾಗಿದೆ ಎಂದರು. ವ್ಯವಸ್ಥಾಪಕ ನಿರ್ದೇಶಕ ರಾಜೇಂದ್ರಕುಮಾರ್ ಕಟಾರಿಯಾ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಸದಾಶಿವಯ್ಯ ಸೇರಿದಂತೆ ಪ್ರಮುಖ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.
