ಮನೋರಂಜನೆ

ವಿನಯ್ ರಾಜ್‌ಕುಮಾರ್‌ರ ಸಿದ್ಧಾರ್ಥ: ಭರವಸೆಯ ಪಸೆ

Pinterest LinkedIn Tumblr

ಚಿತ್ರ: ಸಿದ್ಧಾರ್ಥ
ತಾರಾಗಣ: ವಿನಯ್ ರಾಜ್‌ಕುಮಾರ್‌, ಅಪೂರ್ವ ಅರೋರಾ, ಆಶಿಷ್‌ ವಿದ್ಯಾರ್ಥಿ, ಅಚ್ಯುತಕುಮಾರ್, ಅಶ್ವಿನಿ ಗೌಡ, ನಿಕ್ಕಿ ಗರ್ಲಾನಿ, ನಯನಾ, ಅಲೋಕ್‌, ಜೀವನ್, ವಿನೋದ್‌, ಗುರುನಂದನ್‌ ಮತ್ತಿತರರು
ನಿರ್ದೇಶನ: ಪ್ರಕಾಶ್‌ ಜಯರಾಮ್
ನಿರ್ಮಾಪಕರು: ಪಾರ್ವತಮ್ಮ ರಾಜ್‌ಕುಮಾರ್‌

siddhartha

‘ನನ್ನ ಹೆಸರು ಸಿದ್ಧಾರ್ಥ, ಆದರೆ ಯಾವುದೇ ಆ್ಯಂಗಲ್‌­ನಿಂದಲೂ ಬುದ್ಧ ಅಲ್ಲ’– ಹೊಡೆದಾಟದ ದೃಶ್ಯವೊಂದ­ರಲ್ಲಿ ಬರುವ ಸಂಭಾಷಣೆಯಿದು. ಆ ಸಿದ್ಧಾರ್ಥ ಸಂಸಾರ ವಿಮುಖಿಯಾಗಿ ಬುದ್ಧನಾದರೆ, ಇಲ್ಲಿನ ಸಿದ್ಧಾರ್ಥ ಪ್ರೀತಿಗೆ ಬದ್ಧ. ಹಾಗೆಂದು ಬುದ್ಧನಿಗೆ ಸಂಪೂರ್ಣ ತದ್ವಿರುದ್ಧ­ವಾದ ಹಾದಿಯೂ ಅಲ್ಲ.

ಪ್ರೀತಿಯಿಂದಲೇ ಗೆಲ್ಲುವ, ಸಂಯ­ಮದ ಗುಣಗಳೂ ಈತನಲ್ಲಿವೆ. ಉಳಿದಂತೆ ಸಂಭಾಷಣೆಯಲ್ಲಿ­ರುವಂತೆಯೇ ಈ ಸಿದ್ಧಾರ್ಥನಲ್ಲಿ ಬುದ್ಧ ಕಾಣಿಸಲಾರ.  ಡಾ. ರಾಜ್‌ಕುಮಾರ್‌ ಕುಟುಂಬದ ಮೂರನೇ ಪೀಳಿಗೆ ನಟ ವಿನಯ್‌ ರಾಜ್‌ಕುಮಾರ್‌ ಅವರನ್ನು ಚಿತ್ರರಂಗಕ್ಕೆ ಪರಿಚಯಿ­ಸುವ ‘ಸಿದ್ಧಾರ್ಥ’ ಗಮನ ಸೆಳೆಯುವುದು ಸರಳ ಕಥೆ ಮತ್ತು ನಿರೂ­ಪಣೆಯಿಂದ. ಈ ಸರಳತೆ ಚಿತ್ರದ ಮಿತಿಯೂ ಹೌದು.

ಯುವ ಮನಸ್ಸಿನ ಕನವರಿಕೆಗಳನ್ನು ಬಿಂಬಿಸುವ ಚಿತ್ರ, ವಾಸ್ತ­ವಕ್ಕೂ ಹತ್ತಿರ. ಯುವ ಜನರ ಗೆಳೆತನ, ಸಂಭ್ರಮ, ಪ್ರೀತಿ ಸಂಪಾ­ದಿಸಲು ನಡೆಸುವ ಸಾಹಸ, ಉತ್ಕಟ ಪ್ರೇಮ, ಅನು­ಮಾನ, ಪೊಸೆ­ಸಿವ್‌ನೆಸ್‌ ಹೀಗೆ ಹಲವು ಭಾವದ ಆಯಾಮ­ಗಳನ್ನು ಸೂಕ್ಷ್ಮ­ವಾಗಿ ಚಿತ್ರಿಸಿದ್ದಾರೆ ನಿರ್ದೇಶಕ ಪ್ರಕಾಶ್‌ ಜಯರಾಮ್. ‘ಮಿಲನ’, ‘ಗೋಕುಲ’ಗಳಂತಹ ಸಂವೇದ­ನಾಶೀಲ ಚಿತ್ರಗಳನ್ನು ನೀಡಿದ್ದ ಅವರು, ‘ಸಿದ್ಧಾರ್ಥ’ದಲ್ಲಿಯೂ ಆ ಪರಂಪರೆ ಮುಂದುವರಿಸಿದ್ದಾರೆ.

‘ಸಿದ್ಧಾರ್ಥ’ ಯುವ ಜಗತ್ತಿನ ಕಣ್ಣಿನಿಂದ ಬದುಕಿನ ತತ್ವಗ­ಳನ್ನು ಸಾರುವ ಚಿತ್ರವೂ ಹೌದು. ‘ಜಿಂದಗಿ ನಾ ಮಿಲೇಗಿ ದುಬಾರ’ ಚಿತ್ರದ ವಸ್ತುವಿನಂತೆ, ಪ್ರತಿ ಕ್ಷಣವನ್ನೂ ಸಂಭ್ರಮಿಸ­ಬೇಕೆಂಬ ಆಶಯವಿದೆ. ಗೆಳೆತನದ ಬಂಧವಿದೆ. ಕೆಲಸದ ಜಂಜಾ­ಟ­ದಲ್ಲಿ ಮರೆಯುವ ಖುಷಿಗಳನ್ನು ನೆನಪಿಸುವ ಪಾಠವಿದೆ. ದಕ್ಕುವ ಪ್ರೀತಿಯನ್ನು ಉಳಿಸಿಕೊಳ್ಳುವುದು ಸುಲಭವಲ್ಲ, ಸಂದೇಹ­ಗಳು ಒಲವನ್ನು ಕೊಲ್ಲುತ್ತವೆ ಎಂಬ ವಾಸ್ತವಗಳ ಚಿತ್ರಣವಿದೆ. ಈ ಸಂಗತಿಗಳೆಲ್ಲವೂ ಒಟ್ಟಾರೆ ಚಿತ್ರದ ಶಕ್ತಿ.

ಕಥನ­ವನ್ನು ಸಂಗೀತಮಯವಾಗಿರಿಸಿರುವುದೂ ಪ್ರಮುಖ ಅಂಶ. ಲವಲವಿಕೆಯಿಂದಲೇ ಸಾಗಿದರೂ ಆರಂಭದಲ್ಲಿ ಕಥೆ ಅಲ್ಲಲ್ಲಿ ಪೇಲವವಾಗುತ್ತದೆ. ಹಲವು ಸಿನಿಮಾಗಳಲ್ಲಿ ನೋಡಿರುವಂತಹ ಸನ್ನಿವೇಶಗಳು, ಅಂತ್ಯದಲ್ಲಿ ಕಥೆ ಲಂಬಿಸಿರುವ ಬಗೆ ತುಸು ಹೆಚ್ಚೇ ಅನಿಸುವಂತಿದೆ. ಕಥೆ ಮತ್ತು ನಿರೂಪಣೆಯಲ್ಲಿ ತಾಜಾತನದ ಕೊರತೆಯಿದ್ದರೂ ನವಿರುತನವಿದೆ.

‘ಗಿವ್ ಮಿ ಎ ಬ್ರೇಕ್‌!’ ಎಂಬ ಅಡಿಶೀರ್ಷಿಕೆ ಹೊಸ ನಾಯಕ ಪ್ರೇಕ್ಷಕನಲ್ಲಿ ಮಾಡುವ ಕೋರಿಕೆಯೂ ಹೌದು, ಕಥನಕ್ಕೆ ತಿರುವು ನೀಡುವ ಪ್ರಮುಖ ಘಟ್ಟವೂ ಹೌದು. ಆ ಕೋರಿಕೆಯನ್ನು ಒಪ್ಪಿಕೊಳ್ಳು­ವಂತಹ ಚಿತ್ರವಾಗಿ ‘ಸಿದ್ಧಾರ್ಥ’ ಮೂಡಿಬಂದಿದೆ. ವಿನಯ್‌ ರಾಜ್‌ಕುಮಾರ್‌ ಹೊಸ ಪೀಳಿಗೆಯ ನಾಯಕನಟ­ರಾಗಿ ಭರವಸೆ ಮೂಡಿಸಿದ್ದಾರೆ. ಅಪೂರ್ವ ಅರೋರಾ ಅಭಿನಯ, ನಗು ಎರಡರಲ್ಲಿಯೂ ಇಷ್ಟವಾಗುತ್ತಾರೆ. ಆಶಿಷ್‌ ವಿದ್ಯಾರ್ಥಿ, ಅಚ್ಯುತ ಕುಮಾರ್‌ ಯೌವನಕ್ಕೆ ಮರಳಿದವರಂತೆ ಮುದ ನೀಡುತ್ತಾರೆ.

‘ಸಿದ್ಧಾರ್ಥ’ನ ಗೆಳೆಯರ ಬಳಗದ ಅಭಿನ­ಯವೂ ಗಮನಾರ್ಹ. ವಿ. ಹರಿಕೃಷ್ಣ ಸಂಗೀತದ ಹಾಡುಗಳಲ್ಲಿ ತಾಜಾತನ ಇರುವುದು ವಿಶೇಷ. ಆದರೆ ಸಂಗೀತದ ಸದ್ದು ಸಾಹಿತ್ಯವನ್ನು ಮರೆಮಾಚಿಸಿದೆ. ಎಂ.ವಿ. ಕೃಷ್ಣಕುಮಾರ್‌ ಛಾಯಾಗ್ರಹಣ ಕಥನದ ಸರಳತೆಗೆ ಪೂರಕವಾಗಿದೆ.

Write A Comment