ಬೆಂಗಳೂರು: ‘ಕಾಡಿನ ರಾಜ’ ಹುಲಿಗಳ ಸಂಖ್ಯೆ ದೇಶದಲ್ಲಿ ಹೆಚ್ಚಿದ್ದರೂ ಅರಣ್ಯ ಪ್ರದೇಶದಲ್ಲಿ ಅವುಗಳ ಸಾಮ್ರಾಜ್ಯ (ಆವಾಸಸ್ಥಾನದ ವಿಸ್ತೀರ್ಣ) 1.80 ಲಕ್ಷ ಚದರ ಕಿ.ಮೀ.ಯಷ್ಟು ಕಡಿಮೆಯಾಗಿದೆ!
–ಹುಲಿ ಯೋಜನೆಗಳಲ್ಲಿ ಕಾರ್ಯ ನಿರ್ವಹಿಸಿ ಅನುಭವ ಹೊಂದಿರುವ ಹಿರಿಯ ವನ್ಯಜೀವಿ ತಜ್ಞ ಹಾಗೂ ವೈಲ್ಡ್ಲೈಫ್ ಕನ್ಸರ್ವೇಷನ್ ಸೊಸೈಟಿ (ಡಬ್ಲ್ಯುಸಿಎಸ್) ಮುಖ್ಯಸ್ಥ ಡಾ. ಉಲ್ಲಾಸ್ ಕಾರಂತ ನೀಡಿರುವ ಮಾಹಿತಿ ಇದಾಗಿದೆ.
‘ಹುಲಿಗಳ ಸಂಖ್ಯೆ ಹೆಚ್ಚಾಗಿರುವುದು ಸ್ವಾಗತಾರ್ಹ ಬೆಳವಣಿಗೆ. ಹುಲಿಗಳ ಸಂರಕ್ಷಣೆಯಲ್ಲಿ ಜಗತ್ತಿನಲ್ಲಿಯೇ ಭಾರತ ಮುಂಚೂಣಿಯಲ್ಲಿದೆ ಎಂಬುದು ಇದರಿಂದ ವೇದ್ಯವಾಗುತ್ತದೆ. ಆದರೆ, ಕಳವಳ ಮೂಡಿಸುವ ಇತರ ಸಂಗತಿಗಳ ಮೇಲೂ ಗಮನಹರಿಸುವುದು ಅಗತ್ಯವಾಗಿದೆ’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
‘ಭಾರತದ ಒಟ್ಟು 3.80 ಲಕ್ಷ ಚದರ ಕಿ.ಮೀ. ಅರಣ್ಯ ಪ್ರದೇಶ ಈ ಹಿಂದೆ ಹುಲಿಗಳ ಆವಾಸ ಸ್ಥಾನ ಆಗಿತ್ತು. ಆದರೆ, ಅದರ ಪ್ರಮಾಣ ಶೇ 48ರಷ್ಟು ಕಡಿಮೆಯಾಗಿದ್ದು 2 ಲಕ್ಷ ಚದರ ಕಿ.ಮೀ.ಗೆ ಇಳಿದಿದೆ. ಆ ಪ್ರದೇಶದ ಶೇ 20ರಷ್ಟು ಭಾಗದಲ್ಲಿಯೇ ಒಟ್ಟು ಹುಲಿಗಳಲ್ಲಿ ಶೇ 90ರಷ್ಟು ನೆಲೆ ಕಂಡುಕೊಂಡಿವೆ’ ಎಂದು ವಿವರಿಸಿದ್ದಾರೆ.
‘1973ರಷ್ಟು ಹಿಂದೆಯೇ ಹುಲಿ ಯೋಜನೆ ಆರಂಭಿಸಲಾಗಿದೆ. ಆ ಸಂದರ್ಭದಲ್ಲಿ ಕಣ್ಮರೆಯಾಗುವತ್ತ ಭರದಿಂದ ಹೆಜ್ಜೆ ಹಾಕಿದ್ದ ಹುಲಿಗಳ ಸಂತತಿಯನ್ನೇನೋ ಉಳಿಸಿಕೊಂಡು ಬರಲಾಗಿದೆ. ಆದರೆ, ಕಳೆದ 42 ವರ್ಷಗಳಲ್ಲಿ ಅವುಗಳ ಸಂಖ್ಯೆಯನ್ನು ಹೆಚ್ಚಿಸುವಲ್ಲಿ ಸುಸ್ಥಿರ ಪ್ರಗತಿಯನ್ನು ಸಾಧಿಸಲಾಗಿಲ್ಲ’ ಎಂದು ಬೆಳಕು ಚೆಲ್ಲಿದ್ದಾರೆ.
‘ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮತ್ತು ಸರ್ಕಾರೇತರ ಸಂಸ್ಥೆಗಳು ಹುಲಿಗಳ ಸಂಖ್ಯೆ ಹೆಚ್ಚಿಸುವಲ್ಲಿ ಪರಸ್ಪರ ಸಹಕಾರದಿಂದ ಕಾರ್ಯ ನಿರ್ವಹಿಸಬೇಕಿದೆ. ನಮ್ಮ ದೇಶದಲ್ಲಿ 5 ಸಾವಿರದಿಂದ 10 ಸಾವಿರದಷ್ಟು ಹುಲಿಗಳನ್ನು ಬೆಳೆಸುವ ಗುರಿ ಹಾಕಿಕೊಳ್ಳಬೇಕಿದೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.
ಇತರ ರಾಜ್ಯಗಳಿಗೆ ಮಾದರಿ: ‘ಹುಲಿಗಳ ರಕ್ಷಣೆಯಲ್ಲಿ ಕರ್ನಾಟಕ, ಮಧ್ಯಪ್ರದೇಶ, ಮಹಾರಾಷ್ಟ್ರ, ಉತ್ತರಾಖಂಡ ಹಾಗೂ ಅಸ್ಸಾಂ ರಾಜ್ಯಗಳು ಕೈಗೊಂಡ ಕ್ರಮ ಇತರ ರಾಜ್ಯಗಳಿಗೂ ಮಾದರಿಯಾಗಿವೆ. ಈ ಅವಧಿಯಲ್ಲಿ ಸರ್ಕಾರೇತರ ಸಂಸ್ಥೆಗಳು ನೀಡಿದ ಕೊಡುಗೆ ಕೂಡ ದೊಡ್ಡದಾಗಿದೆ. ಈ ಎಲ್ಲ ಪ್ರಯತ್ನಗಳ ಫಲವಾಗಿ ಹುಲಿಗಳ ಸಂತತಿಯಲ್ಲಿ ಏರಿಕೆಯಾಗಿದೆ’ ಎಂದು ವಿವರಿಸಿದ್ದಾರೆ.
‘ಸಮೀಕ್ಷೆಯ ಸಮಗ್ರ ವರದಿಯನ್ನು ಮುಂದಿಟ್ಟುಕೊಂಡು ಈ ಸಂಬಂಧ ಹೆಚ್ಚಿನ ವಿಶ್ಲೇಷಣೆ ನಡೆಸುವ ಅಗತ್ಯವಿದೆ’ ಎಂದು ಅವರು ಹೇಳಿದ್ದಾರೆ.
