
ಬೆಳಗಾವಿ/ಬೆಂಗಳೂರು, ನ.20: ಗಡಿ ಜಿಲ್ಲೆ ಬೆಳಗಾವಿಯ ಖಾನಾಪುರದಲ್ಲಿ ಹಳಿ ಮೇಲೆ ಎರಡು ಜೀವಂತ ಬಾಂಬ್ಗಳು ಪತ್ತೆಯಾಗಿ ಬಯಲಾಗಿದೆ. ಹಳಿ ಮೇಲೆ ಜೀವಂತ ಬಾಂಬ್ ಪತ್ತೆಯಾದ್ದರಿಂದ ಗಡಿ ಜಿಲ್ಲೆಯಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.
ಖಾನಾಪುರ ರೈಲು ನಿಲ್ದಾಣದಿಂದ 10 ಕಿ.ಮೀ. ದೂರದಲ್ಲಿರುವ ಅರಣ್ಯ ಪ್ರದೇಶದ ಮಾಡಿಗುಂಡಿ ಗೇಟ್ ಬಳಿ ಇಂದು ಬೆಳಗ್ಗೆ ಎರಡು ಜೀವಂತ ಬಾಂಬ್ಗಳು ಪತ್ತೆಯಾಗಿವೆ. ಇಂದು ಬೆಳಗ್ಗೆ 10 ಗಂಟೆ ಸುಮಾರಿಗೆ ಹಳಿ ಪರಿಶೀಲನೆ ನಡೆಸುವಾಗ ಅನುಮಾನಸ್ಪದ ವಸ್ತುಗಳು ಕಂಡಿದ್ದರಿಂದ ಈ ವಿಚಾರವನ್ನು ಖಾನಾಪುರ ರೈಲ್ವೆ ನಿಲ್ದಾಣದ ಅಧಿಕಾರಿಗಳಿಗೆ ತಿಳಿಸಲಾಗಿದೆ. ಕೂಡಲೇ ಅಧಿಕಾರಿಗಳು ರೈಲ್ವೆ ಠಾಣೆ ಪೊಲೀಸರಿಗೆ ವಿಷಯ ಮುಟ್ಟಿಸಿದ್ದು, ಸ್ಥಳಕ್ಕೆ ಧಾವಿಸಿದ ಪೊಲೀಸರು ಬಾಂಬ್ ನಿಷ್ಕ್ರಿಯ ದಳವನ್ನು ಕರೆಸಿ ಪರಿಶೀಲನೆ ನಡೆಸಿದ್ದಾಗ ಜೀವಂತ ಬಾಂಬ್ ಎಂದು ಗೊತ್ತಾಗಿದೆ.
ಬಾಂಬ್ ನಿಷ್ಕ್ರಿಯ ದಳದವರು ಎರಡೂ ಬಾಂಬ್ಗಳನ್ನು ನಿಷ್ಕ್ರಿಯಗೊಳಿಸಿ ಸಂಭವಿಸಬಹುದಾಗಿದ್ದ ಅನಾಹುತವನ್ನು ತಪ್ಪಿಸಿದ್ದಾರೆ. ಬಾಂಬ್ ಪತ್ತೆ ಹಿನ್ನೆಲೆಯಲ್ಲಿ ಲೋಂಡಾ-ಬೆಳಗಾವಿ ಮಾರ್ಗದ ರೈಲು ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು. ಹಳಿ ಮೇಲೆ ಪತ್ತೆಯಾದ ಬಾಂಬ್ಗಳು ಮೊಟ್ಟೆಯಂತೆ ಕಾಣುತ್ತಿತ್ತು. ಮೇಲು ನೋಟಕ್ಕೆ ನಾಡಬಾಂಬ್ ಇರಬಹುದೆಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿರುವ ಉತ್ತರ ವಲಯದ ಐಜಿಪಿ ಭಾಸ್ಕರ್ರಾವ್ ತಿಳಿಸಿದ್ದಾರೆ.
ಖಾನಾಪುರ ಠಾಣೆಗೆ ಅನಾಮಧೇಯ ವ್ಯಕ್ತಿಯೊಬ್ಬ ಕರೆ ಮಾಡಿ ಬೆದರಿಕೆ ಹಾಕಿದ್ದ ಎಂಬ ಅಂಶವೂ ತನಿಖೆ ವೇಳೆ ಗೊತ್ತಾಗಿದೆ ಎಂದು ಅವರು ಹೇಳಿದ್ದಾರೆ. ಈ ಸಂಬಂಧ ವಿಶೇಷ ತನಿಖಾ ತಂಡ ರಚಿಸಿದ್ದು, ತನಿಖೆ ಮುಂದುವರೆದಿದೆ. ಮುಂಜಾಗ್ರತ ಕ್ರಮವಾಗಿ ಜಿಲ್ಲೆಯ ಎಲ್ಲೆಡೆ ಪರಿಶೀಲನೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.