ಮಂಗಳೂರು, ಸೆ.30: ಮಂಗಳೂರು ಮಹಾನಗರ ಪಾಲಿಕೆಗೆ ಸಂಬಂಧಿಸಿದ ತೆರಿಗೆ ಸಂಗ್ರಹಿಸುತ್ತಿರುವ ಮಂಗಳೂರು ವನ್ ಕೇಂದ್ರದಿಂದ ಸಂಗ್ರಹಿಸಲಾಗಿ ರುವ 2.79 ಕೋಟಿ ರೂ.ಗೂ ಅಧಿಕ ತೆರಿಗೆ ಹಣ ಮನಪಾ ಖಾತೆಗೆ ಜಮೆಯಾಗಲು ಬಾಕಿಯಿದೆ. ಈ ಬಗ್ಗೆ ತನಿಖೆ ನಡೆಸಲು ಇಂದು ನಡೆದ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಮನಪಾ ಸದನ ಸಮಿತಿಯನ್ನು ರಚಿಸಲಾಯಿತು.
ಮನಪಾ ಅಧ್ಯಕ್ಷ ಮಹಾಬಲ ಮಾರ್ಲ ಅಧ್ಯಕ್ಷತೆಯಲ್ಲಿ ಮಂಗಳಾ ಸಭಾಂಗಣದಲ್ಲಿ ಇಂದು ನಡೆದ ಪಾಲಿಕೆಯ ಸಭೆಯಲ್ಲಿ ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಯಿತು.
ಸಭೆ ಆರಂಭಗೊಳ್ಳುತ್ತಿದ್ದಂತೆ ತೆರಿಗೆ ಹಣ ಬಾಕಿ ಕುರಿತಂತೆ ಸದಸ್ಯ ವಿಜಯಕುಮಾರ್ ಪ್ರಸ್ತಾಪಿಸಿದರು. ಕಳೆದ ಜೂನ್ 2010ರಿಂದ 2014ರ ಸೆಪ್ಟಂಬರ್ವರೆಗೆ ಮಂಗಳೂರು ವನ್ ಕೇಂದ್ರದ ಮೂಲಕ ಪಾಲಿಕೆಯ ನಿವಾಸಿಗಳಿಂದ 112.99 ಕೋ.ರೂ. ತೆರಿಗೆ ಸಂಗ್ರಹಿಸಲಾಗಿದೆ. ಈ ಪೈಕಿ ಮನಪಾ ಕಚೇರಿಗೆ 110.20 ಕೋ.ರೂ., ಮಾತ್ರ ಜಮೆಯಾಗಿದೆ. ಉಳಿದ ಹಣ ಏನಾ ಯಿತು? ಈ ಬಗ್ಗೆ ತನಿಖೆಯಾಗಬೇಕು ಎಂದು ವಿಜಯಕುಮಾರ್ ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಮೇಯರ್ ಮಹಾಬಲ ಮಾರ್ಲ, ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕಾಗಿದೆ. ಅವ್ಯವಹಾರ ನಡೆದಿದ್ದಲ್ಲಿ ಪಾಲಿಕೆಯಿಂದ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಈ ಬಗ್ಗೆ ತನಿಖೆ ನಡೆಸಿ ಪಾಲಿಕೆಗೆ ವರದಿ ನೀಡಲು ಪಾಲಿಕೆಯ ಸದಸ್ಯರನ್ನೊಳಗೊಂಡ ಸದನ ಸಮಿತಿ ಯನ್ನು ರಚಿಸುವುದು ಸೂಕ್ತ ಎಂದು ಮೇಯರ್ ತಿಳಿಸಿದರು. ಅದರಂತೆ ಸದನ ಸಮಿತಿಯನ್ನು ರಚಿಸಲಾಯಿತು. ಪಾಲಿಕೆ ಸದಸ್ಯರಾದ ವಿಜಯಕುಮಾರ್, ವಿನಯರಾಜ್, ನವೀನ್ ಡಿಸೋಜ, ದೀಪಕ್ ಪೂಜಾರಿ, ರಾಜೇಶ್ ಹಾಗೂ ಪಾಲಿಕೆಯ ಹಣ ಕಾಸು ವಿಭಾಗದ ಅಧಿಕಾರಿಗಳನ್ನೊಳಗೊಂಡ ಸಮಿತಿಯನ್ನು ರಚಿಸಲಾಯಿತು. ತೆರಿಗೆ ಹಣ ಕುರಿತಂತೆ ಸತ್ಯ ಶೋಧನಾ ವರದಿ ನೀಡಲು ಈ ಸಮಿತಿಗೆ ಮೇಯರ್ ಸೂಚಿಸಿದರು.
ಪಾಲಿಕೆ ವ್ಯಾಪ್ತಿಯ ಸರಕಾರಿ ಶಾಲೆಗಳನ್ನು ಮನಪಾಕ್ಕೆ ವಹಿಸಲು ಆಗ್ರಹ:
ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿರುವ ಸರಕಾರಿ ಶಾಲೆಗಳು ಜಿಲ್ಲಾ ಪಂಚಾಯತ್ ವತಿಯಿಂದಲೂ ಸೂಕ್ತ ಅಭಿವೃದ್ಧಿ ಗೊಳ್ಳದೆ, ಅತ್ತ ಮನಪಾಕ್ಕೂ ವಹಿಸಿ ಕೊಡದೆ ನಿರ್ಲಕ್ಷಕ್ಕೊಳಗಾಗಿವೆ. ಆದುದರಿಂದ ಜಿಲ್ಲಾ ಪಂಚಾಯತ್ ಜಿಲ್ಲೆಯ ಎಲ್ಲಾ ಶಾಲೆಗಳಿಗೆ ನೀಡುವ ಕನಿಷ್ಠ ಸೌಲಭ್ಯವನ್ನಾದರೂ ಮನಪಾ ವ್ಯಾಪ್ತಿಯ ಶಾಲೆಗಳಿಗೆ ನೀಡಬೇಕು. ಈ ಬಗ್ಗೆ ತಕ್ಷಣ ಸೂಕ್ತ ನಿರ್ಧಾರ ಕೈಗೊಳ್ಳಬೇಕು. ಇಲ್ಲವಾದಲ್ಲಿ ಪಾಲಿಕೆ ವ್ಯಾಪ್ತಿಯ ಎಲ್ಲಾ ಶಾಲೆಗಳನ್ನು ಮನಪಾ ವ್ಯಾಪ್ತಿಗೆ ವಹಿಸಿಕೊಡಲಿ ಎಂದು ಸದಸ್ಯ ಅಬ್ದುರ್ರವೂಫ್ ಆಗ್ರಹಿಸಿದರು. ಈ ಬಗ್ಗೆ ಪ್ರತಿಕ್ರಿಯಿಸಿದ ಮೇಯರ್, ಪಾಲಿಕೆ ವ್ಯಾಪ್ತಿಯ ಶಾಲೆಗಳ ಬಗ್ಗೆ ಈಗಾಗಲೇ ಶಿಕ್ಷಣ ಇಲಾಖೆಯ ಅಧಿಕಾರಿಗಳ ಜೊತೆ ಚರ್ಚಿಸಿದ್ದೇನೆ. ಬೆಂಗಳೂರು ಮಹಾನಗರ ಪಾಲಿಕೆಯ ಮಾದರಿಯಲ್ಲಿ ಮನಪಾ ವ್ಯಾಪ್ತಿಯ ಸರಕಾರಿ ಶಾಲೆಗಳನ್ನು ಪಾಲಿಕೆಗೆ ವಹಿಸಿಕೊಟ್ಟರೆ ಇನ್ನಷ್ಟು ಅಭಿವೃದ್ಧಿ ಮಾಡಬಹುದು ಎಂದು ಅಭಿಪ್ರಾಯಿಸಿದರು.
ನೀರಿನ ಬಿಲ್ ನೀಡದೆ ಸಂಪರ್ಕ ಕಡಿತದ ಬಗ್ಗೆ ಅಧಿಕಾರಿಗಳ ಬೆದರಿಕೆ :
ಮಂಗಳೂರು ಮನಪಾ ವ್ಯಾಪ್ತಿಯಲ್ಲಿ ಕೆಲವು ಪ್ರದೇಶಗಳಲ್ಲಿ ಒಂದು ವರ್ಷದಿಂದ ನೀರಿನ ಬಿಲ್ಲೇ ನೀಡಿಲ್ಲ. ಆದರೆ ಇದೀಗ ಏಕಾಏಕಿಯಾಗಿ ಬಿಲ್ ಪಾವತಿಸದಿದ್ದಲ್ಲಿ ನೀರಿನ ಸಂಪರ್ಕ ಕಡಿತ ಗೊಳಸಲಾಗುವುದು ಎಂದು ಅಧಿಕಾರಿಗಳು ಬ್ಯಾನರ್ ಹಾಕುವ ಮೂಲಕ ಸಾರ್ವಜನಿಕರಲ್ಲಿ ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದು ಆಡಳಿತ ಪಕ್ಷದ ಸದಸ್ಯೆ ಕವಿತಾ ಸನಿಲ್ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಮಾತನಾಡಿದ ಪ್ರಭಾರ ಆಯುಕ್ತ ಗೋಕುಲದಾಸ್ ಕಾಮತ್, ಪ್ರಸಕ್ತ ನೀರಿನ ಬಿಲ್ ನೀಡುವ ಗುತ್ತಿಗೆ ಸಂಸ್ಥೆಯಿಂದ ಈ ಸಮಸ್ಯೆ ಉಂಟಾಗಿದೆ. ಮುಂದಕ್ಕೆ ಇದನ್ನು ಸರಿಪಡಿ ಸಲಾಗುವುದು. ಪ್ರಸಕ್ತ ಮನಪಾದಿಂದ ಸುಮಾರು 9 ಕೋ.ರೂ. ಮೊತ್ತದ ನೀರಿನ ಬಿಲ್ ಬಾಕಿ ಇದೆ. ಈ ಬಿಲ್ ಪಾವತಿಗೆ ಸಂಬಂಧಿಸಿದಂತೆ ಮನಪಾ ವ್ಯಾಪ್ತಿಯಲ್ಲಿ ವಿಶೇಷ ಬಿಲ್ ಸಂಗ್ರಹ ಅಭಿಯಾನ ಹಮ್ಮಿಕೊಂಡಿರುವುದಾಗಿ ತಿಳಿಸಿದರು. ಮಾಲ್ಗಳಲ್ಲಿ ಪಾರ್ಕಿಂಗ್ ಸ್ಥಳಗಳಲ್ಲಿ ಹಣ ವಸೂಲಾತಿ ಮಾಡಲಾಗುತ್ತಿರುವ ಬಗ್ಗೆ ಸದಸ್ಯರ ಆರೋಪಕ್ಕೆ ಪ್ರತಿಕ್ರಿಯಿಸಿದ ಮೇಯರ್, ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಸಭೆಯಲ್ಲಿ ಮನಪಾ ವ್ಯಾಪ್ತಿಯ 123 ವಿವಿಧ ಕಾಮಗಾರಿಗಳ ಕ್ರಿಯಾ ಯೋಜನೆಗೆ ಅನುಮತಿ ನೀಡಲಾಯಿತು. ಪಾಲಿಕೆ ವ್ಯಾಪ್ತಿಯ ಜೆಪ್ಪು ರೈಲ್ವೆ ಮೇಲ್ಸೇತುವೆಗೆ ಸರಕಾರದಿಂದ 6.30 ಕೋಟಿ ರೂ. ಭರಿಸಲು ಪತ್ರ ಬರೆಯಲು ತೀರ್ಮಾನಿಸಲಾಯಿತು. ಮನಪಾ ವ್ಯಾಪ್ತಿಯಲ್ಲಿ ಕ್ರೀಡಾ ಚಟುವಟಿಕೆ ಗಳನ್ನು ವಿಸ್ತರಿಸಲು 15 ಲಕ್ಷ ರೂ. ಕಾಯ್ದಿರಿಸಲು ತೀರ್ಮಾ ನಿಸಲಾಯಿತು. ದಸರಾ ಕ್ರೀಡಾ ಚಟುವಟಿಕೆಗೆ ಹೆಚ್ಚಿನ ಅನುದಾನ ನೀಡಿ ದೊಡ್ಡಮಟ್ಟದಲ್ಲಿ ವಿವಿಧ ಕ್ರೀಡೆಗಳನ್ನು ಮನಪಾ ವ್ಯಾಪ್ತಿಯಲ್ಲಿ ನಡೆಸಲು ಸರಕಾರವನ್ನು ಕೋರಲು ಸದಸ್ಯರು ಸಭೆಯಲ್ಲಿ ಆಗ್ರಹಿಸಿದರು.
ಸಭೆಯಲ್ಲಿ ಶಾಸಕ ಜೆ.ಆರ್. ಲೋಬೊ, ಉಪ ಮೇಯರ್ ಕವಿತಾ, ಸ್ಥಾಯಿ ಸಮಿತಿಯ ಸದಸ್ಯರಾದ ಅಶೋಕ್ ಶೆಟ್ಟಿ, ಡಿ.ಕೆ.ಅಶೋಕ್ ಕುಮಾರ್, ಜೆಸಿಂತಾ ವಿಜಯ ಅಲ್ಫ್ರೆಡ್ ಮೊದಲಾದವರು ಉಪಸ್ಥಿತರಿದ್ದರು.



