ಕರಾವಳಿ

ಅರಣ್ಯ ಇಲಾಖೆಯ ಬೋನಿಗೆ ಬಿದ್ದ ಚಿರತೆ ; ಆತಂಕದಿಂದ ಪಾರಾದ ಸ್ಥಳೀಯರು

Pinterest LinkedIn Tumblr

Batwala_Cheeta_cach_

ಬಂಟ್ವಾಳ, ಸೆ.30: ನಾಯಿಮರಿಯನ್ನು ತಿನ್ನುವ ಆಸೆಯಲ್ಲಿ ಬಂದ ಚಿರತೆಯೊಂದು ಅರಣ್ಯ ಇಲಾಖೆಯ ಬೋನಿನಲ್ಲಿ ಸಿಕ್ಕಿಬಿದ್ದ ಘಟನೆ ಚೈನ್ನೈತ್ತೋಡಿ ಗ್ರಾಮದ ಅಮ್ಯಾಳಗುಡ್ಡೆ ಎಂಬಲ್ಲಿ ನಡೆದಿದೆ.

ಕಳೆದ ಒಂದೂವರೆ ತಿಂಗಳಿನಿಂದ ಚೆನ್ನೈತ್ತೋಡಿ- ವಾಮದಪದವು ಪರಿಸರದಲ್ಲಿ ಚಿರತೆ ಕಾಣಿಸುತ್ತಿದ್ದು, ನಾಗರಿಕರು ಆತಂಕಗೊಂಡಿದ್ದರು.ಅಲ್ಲದೆ ಚಿರತೆ ಹಾವಳಿಯಿಂದ ಆಸುಪಾಸಿನ ಮನೆಗಳಿಂದ ದನ, ಕರುಗಳು, ನಾಯಿಗಳು ನಾಪತ್ತೆಯಾಗಿರುತ್ತಿತ್ತು. ಇದರಿಂದ ಬೇಸತ್ತ ಗ್ರಾಮಸ್ಥರು ವೇಣೂರು ಅರಣ್ಯ ಇಲಾಖೆಗೆ ದೂರು ನೀಡಿದ್ದರು.

ಅವರು ಪರಿಶೀಲನೆ ನಡೆಸಿ ತೆರಳಿದ್ದು, ಕಳೆದ 2-3 ದಿನಗಳ ಹಿಂದೆ ಮತ್ತೆ ಚಿರತೆ ಪ್ರತ್ಯಕ್ಷವಾಗಿತ್ತು. ಈ ಹಿನ್ನೆಲೆಯಲ್ಲಿ ಗ್ರಾಮಸ್ಥರು ಮತ್ತೆ ಅರಣ್ಯ ಇಲಾಖೆಯ ಮೊರೆ ಹೋಗಿದ್ದು, ಅದರಂತೆ ವೇಣೂರು ಅರಣ್ಯ ಇಲಾಖೆಯ ಅಧಿಕಾರಿಗಳು ಅಮ್ಯಾಳಗುಡ್ಡೆಯಲ್ಲಿ ಚಿರತೆ ಬೋನನ್ನು ಇರಿಸಿ, ಅದರಲ್ಲಿ ನಾಯಿಮರಿಯೊಂದನ್ನು ಕಟ್ಟಿ ಹಾಕಿದ್ದರು. ರವಿವಾರ ರಾತ್ರಿ ನಾಯಿ ಮರಿಯನ್ನು ತಿನ್ನುವ ಆಸೆಯಲ್ಲಿ ಬಂದ ಚಿರತೆ ಅರಣ್ಯ ಇಲಾಖೆಯ ಬೋನಿನಲ್ಲಿ ಸಿಕ್ಕಿ ಬಿದ್ದಿದೆ.

ಬೋನಿನಲ್ಲಿ ಬಂಧಿಯಾದ ಚಿರತೆಯನ್ನು ಕುದುರೆಮುಖ ರಕ್ಷಿತಾರಣ್ಯಕ್ಕೆ ಬಿಡುವುದಾಗಿ ಅರಣ್ಯ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಅರಣ್ಯ ಇಲಾಖೆಗೆ ಸೇರಿದ ಇಲ್ಲಿನ ಸುಮಾರು 22 ಎಕ್ರೆ ಅರಣ್ಯ ಜಮೀನಿನಲ್ಲಿ ಇನ್ನೂ ಹಲವು ಚಿರತೆಗಳು ಇರುವ ಬಗ್ಗೆ ಶಂಕೆ ವ್ಯಕ್ತವಾಗಿದೆ.

ವಲಯ ಅರಣ್ಯಾಧಿಕಾರಿ ಸುಬ್ರಹ್ಮಣ್ಯಾಚಾರ್, ವೇಣೂರು, ಅರಣ್ಯಾಧಿಕಾರಿ ಯಶೋಧರ ಮತ್ತು ಸಿಬ್ಬಂದಿ, ಪಶು ವೈದ್ಯಾಧಿಕಾರಿ ಡಾ.ಅಶೋಕ್ ವೇಣೂರು ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದರು. ಬೋನಿನಲ್ಲಿ ಬಂಧಿಯಾಗಿದ್ದ ಚಿರತೆಯ ವೀಕ್ಷಣೆಗೆ ಅಪಾರ ಸಂಖ್ಯೆಯ ಜನರು ನೆರೆದಿದ್ದರು.

Write A Comment