
ಮೈಸೂರು, ಸೆ.26: ದಸರಾದ ವೇಳೆ ಮೈಸೂರು ನಗರದ ವಿವಿಧೆಡೆ ಆರ್ಡಿಎಕ್ಸ್ ಮತ್ತು ಟೈಮ್ ಬಾಂಬ್ ಇರಿಸಿರುವುದಾಗಿ ಮೈಸೂರು ಪೊಲೀಸ್ ಕಮಿಷನರ್ಗೆ ಬೆದರಿಕೆಯ ಇ-ಮೇಲ್ ಸಂದೇಶ ರವಾನಿಸಿದ್ದ ಯುವಕನೊಬ್ಬನನ್ನು ಮೈಸೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ತುಮಕೂರಿನ ಎಸ್ಐಟಿ ಬಡಾವಣೆಯ ನಿವಾಸಿ, ಬಿಸಿಎ ಪದವಿ ವಿದ್ಯಾರ್ಥಿ ಪ್ರದೀಪ್ (27) ಎಂಬಾತ ಬಂಧಿತ ಯುವಕ. ಆರೋಪಿ ಪ್ರದೀಪ್, ಸೆ.21ರಂದು ರಾತ್ರಿ 8:27ರ ಸುಮಾರಿಗೆ ‘ಹಿಜ್ಬುಲ್ ಮುಜಾಹಿದೀನ್ ಸಂಘಟನೆಯ ಚೀಫ್ ಕಮಾಂಡರ್ ದಸರಾವನ್ನು ಗುರಿಯಿರಿಸಿದ್ದು, ನಗರದ 30 ಕಡೆಗಳಲ್ಲಿ ಆರ್ಡಿಎಕ್ಸ್ ಮತ್ತು ಟೈಮ್ ಬಾಂಬ್ ಇರಿಸಲಾಗಿದೆ’ ಎಂದು ಇ-ಮೇಲ್ ಸಂದೇಶ ರವಾನಿಸಿದ್ದ. ಈ ಸಂಬಂಧ ನಝರ್ಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಪ್ರಕರಣದ ಆರೋಪಿಯ ಪತ್ತೆಗಾಗಿ ಮೈಸೂರು ನಗರದ ಪೊಲೀಸ್ ಆಯುಕ್ತ ಡಾ.ಎಂ.ಎ.ಸಲೀಂ ಪ್ರಕರಣವನ್ನು ಮೈಸೂರು ನಗರ ಸಿಸಿಬಿ ಘಟಕಕ್ಕೆ ವಹಿಸಿದ್ದರು. ಈ ಸಂಬಂಧ ಸಿಸಿಬಿ ಪೊಲೀಸರ ತಂಡವು ಕಾರ್ಯಾಚರಣೆ ನಡೆಸಿದಾಗ ತುಮಕೂರು ನಗರದಲ್ಲಿ ವಾಸವಾಗಿದ್ದ ಯುವಕನಿಂದ ಇ-ಮೇಲ್ ಸಂದೇಶ ಬಂದಿರುವುದು ಗೊತ್ತಾಯಿತು. ಅನಂತರ ಆರೋಪಿಯನ್ನು ಬಂಧಿಸುವಲ್ಲಿ ತಂಡ ಯಶಸ್ವಿಯಾಗಿದೆ.
ಆರೋಪಿಯನ್ನು ನಝರ್ಬಾದ್ ಪೊಲೀಸ್ ಠಾಣೆಗೆ ಹಾಜರುಪಡಿಸಿದ್ದು, ಈತನನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ.
ಸಮಾಜದ ವ್ಯವಸ್ಥೆಯ ಬಗ್ಗೆ ಜಿಗುಪ್ಸೆಗೊಂಡು ಮಾನಸಿಕ ಖಿನ್ನತೆಗೆ ಒಳಗಾಗಿ ತಾನು ಈ ರೀತಿ ಇ-ಮೇಲ್ ಸಂದೇಶವನ್ನು ಮೈಸೂರು ನಗರ ಪೊಲೀಸ್ ಆಯುಕ್ತರ ಕಚೇರಿಗೆ ಕಳುಹಿಸಿರುವುದಾಗಿ ಆರೋಪಿ ತಿಳಿಸಿದ್ದಾನೆ ಎನ್ನಲಾಗಿದೆ.
ಮೈಸೂರು ನಗರ ಡಿಸಿಪಿ ಎ.ಎನ್.ರಾಜಣ್ಣ ಹಾಗೂ ಸಿಸಿಬಿಯ ಎಸಿಪಿ ಕೆ.ಎನ್.ಮಾದಯ್ಯ ಮಾರ್ಗದರ್ಶನದಲ್ಲಿ ಮೈಸೂರು ನಗರದ ಸಿಸಿಐಬಿ ಘಟಕದ ಪೊಲೀಸ್ ಇನ್ಸ್ಪೆಕ್ಟರ್ ಆರ್.ಜಗದೀಶ್ ಹಾಗೂ ಸಿಬ್ಬಂದಿ ಅನಿಲ್ ಶಂಕಪಾಲ್ ಮತ್ತು ಗುರುದೇವಾರಾಧ್ಯ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.