ದುಬೈ, ಡಿ.20: ದುಬೈಯ ಅಲ್ ನಾಸರ್ ಲೀಸರ್‌ಲ್ಯಾಂಡ್ ನಶ್ವನ್ ಹಾಲ್‌ನಲ್ಲಿ ಯುಎಇಯ ದುಬೈ ಕನ್ನಡಿಗರು ಆಯೋಜಿಸಿರುವ ಕರ್ನಾಟಕ ರಾಜ್ಯೋತ್ಸವ ಮತ್ತು ನಗೆಹಬ್ಬಕ್ಕೆ ಕ್ಷಣಗಣನೆ ಆರಂಭವಾಗಿದೆ.
ಕಾರ್ಯಕ್ರಮದಲ್ಲಿ ಭಾಗವಹಿಸಲು ಖ್ಯಾತ ಕಲಾವಿದರು, ಹಾಸ್ಯಲೋಕದ ದಿಗ್ಗಜರು ಆಗಿರುವ ಮಾಸ್ಟರ್ ಹಿರಣ್ಣಯ್ಯ, ಅವರ ಪುತ್ರ ನರಸಿಂಹ, ಪ್ರೋ.ಕೃಷ್ಣೇಗೌಡ, ಇಂದೂಮತಿ ಸಾಲಿಮತ್, ರವಿ ಭಜಂತ್ರಿ ಸೇರಿದಂತೆ ಇನ್ನಿತರ ಕಲಾವಿದರು ಈಗಾಗಲೇ ದುಬೈಯಲ್ಲಿ ಬೀಡುಬಿಟ್ಟಿದ್ದಾರೆ.
10 ಸಾವಿರ ಪ್ರದರ್ಶನ ಕಾಣುವ ಮೂಲಕ ರಂಗಭೂಮಿಯಲ್ಲಿ ಇತಿಹಾಸ ನಿರ್ಮಿಸಿರುವ ಮಾಸ್ಟರ್ ಹಿರಿಣ್ಣಯ್ಯರ ‘ಲಂಚಾವತಾರ’ ನಾಟಕದ ತುಣಕುಗಳನ್ನು ಕಾರ್ಯಕ್ರಮದಲ್ಲಿ ಪ್ರದರ್ಶಿಸಲಾಗುವುದು. ಜೊತೆಗೆ ಮಾಸ್ಟರ್ ಹಿರಣ್ಣಯ್ಯ ತನ್ನ ಹಾಸ್ಯ ಚಟಾಕಿಗಳನ್ನು ಸಿಡಿಸುವ ಮೂಲಕ ಕಾರ್ಯಕ್ರಮದಲ್ಲಿ ನಗೆಯ ಹೊನಲನ್ನು ಹರಿಸಲಿದ್ದಾರೆ.
ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಾನಪದ ಪರಿಷತ್, ಜಾನಪದ ಲೋಕದ ಸಹಯೋಗದೊಂದಿಗೆ ನಡೆಯಲಿರುವ ಕಾರ್ಯಕ್ರಮದಲ್ಲಿ ಚಿತ್ರದುರ್ಗದ ಸಂಸದ ಜನಾದನ ಸ್ವಾಮಿ ಕೂಡಾ ಭಾಗವಹಿಸಲು ಆಗಮಿಸಿದ್ದಾರೆ.
ಸಂಜೆ 5 ಗಂಟೆಗೆ ಆರಂಭವಾಗಲಿರುವ ಕಾರ್ಯಕ್ರಮದಲ್ಲಿ ಖ್ಯಾತ ಕಲಾವಿದೆ ಜಸ್ಮಿತಾ ವಿವೇಕ್ ತಂಡದವರಿಂದ ನೃತ್ಯ, ಶಿವಕುಮಾರ್ ತಂಡದವರಿಂದ ಸಂಗೀತ ಕಾರ್ಯಕ್ರಮ ಕೂಡಾ ನಡೆಲಿದೆ.










