Uncategorized

ಬಿಜೆಪಿ ಪ್ರಧಾನ ಕಚೇರಿಯಲ್ಲಿ ಬಿಹಾರದಲ್ಲಿ ಎನ್‌ಡಿಎ ಗೆಲುವಿನ ಸಂಭ್ರಮಾಚರಣೆ: ಬಿಜೆಪಿ ಮೇಲೆ ಜನರ ವಿಶ್ವಾಸ ಅಚಲ ಎಂದ ಮೋದಿ!

Pinterest LinkedIn Tumblr


ದೆಹಲಿ: ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಎನ್‌ಡಿಎ ಜಯವನ್ನು ಸಂಭ್ರಮಿಸಲು, ದೆಹಲಿಯಲ್ಲಿರುವ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿರುವ ಸಂಭ್ರಮಾಚರಣೆಯನ್ನು ಉದ್ದೇಶಿಸಿ ಪ್ರಧಾನಿ ಮೋದಿ ಮಾತನಾಡಿದರು.

ಬಿಹಾರದ ಜನತೆ ಅಭಿವೃದ್ಧಿಗಾಗಿ ಮತ ನೀಡಿದ್ದು, ಇದಕ್ಕಾಗಿ ಬಿಹಾರದ ಜನತೆಯನ್ನು ಅಭಿನಂದಿಸುವುದಾಗಿ ಪ್ರಧಾನಿ ಮೋದಿ ಹೇಳಿದರು. ಕೇವಲ ಬಿಹಾರ ಮಾತ್ರವಲ್ಲದೇ ಇಡೀ ಭಾರತದಲ್ಲಿ ಅಭಿವೃದ್ಧಿಗಾಗಿ ಈ ಐಕ್ಯತೆಯನ್ನು ನಾವು ಕಾಣಬಹುದಾಗಿದೆ ಎಂದು ಮೋದಿ ಅಭಿಪ್ರಾಯಪಟ್ಟರು.

ಐಕ್ಯ ಭಾರತಕ್ಕಾಗಿ ನಾವು ಮುಂದಡಿ ಇಟ್ಟಿದ್ದು, ಬಿಹಾರ ವಿಧಾನಸಭಾ ಚುನಾವಣೆ ಫಲಿತಾಂಶ ಇದಕ್ಕೆ ಮುನ್ನುಡಿ ಬರೆದಿದೆ ಎಂದು ಪ್ರಧಾನಿ ಮೋದಿ ಈ ವೇಳೆ ಸಂತಸ ವ್ಯಕ್ತಪಡಿಸಿದರು.

ಕೇವಲ ಬಿಹಾರ ಮಾತ್ರವಲ್ಲದೇ ಉತ್ತರಪ್ರದೇಶ, ಗುಜರಾತ್, ಮಧ್ಯಪ್ರದೇಶ ಹಾಗೂ ಕರ್ನಾಟಕ ರಾಜ್ಯಗಳಲ್ಲಿ ನಡೆದ ಉಪ ಚುನಾವಣೆಗಳಲ್ಲೂ ಬಿಜೆಪಿ ಭರ್ಜರಿ ವಿಜಯ ಸಾಧಿಸಿದೆ. ಇದು ದೇಶದ ಜನತೆ ಬಿಜೆಪಿ ಮೇಲೆ ಇಟ್ಟಿರುವ ನಂಬಿಕೆಗೆ ಸಾಕ್ಷಿ ಎಂದು ಪ್ರಧಾನಿ ಮೋದಿ ಹೇಳಿದರು.

ಬಿಹಾರದ ಗೆಲುವು ನಮ್ಮನ್ನು ಮತ್ತಷ್ಟು ಕ್ರಿಯಾಶೀಲರನ್ನಾಗಿ ಮಾಡಿದ್ದು, ದೇಶದ ಮೂಲೆ ಮೂಲೆಗೂ ನಾವು ಅಭಿವೃದ್ಧಿಯ ಮಂತ್ರವನ್ನು ತಲುಪಿಸಲಿದ್ದೇವೆ ಎಂದು ಮೋದಿ ಸ್ಪಷ್ಟಪಡಿಸಿದರು.

ಇದೇ ವೇಳೆ ಕೊರೊನಾ ಕಾಲದಲ್ಲಿ ಅತ್ಯಂತ ಶಿಸ್ತುಬದ್ಧ ಚುನಾವಣೆ ನಡೆಸಿ ಯಶಸ್ವಿಯಾದ ಚುನಾವಣಾ ಆಯೋಗ ಮತ್ತು ಭದ್ರತಾ ಪಡೆಗಳಿಗೆ ಪ್ರಧಾನಿ ಮೋದಿ ಅಭಿನಂದನೆ ಸಲ್ಲಿಸಿದರು. ಅಲ್ಲದೇ ಕೊರೊನಾ ಮಾರ್ಗಸೂಚಿಗಳನ್ನು ಪಾಲಿಸಿ ಮತದಾನ ಮಾಡಿದ ಬಿಹಾರದ ಮತದಾರರಿಗೂ ಪ್ರಧಾನಿ ಮೋದಿ ಅಭಿನಂದನೆ ಸಲ್ಲಿಸಿದರು.

ಇನ್ನು ತಮ್ಮ ಭಾಷಣದಲ್ಲಿ ಅಭಿವೃದ್ಧಿಯ ಮಂತ್ರವನ್ನು ಪದೇ ಪದೇ ಪಠಿಸಿದ ಪ್ರಧಾನಿ ಮೋದಿ, ಐಕ್ಯತೆಯತ್ತ ಭಾರತ ಎಂದು ಹೇಳಿ ಪಶ್ಚಿಮ ಬಂಗಾಳದ ಜನರನ್ನು ತಲುಪಲು ಪ್ರಯತ್ನಿಸಿದರು.

ಮುಂದಿನ ವರ್ಷ(2021)ದಲ್ಲಿ ಪಶ್ಚಿಮ ಬಂಗಾಳದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಬಿಜೆಪಿ ಈಗಿನಿಂದಲೇ ಈ ಚುನಾವಣೆಗೆ ಭರ್ಜರಿ ತಯಾರಿ ನಡೆಸಿದೆ ಎಂಬುದು ಖಚಿತ.

ಇನ್ನು ಬಿಜೆಪಿ ಸಂಭ್ರಮಾಚರಣೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೇರಿದಂತೆ ಹಲವು ಹಿರಿಯ ಬಿಜೆಪಿ ನಾಯಕರು ಉಪಸ್ಥಿತರಿದ್ದರು.

Comments are closed.