Uncategorized

ರಾಜ್ಯದಲ್ಲಿ ಭಾರೀ ಮಳೆಗೆ 7 ಮಂದಿ ಬಲಿ

Pinterest LinkedIn Tumblr


ಬೆಂಗಳೂರು: ಮಲೆನಾಡು, ಕೊಡಗು, ಕರಾವಳಿ ಭಾಗದಲ್ಲಿ ಮುಂಗಾರು ಅಬ್ಬರಿಸುತ್ತಿದ್ದು, ಮಳೆ ಸಂಬಂಧಿ ಅವಘಡಗಳಲ್ಲಿ 7 ಮಂದಿ ಅಸುನೀಗಿದ್ದಾರೆ.

ಮಡಿಕೇರಿ ಸಮೀಪ ಕಾಟಕೇರಿಯಲ್ಲಿ ಗುಡ್ಡ ಕುಸಿದು ಅದರ ಅವಶೇಷಗಳಡಿ ಸಿಲುಕಿ ಯಶವಂತ್‌, ವೆಂಕಟರಮಣ ಹಾಗೂ ಪವನ್‌ ಎಂಬುವರು ಮೃತಪಟ್ಟಿದ್ದಾರೆ. ಯತೀಶ್‌ ಎಂಬುವರು ಗಾಯಗೊಂಡಿದ್ದಾರೆ. ಕಲಬುರಗಿ ಜಿಲ್ಲೆ ಆಳಂದ ತಾಲೂಕಿನ ಹಿತ್ತಲಶಿರೂರ ಗ್ರಾಮದಲ್ಲಿ ಮನೆಯ ಗೋಡೆ ಕುಸಿದ ಪರಿಣಾಮ ಪಕ್ಕದ ಮನೆಯಲ್ಲಿ ಮಲಗಿದ್ದ ಲಕ್ಷ್ಮೀಬಾಯಿ ಪ್ರಭು ವಡ್ಡರ (30) ಹಾಗೂ ಅವರ ಪುತ್ರಿಯರಾದ ಅಂಬಿಕಾ ಪ್ರಭು (11), ಯಲ್ಲಮ್ಮ ಪ್ರಭು ವಡ್ಡರ (9) ಎಂಬುವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಲಕ್ಷ್ಮೀಬಾಯಿ ಪತಿ ಪ್ರಭು ವಡ್ಡರ ಗಾಯಗೊಂಡಿದ್ದಾರೆ. ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಕೋಣಂದೂರಿನಲ್ಲಿ ಮನೆಯ ಗೋಡೆ ಕುಸಿದು ಕೂಲಿ ಕಾರ್ಮಿಕ ಆಯುಬ್‌ ಎಂಬುವರ ಪುತ್ರ ಮಸೂದ್‌ (5) ಎಂಬ ಮಗು ಮೃತಪಟ್ಟಿದೆ. ಜಿಲ್ಲಾ ಧಿಕಾರಿ ದಯಾನಂದ್‌ ಭೇಟಿ ನೀಡಿ, ಸರ್ಕಾರದ ವತಿಯಿಂದ ಮೃತ ಕುಟುಂಬಕ್ಕೆ 5 ಲಕ್ಷ ರೂ.ಪರಿಹಾರದ ಚೆಕ್‌ ವಿತರಿಸಿದರು. ಉತ್ತರ ಕನ್ನಡ ಜಿಲ್ಲೆ ಯಲ್ಲಾಪುರ ತಾಲೂಕಿನ ಚಿಕ್ಕಬಿಳ್ಳಿಯಲ್ಲಿ ಕಾಲು ಜಾರಿ ಹೊಂಡಕ್ಕೆ ಬಿದ್ದು ಸುನೀಲ್‌ ರುಜಾರ ಸಿದ್ದಿ (27) ಎಂಬ ಯುವಕ ಮೃತಪಟ್ಟಿದ್ದಾನೆ.

ಮಡಿಕೇರಿ ಸಮೀಪದ ಕಾಂಡನಕೊಲ್ಲಿ ಹಾಲೇರಿ ವಿಭಾಗದಲ್ಲಿ ಧರೆ ಕುಸಿದು 200ಕ್ಕೂ ಹೆಚ್ಚು, ವೀರಾಜಪೇಟೆ ತಾಲೂಕಿನ ದೇವಮಾನಿಯಲ್ಲಿ ಮೂವರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮೂವತ್ತೂಕ್ಲು ಗ್ರಾಮದಲ್ಲಿ ಮನೆ ಮೇಲೆ ಗುಡ್ಡ ಕುಸಿದು ಮೂವರು ಗಾಯಗೊಂಡಿದ್ದಾರೆ. ಸುಬ್ರಹ್ಮಣ್ಯ ಸಮೀಪ ಗೋಳಾÂಡಿಯಲ್ಲಿ ಗುಡ್ಡ ಕುಸಿದು ಗಂಗಮ್ಮ ಎಂಬುವರ ಎರಡೂ ಕಾಲುಗಳು ತುಂಡಾಗಿವೆ.

ನದಿಗಳಲ್ಲಿ ಪ್ರವಾಹ:
ಜಲಾನಯನ ಪ್ರದೇಶಗಳಲ್ಲಿ ಮಳೆ ಅಬ್ಬರ ಮುಂದುವರಿದಿದ್ದು, ಲಿಂಗನಮಕ್ಕಿ ಜಲಾಶಯದ 7 ಗೇಟ್‌ಗಳ ಮೂಲಕ 10 ಸಾವಿರ ಕ್ಯೂಸೆಕ್‌, ಕಬಿನಿ ಜಲಾಶಯದಿಂದ 70 ಸಾವಿರ, ಹಾರಂಗಿಯಿಂದ 36,866 ಕ್ಯೂಸೆಕ್‌, ಹೇಮಾವತಿಯಿಂದ 49,750 ಕ್ಯೂಸೆಕ್‌, ಹಿಪ್ಪರಗಿ ಜಲಾಶಯದಿಂದ 93 ಸಾವಿರ, ತುಂಗಭದ್ರಾ ಜಲಾಶಯದಿಂದ 2.20 ಲಕ್ಷ ಕ್ಯೂಸೆಕ್‌, ಕೆಆರ್‌ಎಸ್‌ನಿಂದ 1.5 ಲಕ್ಷ ಕ್ಯೂಸೆಕ್‌ ನೀರನ್ನು ಹೊರಕ್ಕೆ ಬಿಡಲಾಗಿದೆ. ಪಯಸ್ವಿನಿ, ತುಂಗಾ, ಶರಾವತಿ, ಕಾವೇರಿ, ತುಂಗಭದ್ರಾ, ಕುಮಾರಧಾರಾ ನದಿಯಲ್ಲಿ ನೆರೆ ನೀರು ಉಕ್ಕಿ ಹರಿಯುತ್ತಿದ್ದು, ನದಿ ಪಾತ್ರದ ಪ್ರದೇಶಗಳು ಜಲಾವೃತವಾಗಿವೆ.

ಸೋಮವಾರಪೇಟೆ ತಾಲೂಕಿನ ಶಿರಂಗಳ್ಳಿಯ 150ಕ್ಕೂ ಹೆಚ್ಚು ಮಂದಿ ಗ್ರಾಮ ತೊರೆದಿದ್ದು, ಸಮೀಪದ ತಂಗುದಾಣದಲ್ಲಿ ಆಶ್ರಯ ಪಡೆದಿದ್ದಾರೆ. ಮಡಿಕೇರಿ ಸಮೀಪದ ಕಾಲೂರು ದ್ವೀಪದಂತಾಗಿದೆ. ವೀರಾಜಪೇಟೆ ತಾಲೂಕಿನ ಕರಡಿಗೋಡುವಿನಲ್ಲಿ ಮನೆಗಳು ಮುಳುಗುವ ಹಂತ ತಲುಪಿದ್ದು, ನಿವಾಸಿಗಳನ್ನು ತೆಪ್ಪದ ಮೂಲಕ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗುತ್ತಿದೆ. ಕೊಡಗಿನ ಶಾಲೆಗಳಿಗೆ 2 ದಿನ, ಶೃಂಗೇರಿ ತಾಲೂಕಿನ ಶಾಲೆಗಳಿಗೆ 1 ದಿನ ರಜೆ ಘೋಷಿಸಲಾಗಿದೆ. ನಂಜನಗೂಡು ಶ್ರೀಕಂಠೇಶ್ವರ ದೇವಸ್ಥಾನದ ಹದಿನಾರು ಕಾಲು ಮಂಟಪ, ಸ್ನಾನಘಟ್ಟಗಳು ಮುಳುಗಡೆಯಾಗಿವೆ. ಕಂಪ್ಲಿ ತಾಲೂಕಿನ 7 ಗ್ರಾಮಗಳು ನಡುಗಡ್ಡೆಗಳಾಗಿವೆ. ಗುಡ್ಡ ಕುಸಿಯುತ್ತಿರುವುದರಿಂದ ಚಿಕ್ಕಮಗಳೂರು ಜಿಲ್ಲೆಯ ಮುಳ್ಳಯ್ಯನಗಿರಿ ಬೆಟ್ಟಕ್ಕೆ ಪ್ರವಾಸಿಗರಿಗೆ ನಿರ್ಬಧ ಹೇರಲಾಗಿದೆ.

ಸಂಚಾರ ಸ್ಥಗಿತ:
ಕಂಪ್ಲಿ-ಗಂಗಾವತಿ, ಕಂಪ್ಲಿ-ಸಿರಗುಪ್ಪ, ಹೂವಿನಹಡಗಲಿ ತಾಲೂಕಿನ ಮಕರಬ್ಬಿ-ಬ್ಯಾಲಹುಣಿ, ಮೈಸೂರು-ನಂಜನಗೂಡು, ಸುಳ್ಯ-ಸಂಪಾಜೆ, ಮಡಿಕೇರಿ-ಮಂಗಳೂರು, ಮಡಿಕೇರಿ-ಸೋಮವಾರಪೇಟೆ-ಸಕಲೇಶಪುರ, ಕುಶಾಲನಗರ-ಹಾಸನ, ವೇಣೂರು-ಮೂಡಬಿದಿರೆ ರಾಜ್ಯ ಹೆದ್ದಾರಿಯಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿದೆ.

Comments are closed.