ಕರ್ನಾಟಕ

ಕೊಡಗು ಜಿಲ್ಲೆಯಲ್ಲಿ ಭಾರೀ ಮಳೆ: ರಕ್ಷಣೆಗೆ ಧಾವಿಸಿದ ಸೇನೆ

Pinterest LinkedIn Tumblr


ಮಡಿಕೇರಿ: ಮಳೆ ಹಾಗೂ ಗುಡ್ಡ ಕುಸಿತದಿಂದ ಕೊಡಗಿನಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಜನರ ರಕ್ಷಣೆಗೆ ಸೇನಾಪಡೆ ಧಾವಿಸಿದೆ.

ಕೊಡಗಿನ ಮಕ್ಕಂದೂರು, ಮುಕೋಡ್ಲು, ದೇವಸ್ತೂರು, ಕಾಲೂರು, ಮೇಘತಾಳು ಗ್ರಾಮಗಳ ನಡುವಿನ ಕೋಟೆ, ಬೆಟ್ಟ ಕುಸಿಯುವ ಭೀತಿ ಹೆಚ್ಚಿದೆ.

ಈಗಾಗಾಲೇ ಈ ಭಾಗದಲ್ಲಿ ಗುಡ್ಡ ಜರಿದು ಈ ಗ್ರಾಮಗಳು ಸಂಪರ್ಕ ಕಡಿದುಕೊಂಡಿವೆ. ಹಲವು ಮನೆಗಳು ಕೊಚ್ಚಿ ಹೋಗಿವೆ. ಇಡೀ ಬೆಟ್ಟವೇ ಜರಿಯುತ್ತಿರುವುದರಿಂದ ಹಲವು ಮಂದಿ ಅದರ ಅಡಿಯಲ್ಲಿ ಸಿಕ್ಕಿಕೊಂಡಿರುವ ಶಂಕೆ ಇದೆ.

ಗ್ರಾಮಕ್ಕೆ ಹೆಲಿಕಾಪ್ಟರ್‌ ಬಿಟ್ಟರೆ ತಲುಪಲು ಯಾವುದೇ ದಾರಿ ಇಲ್ಲದ ಕಾರಣ ಸಮಸ್ಯೆ ಸ್ಟೃಯಾಗಿದೆ. ಹಲವು ಮಂದಿ ಬೆಟ್ಟ ಏರಿ ಹೆಲಿಕಾಪ್ಟರ್ ನಿರೀಕ್ಷೆಯಲ್ಲಿದ್ದಾರೆ. ಆದರೆ, ಪ್ರತಿಕೂಲ ಹವಾಮಾನದಿಂದಾಗಿ ಹೆಲಿಕಾಪ್ಟರ್ ತಲುಪುವುದು ಕಷ್ಟವಾಗಿದೆ ಎನ್ನಲಾಗಿದೆ. ಗುರುವಾರ ಕಾಟಕೇರಿಯಲ್ಲಿ ಗುಡ್ಡ ಕುಸಿದು ಮೂವರು ಮೃತರಾಗಿದ್ದು, ಶುಕ್ರವಾರ ಮತ್ತೊಬ್ಬರು ಸಾವಿಗೀಡಾಗಿದ್ದಾರೆ.

ಎಂಎಲ್‌ಸಿ ವೀಣಾ ಅಚ್ಚಯ್ಯ ಅವರ ಮನೆಯಲ್ಲಿ 200 ಮಂದಿ, ಜಿ.ಪಂ ಮಾಜಿ ಅಧ್ಯಕ್ಷ ಕುಶಾಲಪ್ಪ ಅವರ ಮನೆಯಲ್ಲಿ 250 ಮಂದಿ, ಸೂರ್ಲಬ್ಬಿಯ ಅಂಗಡಿ ಬಳಿಯಲ್ಲಿ 100 ಮಂದಿ ಆಶ್ರಯ ಪಡೆದಿದ್ದಾರೆ. ಇವರಿಗೆ ಗ್ರಾಮ ಬಿಟ್ಟು ಹೊರಗೆ ಬರಲು ಸಾಧ್ಯವಾಗುತ್ತಿಲ್ಲ. ವೃದ್ಧರು, ಮಕ್ಕಳು, ಮಹಿಳೆಯರು ಇನ್ನೂ ಬೆಟ್ಟದಲ್ಲಿದ್ದಾರೆ.

ಇವರ ರಕ್ಷಣೆಗೆ ಬೆಂಗಳೂರಿನಿಂದ 70 ಸೇನಾ ಸಿಬ್ಬಂದಿ ಕರೆಸಲಾಗಿದ್ದು, ಗ್ರಾಮಗಳಿಗೆ ಟ್ರಕ್ ಮೂಲಕ ತೆರಳಲು ಸಾಧ್ಯವಾದೆ ಕಾಲ್ನಡಿಗೆಯಲ್ಲಿ ಸಂತ್ರಸ್ತರ ರಕ್ಷಣೆಗೆ ತೆರಳಿದ್ದಾರೆ. ಇನ್ನೂ 80 ಮಂದಿಯ ತಂಡ ಮಡಿಕೇರಿಯತ್ತ ತಲುಪಲಿದೆ. ಕಾರಾವಾರದಿಂದ ನೌಕಾದಳದ ಎರಡು ತಂಡ ಕೊಡಗಿಗೆ ತಲುಪಲಿದೆ. ಜಿಲ್ಲೆಯಲ್ಲಿ ಒಟ್ಟಾರೆ 20 ಗಂಜಿ ಕೇಂದ್ರಗಳನ್ನು ತೆರೆಯಲಾಗಿದೆ. ಮಡಿಕೇರಿಯ ಬಹುತೇಕ ಮನೆಗಳಿಗೆ ಹಾನಿಯಾಗಿದೆ. ಹಲವು ನೆಲಕಚ್ಚಿದೆ. ಹಲವು ಮನೆಗಳ ಒಳಗೆ ಜಲಸ್ಟಯಾಗಿದೆ.

ರಸ್ತೆ ಸಂಪರ್ಕ ಸಂಪೂರ್ಣ ಬಂದ್‌

ಮಡಿಕೇರಿ-ಮಂಗಳೂರು ರಸ್ತೆಯ ತಾಳತ್‌ಮನೆಯಲ್ಲಿ ಸಂಪೂರ್ಣ ಕೊಚ್ಚಿಹೋಗಿದೆ. ಕರಿಕೆಯಲ್ಲಿಯೂ ಭೂಮಿ ಕುಸಿದಿದೆ. ಬೇತ್ರಿ ನದಿ ಸೇತುವೆಯನ್ನು ಮುಳುಗಿಸಿದ ಹಿನ್ನೆಲೆಯಲ್ಲಿ ವಿರಾಜಪೇಟೆ ಮಾರ್ಗ ಹಾಗೂ ಕುಶಾಲನಗರದ ಬಳಿ ತಾವರೆಕೆರೆ ತುಂಬಿ ಹರಿಯುತ್ತಿರುವುದರಿಂದ ಮಡಿಕೇರಿ ಮೈಸೂರು ರಸ್ತೆಯೂ ಬಂದ್ ಆಗಿದೆ. ಮಡಿಕೇರಿ- ಹಟ್ಟಿಹೊಳೆ ರಸ್ತೆ ಕೊಚ್ಚಿ ಹೋಗಿದೆ.

ದೇಶಪಾಂಡೆ ಭೇಟಿ

ಕಂದಾಯ ಸಚಿವ ದೇಶಪಾಂಡೆ, ಜಿಲ್ಲಾ ಉಸ್ತುವಾರಿ ಸಚಿವ ಸಾರಾ ಮಹೇಶ್ ಜಿಲ್ಲೆಯಲ್ಲಿ ಬೀಡುಬಿಟ್ಟಿದ್ದಾರೆ. ಜಿಲ್ಲೆಗೆ ಅಕ್ಕಪಕ್ಕದ ಜಿಲ್ಲೆಗಳಿಂದ ಆಹಾರ ಸಾಮಗ್ರಿ, ವೈದ್ಯಕೀಯ ತಂಡ, ಕಂಬಳಿ, ಸೀಮೆಣ್ಣೆ, ಗ್ಯಾಸ ಕಳುಹಿಸುವಂತೆ ಮುಖ್ಯ ಕಾರ್ಯದರ್ಶಿಗಳಿಗೆ ಸೂಚಿಸಿದ್ದಾರೆ. ಕೇಂದ್ರ ಸರಕಾರದ ನೆರವನ್ನೂ ಕೋರಲಾಗಿದೆ. ಮಡಿಕೇರಿಯ ಜಿಲ್ಲಾಕಾರಿಗಳ ಕಚೇರಿಯಲ್ಲಿ ಸಚಿವ ದೇಶಪಾಂಡೆ, ಸಾ.ರಾ ಮಹೇಶ್ ಅವರುಗಳು ಅಕಾರಿಗಳೊಂದಿಗೆ ಚರ್ಚೆ ನಡೆಸಿದರು.

ವೇಳೆ ದೇಶಪಾಂಡೆ ಅವರನ್ನು ಭೇಟಿ ಮಾಡಿದ ವಿಧಾನಪರಿಷತ್‌ ಸದಸ್ಯೆ ವೀಣಾ ಅಚ್ಚಯ್ಯ, ನಮಗೆ ನಿಮ್ಮ ಯಾವು ನೆರವು ಬೇಡ, ನಮ್ಮ ಗ್ರಾಮಗಳಲ್ಲಿ ಸಿಲುಕಿಕೊಂಡಿರುವ ಜನರನ್ನು ಮೊದಲು ರಕ್ಷಿಸಿ ಎಂದು ಕಣ್ಣೀರು ಹಾಕಿದರು. ನಾನು ಕೂಡ ಊರಿಗೆ ತೆರಳಲು ಸಾಧ್ಯವಾಗದೆ ಮಡಿಕೇರಿಯಲ್ಲಿದ್ದೇನೆ. ನನ್ನ ಮನೆಯಲ್ಲಿ 300 ಜನರು ಆಶ್ರಯ ಪಡೆದಿದ್ದಾರೆ. ಆದರೆ, ಮಕ್ಕಳು, ಹೆಂಗಸರು ಬೆಟ್ಟದಲ್ಲಿ ನೆರವಿಗೆ ಅಂಗಲಾಚುತ್ತಿದ್ದಾರೆ. ಮೊದಲು ಅವರನ್ನು ರಕ್ಷಿಸಲು ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿದರು.

Comments are closed.