Uncategorized

ಗೌರಿ ಲಂಕೇಶ್ ಹಂತಕ ಪರಶುರಾಮ್ ತಾಯಿ ಸ್ಥಿತಿ ಚಿಂತಾಜನಕ

Pinterest LinkedIn Tumblr


ಸಿಂದಗಿ(ವಿಜಯಪುರ): ಶಂಕಿತ ಗೌರಿ ಹಂತಕ ಪರಶುರಾಮ ವಾಗ್ಮೋರೆ ತಾಯಿ ಸ್ಥಿತಿ ಚಿಂತಾಜನಕವಾಗಿದ್ದು, ವೈದ್ಯರು ಅವರಿಗೆ ಮನೆಯಲ್ಲಿಯೇ ಚಿಕಿತ್ಸೆ ಕೊಡುತ್ತಿದ್ದಾರೆ.

ಮಗನ ಬಂಧನವಾಗುತ್ತಿದ್ದಂತೆ ಆಘಾತಕ್ಕೆ ಒಳಗಾಗಿದ್ದ ತಾಯಿ, ಆತನಿಗೇನಾದರೂ ಆದರೆ ಆತ್ಮಹತ್ಯೆ ಮಾಡಿಕೊಳ್ಳುವೆ ಎಂದು ನಿನ್ನೆ ಹೇಳಿದ್ದರು.

ನಮ್ದು ಚಾಕ್ರಿ ಮಾಡಿ ಬದುಕು.. ಅವನದೇನೂ ತಪ್ಪಿಲ್ಲರ್ರಿ..ನಾವ್‌ ಕಂಡಂಗ ಇಂತಹ ಕೆಲಸ ಅಂವಾ ಮಾಡಲ್ಲರ್ರೀ..ಅವನಿಗೇನಾದರೂ ಹೆಚ್ಚು ಕಡಿಮೆ ಆದ್ರ ನಾ ಉಳಿಯಂಗಿಲ್ಲ..ಆತ್ಮಹತ್ಯೆ ಮಾಡ್ಕೋತೀನ್ರಿ. ಈ ಗೋಳಿನ ಮಾತುಗಳು ಮಂಗಳವಾರ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದ ಪರಶುರಾಮ ವಾಗ್ಮೋರೆ ತಾಯಿ ಜಾನಕಿ ಅವರದ್ದು.

ಹತ್ಯೆಯ ಸುದ್ದಿ ಕೇಳಿ ಮನೆ ತೊರೆದಿದ್ದ್ದ ಪರಶುರಾಮ ವಾಗ್ಮೋರೆ ತಂದೆ ಅಶೋಕ ಹಾಗೂ ಮಗನ ಮೇಲಿನ ಆರೋಪ ಕೇಳಿ ಅಸ್ವಸ್ಥಗೊಂಡಿದ್ದ ತಾಯಿ ಜಾನಕಿಬಾಯಿ ವಾಗ್ಮೋರೆ 3 ಗಂಟೆ ನಂತರ ಮನೆಗೆ ಬಂದು ಮಾಧ್ಯಮದವರೊಂದಿಗೆ ತಮ್ಮ ನೋವನ್ನು ಹಂಚಿಕೊಂಡರು.

‘ಅಮಾಯಕ ನನ್ನ ಮಗ ಪರಶುರಾಮನನ್ನು ಪೊಲೀಸರು ಕೊಲೆ ಪ್ರಕರಣದಲ್ಲಿ ಸಿಲುಕಿಸುತ್ತಿದ್ದಾರೆ. ಅಂವಾ ಕೊಲೆ ಮಾಡ್ಯಾನ ಅನ್ನೂದು ಪೂರಾ ಸುಳ್ಳು ಐತ್ರಿ. ಪೊಲೀಸರು ಹೊಡಿದು ಬಡಿದು ಹಿಂಗ್‌ ಹೇಳಿಸ್ಯಾರ. ಒಂದೆರೆಡು ದಿನದ ಹಿಂದೆ ಸಾಮಾನ್ಯರಂತೆ ಬಂದ ಪೊಲೀಸರು ಪರಶುರಾಮನನ್ನು ಕರ್ಕೊಂಡು ಹೋಗ್ಯಾರ. ನಂತರ ವಿಚಾರಣೆ ಮಾಡಿ ಬಿಡ್ತೀವಿ ಅಂದಿದ್ದರು. ಎರಡು ದಿನ ಆದ್ರೂ ಮಗ ಬರಲಿಲ್ಲ. ಅನ್ನೂ ಚಿಂತಿಯಿಂದ ಪೊಲೀಸರಿಗೆ ಭೇಟಿ ಮಾಡಿ ಬಂದೀವಿ. ಬರ್ತಾನ ಅಂತಾ ಹೇಳಿದ್ದರು. ಇವತ್ತ ಬೆಂಗಳೂರಿನ ಪೊಲೀಸರೊಬ್ಬರು ನಮ್ಮ ಸಂಬಂಧಿಕರಿಗೆ ಫೋನ್‌ ಮಾಡಿ ಬೆಂಗಳೂರಿಗೆ ಬರ್ಲಾಕ ಹೇಳಿದ್ದರ್ರಿ. ನಾವು ತಯಾರಾಗಿದ್ದೆವು. ಆದ್ರ ಮಧ್ಯಾಹ್ನ ಪರಶು ಕೊಲೆ ಮಾಡ್ಯಾನ ಅನ್ನೂ ಸುದ್ದಿ ಕೇಳಿ ಎದಿ ಒಡೆದಂಗಾಗೇವಿ ‘ ಎಂದು ಕಣ್ಣೀರಾದರು.

‘ದೇವರು ಅಂದ್ರ ಅವನಿಗೆ ಪ್ರೀತಿ ಜಾಸ್ತಿ. ಸಂಘಟನೆ ಎಂದರೆ ಕೆಲಸ ಬಿಟ್ಟು ಹೋಗಿ ಮುಂದೆ ನಿಲ್ಲುತ್ತಿದ್ದ. ಕೊಲೆ ಮಾಡುವಂತಹ ಕಟುಕುತನ ಅವನಲ್ಲಿರಲಿಲ್ಲ ಎನ್ನುವ ಇಡೀ ಕುಟುಂಬ ಹಾಗೂ ಸಮಾಜದ ಜನರು ಘಟನೆಯ ಬಗ್ಗೆ ನಾನಾ ಚರ್ಚೆ ನಡೆಯುತ್ತಿದ್ದರೂ ದುಃಖದ ಸ್ಥಿತಿಯಲ್ಲಿರುವ ಆತನ ಕುಟುಂಬ ನಂಬದ ಸ್ಥಿತಿಯಲ್ಲಿದ್ದಾರೆ. ಅಂವಾ ಬೆಂಗಳೂರ ನೋಡೇ ಇಲ್ಲ. ಬೆಂಗಳೂರಿಗೆ ಹೋಗ್ತೀನಿ ಅಂತ ಅಂದಿಲ್ಲ. ಆದರೂ ಪೊಲೀಸರು ಅಲ್ಲಿಗೆ ಹೋಗಿ ಕೊಲೆ ಮಾಡಿ ಬಂದಾನ ಅಂತ ಹೇಳುತ್ತಿರುವುದು ಕಟ್ಟು ಕಥೆ. ಆ ಬಗ್ಗೆ ನನ್ನ ವಿಶ್ವಾಸ ಗಟ್ಟಿ ಐತಿ’ಎನ್ನುತ್ತಾರೆ ಆತನ ತಂದೆ ಅಶೋಕ ವಾಗ್ಮೋರೆ. ರಾತ್ರಿ ಎಸ್‌ಐಟಿ ಪೊಲೀಸರ ಸೂಚನೆ ಹಿನ್ನೆಲೆಯಲ್ಲಿ ಅಶೋಕ ವಾಗ್ಮೋರೆ ವಿಚಾರಣೆಗೆಂದು ಬೆಂಗಳೂರಿಗೆ ತೆರಳಿದರು.

Comments are closed.