Uncategorized

ನಾಳೆ ಮತ ಏಣಿಕೆ : ನೋ ವಿಜಯೋತ್ಸವ : ನೋ ಪಟಾಕಿ : ನೋ ಮೆರವಣಿಗೆ : :ಮಂಗಳೂರಿನಲ್ಲಿ ವ್ಯಾಪಕ ಬಂದೋ ಬಸ್ತ್ : ಮಧ್ಯಾಹ್ನ 2 ಗಂಟೆಯೊಳಗೆ ಪೂರ್ಣ ಫಲಿತಾಂಶ

Pinterest LinkedIn Tumblr

ಮಂಗಳೂರು, ಮೇ.14: ನಾಳೆ ಕರ್ನಾಟಕ ವಿಧಾನಸಭೆ ಚುನಾವಣೆ ಫಲಿತಾಂಶ ಹಿನ್ನೆಲೆಯಲ್ಲಿ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಮೇ ೧೫ ರಿಂದ ಜಿಲ್ಲೆಯಾದ್ಯಂತ ೧೪೪ ಸೆಕ್ಷನ್ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಎಂಟು ವಿಧಾನ ಸಭಾ ಕ್ಷೇತ್ರಗಳ ಮತ ಏಣಿಕೆ ಮೇ 15ರಂದು ಮಂಗಳೂರಿನ ಬೊಂದೆಲ್ ಸಂಯುಕ್ತ ಪದವಿ ಪೂರ್ವ ಕಾಲೇಜು ಮತ್ತು ಮಹಾತ್ಮ ಗಾಂಧಿ ಶತಾಬ್ಧಿ ಹಿ.ಪ್ರಾ.ಶಾಲೆಯಲ್ಲಿ ನಡೆಯಲಿದೆ.

ಪುತ್ತೂರು, ಬಂಟ್ವಾಳ, ಮಂಗಳೂರು, ಮಂಗಳೂರು ದಕ್ಷಿಣ, ಮಂಗಳೂರು ಉತ್ತರ, ಮೂಡುಬಿದಿರೆ, ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರಗಳ ಮತ ಏಣಿಕೆ ಕಾರ್ಯ ಸೇರಿದಂತೆ ಎಂಟು ವಿಧಾನ ಸಭಾ ಕ್ಷೇತ್ರಗಳ ಮತ ಏಣಿಕೆ ಕಾರ್ಯ ಮಂಗಳೂರಿನ ಬೊಂದೆಲ್ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ನಾಳೆ ಬೆಳಗ್ಗೆ 8ಗಂಟೆಯಿಂದನಡೆಯಲಿದೆ. ಈ ಹಿನ್ನೆಲೆಯಲ್ಲಿ ಇಂದು ಮಧ್ಯರಾತ್ರಿಯಿಂದ ಮೇ ೧೫ರ ಮಧ್ಯರಾತ್ರಿಯವರೆಗೆ ೧೪೪ ಸೆಕ್ಷನ್ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಆದೇಶಿಸಿದ್ದಾರೆ. ಜಿಲ್ಲೆಯಲ್ಲಿ ಕೋಮುಗಲಭೆಯಾಗುವ ಮುನ್ನೆಚ್ಚರಿಕೆಯಿಂದ ಜಿಲ್ಲಾಧಿಕಾರಿ ಈ ಆದೇಶ ನೀಡಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳ ಎಲ್ಲ 1,858 ಮತಗಟ್ಟೆಗಳಿಂದ ವಿದ್ಯುನ್ಮಾನ ಮತಯಂತ್ರಗಳು ಹಾಗೂ ವಿವಿಪ್ಯಾಟ್‌ ಯಂತ್ರಗಳನ್ನು ಮಂಗಳೂರಿನ ಬೋಂದೆಲ್‌ ಮಹಾತ್ಮಾ ಗಾಂಧಿ ಶತಾಬ್ದ ಹಿರಿಯ ಪ್ರಾಥಮಿಕ ಶಾಲೆಯ ಸ್ಟ್ರಾಂಗ್‌ ರೂಂನಲ್ಲಿ ಇರಿಸಲಾಗಿದೆ. ಶನಿವಾರ ಸಂಜೆ ಮತದಾನ ಮುಗಿದ ಬಳಿಕ ಎಲ್ಲ ಮತಗಟ್ಟೆಗಳಿಂದ ಮತಯಂತ್ರ ಹಾಗೂ ವಿವಿಪ್ಯಾಟ್‌ಗಳನ್ನು ಆಯಾ ಕ್ಷೇತ್ರಗಳ ಮಸ್ಟರಿಂಗ್‌ ಕೇಂದ್ರಗಳಿಗೆ ತಂದು, ಅಲ್ಲಿ ಕ್ಷೇತ್ರ ಚುನಾವಣಾಧಿಕಾರಿಗಳ ಸಮ್ಮುಖ ದಲ್ಲಿ ಡಿ-ಮಸ್ಟರಿಂಗ್‌ ಪ್ರಕ್ರಿಯೆ ನಡೆಸಲಾಗಿದೆ.

ಮೇ 15ರಂದು 14 ಕೊಠಡಿಗಳಲ್ಲಿ ಮತ ಎಣಿಕೆ ನಡೆಯಲಿದ್ದು, ಇದಕ್ಕಾಗಿ ಒಟ್ಟು 112 ಮೇಜುಗಳನ್ನು ಜೋಡಿಸಿಡಲಾಗುತ್ತದೆ. ಸುಮಾರು 600ಕ್ಕೂ ಅಧಿಕ ಅಧಿಕಾರಿಗಳು/ಸಿಬಂದಿಗಳು ಮತ ಎಣಿಕೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಮತ ಎಣಿಕೆ ಕೇಂದ್ರದಲ್ಲಿ ಮೊಬೈಲ್‌ ಫೋನ್‌ಗಳ ಬಳಕೆಗೆ ಅವಕಾಶವಿಲ್ಲ. ಮೇ 15ರ ಮಧ್ಯಾಹ್ನದ ವೇಳೆಗೆ ಪೋಸ್ಟಲ್‌ ಬ್ಯಾಲೆಟ್‌ ಸಹಿತ ಎಲ್ಲ ಮತಗಳ ಎಣಿಕೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ.

ನಿಷೇಧಾಜ್ಞೆ ಜಾರಿಯಲ್ಲಿರುವ ಹಿನ್ನಲೆಯಲ್ಲಿ ಚುನಾವಣೆಯಲ್ಲಿ ಗೆದ್ದ ಅಭ್ಯರ್ಥಿಗಳಿಗೆ ವಿಜಯೋತ್ಸವ ಭಾಗ್ಯ ಇಲ್ಲದಂತಾಗಿದೆ. ಆದೇಶ ಮೀರಿ ವಿಜಯೋತ್ಸವ ಮಾಡಿದರೆ ಕಠಿಣ ಕ್ರಮದ ಎಚ್ಚರಿಕೆ ನೀಡಲಾಗಿದೆ.ಪೊಲೀಸ್‌, ಅರೆಸೇನಾ ಪಡೆ, ಕ್ಷಿಪ್ರ ಕಾರ್ಯಾಚರಣೆ ಪಡೆಯ ಸಿಬಂದಿಯ ತಂಡಗಳಿಂದ ಭದ್ರತಾ ಕೇಂದ್ರಕ್ಕೆ ಮೂರು ಹಂತದಲ್ಲಿ ಭದ್ರತೆ ಒದಗಿಸಲಾಗಿದೆ.

ಮಂಗಳವಾರ ಬೆಳಗ್ಗೆ 8 ಗಂಟೆಯಿಂದ ಅಂಚೆಯ ಮೂಲಕ ಸ್ವೀಕೃತ ಮತಗಳ ಎಣಿಕೆಯನ್ನು ಚುನಾವಣಾಧಿಕಾರಿ ಮೇಜಿನಲ್ಲಿ ನಡೆಸಲಾಗುತ್ತದೆ. ಈ ಬಾರಿ ಬಾರ್‌ಕೋಡ್‌ ಇರುವ ಮತ ಪತ್ರಗಳನ್ನು ಕಳುಹಿಸಲಾಗಿದ್ದು, ಮತ ಎಣಿಕೆಯಂದು ಅದೇ ಪತ್ರ ನಮಗೆ ಬಂದಿದೆಯೇ ಎಂದು ತಿಳಿಯಲು ಬಾರ್‌ಕೋಡ್‌ ಪರಿಶೀಲನೆ ನಡೆಯಲಿದೆ. ಇದು ಈ ಬಾರಿಯ ಹೊಸತು. ಅದರೊಂದಿಗೆ ಪ್ರತೀ ಕ್ಷೇತ್ರದ ತಲಾ ಒಂದೊಂದು ವಿವಿಪ್ಯಾಟ್‌ ಅನ್ನು ತೆರೆದು ಅದರಲ್ಲಿರುವ ಮತದಾಖಲೆ ಹಾಗೂ ಇವಿಎಂ ದಾಖಲೆಯನ್ನು ತಾಳೆ ಮಾಡಿ ನೋಡಲಾಗುತ್ತದೆ. ಮತ ಎಣಿಕೆ ಸಂಬಂಧ ವ್ಯಾಪಕ ಭದ್ರತೆ ಹಾಗೂ ಸಿದ್ಧತೆಗಳನ್ನು ಜಿಲ್ಲಾಡಳಿತದ ವತಿಯಿಂದ ನಡೆಸಲಾಗಿದೆ. ಕಾನೂನು ಭಂಗ ಗೊಳಿಸಿದ್ರೆ ಕಠಿಣ ಕ್ರಮ ಕೈಗೊಳ್ಳಲಾಗುವುದು.

14ನೇ ತಾರೀಖು ಮಧ್ಯರಾತ್ರಿ ಯಿಂದ 16 ನೇ ತಾರೀಖು ಮಧ್ಯರಾತ್ರಿ ತನಕ ಎರಡು ದಿನ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ144 ಸೆಕ್ಷನ್ ಜಾರಿ ಮಾಡಲಾಗಿದೆ. ಜಿಲ್ಲೆಯಲ್ಲಿ ಇಂದು ಮಧ್ಯ ರಾತ್ರಿಯಿಂದ ನಾಳೆ ಮಧ್ಯರಾತ್ರಿ ತನಕ ಮದ್ಯಮಾರಾಟ ನಿಷೇಧ ಮಾಡಲಾಗಿದೆ. ಮತ ಎಣಿಕೆ ಕಾರ್ಯ ಕ್ರಮಬದ್ಧವಾಗಿರುತ್ತೆ. ನಿಧಾನವಾದ್ರೂ ಗೊಂದಲಕ್ಕೆ ಅವಕಾಶ ಇರೋದಿಲ್ಲ. ಸ್ಟ್ರಾಂಗ್ ರೂಂ ಗೆ ಮೂರು ಹಂತದ ಭಧ್ರತೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

ಈ ಹಿಂದೆ ಇಂತಹ ಮತ ಎಣಿಕೆ ಕೇಂದ್ರಗಳ ಎದುರು ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕರ್ತರು, ಅಭಿಮಾನಿಗಳು ಜಮಾಯಿಸುತ್ತಿದ್ದರು. ಪ್ರತಿ ಸುತ್ತಿನ ಅನಂತರವೂ ಘೋಷಣೆಯಾಗುವ ಫ‌ಲಿತಾಂಶಕ್ಕಾಗಿ ಕಾದು ಕುಳಿತು ಕೊಳ್ಳುತ್ತಿದ್ದರು. ಆದರೆ ಈಗ ಟಿ.ವಿ. ಮಾಧ್ಯಮ, ಸಾಮಾಜಿಕ ಜಾಲತಾಣಗಳ ವೇಗದ ಮಾಹಿತಿಯ ಕಾರಣದಿಂದ ಮತ ಎಣಿಕೆ ಕೇಂದ್ರಗಳತ್ತ ಆಗಮಿಸುವವರ ಸಂಖ್ಯೆ ಕಡಿಮೆ. ಆದಾಗ್ಯೂ ಮತ ಎಣಿಕೆ ಕೇಂದ್ರಗಳ ಎದುರು ಖುದ್ದು ನಿಂತು ಪಕ್ಕಾ ಫ‌ಲಿತಾಂಶ ತಿಳಿದುಕೊಳ್ಳಬೇಕು ಎಂಬ ಕುತೂಹಲಿಗಳು ಇದ್ದೇ ಇದ್ದಾರೆ.

ಈ ಬಾರಿ ಮತ ಎಣಿಕೆ ಕೇಂದ್ರದ ಸುತ್ತಮುತ್ತ ಸೇರಿದಂತೆ ಜಿಲ್ಲೆಯಾದ್ಯಂತ ಮೇ 15ರ ಬೆಳಗ್ಗೆ 6ರಿಂದ ಮೇ 17ರ ಬೆಳಗ್ಗೆ 6ರವರೆಗೆ ಸೆ. 144ರನ್ವಯ ನಿಷೇಧಾಜ್ಞೆ ಜಾರಿಗೊಳಿಸಿರುವುದು ಇಂತಹ ಕಾರ್ಯಕರ್ತರು, ಬೆಂಬಲಿಗರ ಉತ್ಸಾಹದ ಮೇಲೆ ಪ್ರಭಾವ ಬೀರುವುದೇ ಎಂದು ಕಾದು ನೋಡಬೇಕಿದೆ.

ಮತ ಎಣಿಕೆಯ ಕೊಠಡಿಗಳಲ್ಲಿ ವೆಬ್‌ಕಾಸ್ಟಿಂಗ್ ಹಾಗೂ ಸಿಸಿಟಿ ವ್ಯವಸ್ಥೆ :

ಆರಂಭದಲ್ಲಿ ಅಂಚೆ ಮತಗಳ ಎಣಿಕೆ ನಡೆಯಲಿದೆ. 380 ಸೇವಾ ಮತದಾರರಿಗೆ ಅಂಚೆ ಮತಪತ್ರವನ್ನು ಇಟಿಪಿಬಿಎಸ್ (ಇಲೆಕ್ಟ್ರಾನಿಕ್ ಮಾದರಿಯಲ್ಲಿ) ಕಳುಹಿಸಲಾಗಿದೆ. ಅವುಗಳ ಎಣಿಕೆ ಬಾರ್‌ಕೋಡ್‌ನ ಮೂಲಕ ನಡೆಯಲಿದೆ. ಉಳಿದಂತೆ 11,401 ಕರ್ತವ್ಯ ನಿರತ ಸಿಬ್ಬಂದಿಗಳಿಗೆ ಅಂಚೆ ಮೂಲಕ ಮತ ಪತ್ರಗಳನ್ನು ಕಳುಹಿಸಲಾಗಿದೆ. ಮೇ 15ರಂದು ಬೆಳಗ್ಗೆ 8 ಗಂಟೆಯವರೆಗೆ ಸ್ವೀಕೃತವಾಗುವ ಎಲ್ಲಾ ಅಂಚೆ ಮತಪತ್ರಗಳನ್ನು ಎಣಿಕೆ ಮಾಡಲಾಗುವುದು.

ಎಣಿಕೆ ಪ್ರಕ್ರಿಯೆ ಆರಂಭವಾದ 30 ನಿಮಿಷಗಳ ನಂತರ ಮತಗಟ್ಟೆಗಳಲ್ಲಿ ಇವಿಎಂನಲ್ಲಿ ದಾಖಲಾದ ಮತಗಳ ಎಣಿಕೆ ನಡೆಸಲಾಗುವುದು. ಪ್ರತಿ ಮತ ಎಣಿಕೆ ಟೇಬಲ್‌ಗೆ ಮತ ಎಣಿಕೆ ಮೇಲ್ವಿಚಾರಕರು, ಸಹಾಯಕ ಸಿಬ್ಬಂದಿ ಮತ್ತು ಮೈಕ್ರೋ ವೀಕ್ಷಕರನ್ನು ನೇಮಿಸಲಾಗಿದೆ. ಜಿಲ್ಲೆಯಲ್ಲಿ 1858 ಮತಗಟ್ಟೆಗಳಿದ್ದು, ಗರಿಷ್ಠ 18 ಎಣಿಕೆ ಸುತ್ತುಗಳು ನಡೆಯಲಿವೆ. ಮತ ಎಣಿಕೆಯ ಕೊಠಡಿಗಳಲ್ಲಿ ವೆಬ್‌ಕಾಸ್ಟಿಂಗ್ ವ್ಯವಸ್ಥೆ ಮತ್ತು ಸಿಸಿಟಿವಿಗಳನ್ನು ಅಳವಡಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಮೊಬೈಲ್, ಐಪ್ಯಾಡ್, ಲ್ಯಾಪ್‌ಟಾಪ್‌ಗೆ ನಿಷೇಧ :

ಚುನಾವಣಾ ಆಯೋಗದ ನಿರ್ದೇಶನದಂತೆ ಮತ ಚಲಾಯಿಸಲಾದ ಇವಿಎಂ/ವಿವಿ ಪ್ಯಾಟ್‌ಗಳ ಮೊದಲಾದ ಚುನಾವಣಾ ದಾಖಲೆಗಳನ್ನು ಇಡಲಾದ ಭದ್ರತಾ ಕೊಠಡಿಗಳಿರುವ ಮತ ಎಣಿಕೆ ಕೇಂದ್ರದ ಆವರಣದ 100 ಮೀ ವ್ಯಾಪ್ತಿಯೊಳಗೆ ಮೂರು ಹಂತದಲ್ಲಿ ಭದ್ರತಾ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಅನಧಿಕೃತ ವ್ಯಕ್ತಿ, ವಾಹನಗಳು ಪ್ರವೇಶಿಸದಂತೆ ತಡೆ ಬೇಲಿಯನ್ನು ನಿರ್ಮಿಸಿ ಭದ್ರತಾ ವಲಯ ಸ್ಥಾಪಿಸಲಾಗಿದೆ. ಮತ ಎಣಿಕೆಯ ಪ್ರವೇಶ ದ್ವಾರದ ಬಳಿ ಗೇಟು ನಿರ್ಮಿಸಿ ಅದನ್ನು ಹಾದು ಹೋಗುವ ಎಲ್ಲಾ ಜಿಲ್ಲಾ ಚುನಾವಣಾಧಿಕಾರಿ ಯಿಂದ ನಿಯೋಜಿತ ಅಧಿಕಾರಿ, ಸಿಬ್ಬಂದಿಯವರು ಹೊಂದಿರುವ ಭಾವಚಿತ್ರವಿರುವ ಗುರುತಿನ ಚೀಟಿಯನ್ನು ಪರಿಶೀಲಿಸಿ ಅನುಮತಿಸುವ ಬಗ್ಗೆ ಸ್ಥಳೀಯ ಪೊಲೀಸರನ್ನು ಕರ್ತವ್ಯದಲ್ಲಿರಿಸಲಾಗಿದೆ.

2ನೇ ಹಂತದ ಭದ್ರತೆ ಮತ ಎಣಿಕೆ ಆವರಣದ ಮದ್ಯದಲ್ಲಿ ಗೇಟು ನಿರ್ಮಿಸಿ ರಾಜ್ಯ ಶಸ್ತ್ರ ಸಜ್ಜಿತ ಪೊಲೀಸ್ ಪಡೆಗಳನ್ನು ಕರ್ತವ್ಯ ದಲ್ಲಿರಿಸಲಾಗಿದೆ. ಮತ ಎಣಿಕೆ ಕೇಂದ್ರವನ್ನು ಪ್ರವೇಶಿಸುವ ವ್ಯಕ್ತಿಗಳು ಬೆಂಕಿ ಪೆಟ್ಟಿಗೆ, ಶಸ್ತ್ರಾಸ್ತ್ರ ಸೇರಿದಂತೆ ಪ್ರತಿಬಂಧಕ ವಸ್ತುಗಳನ್ನು ಒಯ್ಯುವಂತಿಲ್ಲ. ಈ ಬಗ್ಗೆ ತಪಾಸಣೆಗೆ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ.

ಮತ ಎಣಿಕೆ ಕೇಂದ್ರದೊಳಗೆ ಮೊಬೈಲ್, ಐಪ್ಯಾಡ್, ಲ್ಯಾಪ್‌ಟಾಪ್ ಇತ್ಯಾದಿ ಇಲೆಕ್ಟ್ರಾನಿಕ್ ಉಪಕರಣ ಹಾಗೂ ಆಡಿಯೊ ವೀಡಿಯೊ ರೆಕಾರ್ಡ್‌ರ್‌ಗಳನ್ನು ನಿಷೇಧಿಸಲಾಗಿದೆ. 3ನೆ ಹಂತದ ಭದ್ರತೆಗಾಗಿ ಕೇಂದ್ರ ಶಸ್ತ್ರ ಸಜ್ಜಿತ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿದೆ. ಮತ ಎಣಿಕೆ ಕೊಠಡಿಯನ್ನು ಪ್ರವೇಶಿಸುವ ಸಿಬ್ಬಂದಿ, ಎಣಿಕೆ ಏಜೆಂಟರನ್ನು ತಪಾಸಣೆ ನಡೆಸಿ ಯಾವುದೇ ಅನಧಿಕೃತ ಉಪಕರಣ ಕೊಂಡೊಯ್ಯದಂತೆ ತಪಾಸಣೆ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್ ತಿಳಿಸಿದ್ದಾರೆ.

ಮಧ್ಯಾಹ್ನ 2 ಗಂಟೆಯೊಳಗೆ ಪೂರ್ಣ ಫಲೀತಾಂಶ ನಿರೀಕ್ಷೆ...

ಮೇ 15ರಂದು ಬೆಳಗ್ಗೆ 8 ಗಂಟೆಯಿಂದ ಬೊಂದೇಲ್‌ನ ಮಹಾತ್ಮಗಾಂಧಿ ಶತಾಬ್ಧಿ ಹಿ. ಪ್ರಾ. ಶಾಲೆ/ ಸಂಯುಕ್ತ ಪದವಿ ಪೂರ್ವ ಕಾಲೇಜಿನ ವಿವಿಧ ಕೊಠಡಿಗಳಲ್ಲಿ ಮತ ಎಣಿಕೆ ಆರಂಭಗೊಳ್ಳಲಿದೆ. ಹಂತ ಹಂತವಾಗಿಯೇ ಮತ ಎಣಿಕೆ ಪ್ರಕ್ರಿಯೆ ನಡೆಯಲಿದ್ದು, ಮಧ್ಯಾಹ್ನ 2 ಗಂಟೆಯೊಳಗೆ ಸಂಪೂರ್ಣ ಫಲಿತಾಂಶ ಪ್ರಕಟವಾಗುವ ನಿರೀಕ್ಷೆ ಇದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ವಾಹನ ಸಂಚಾರದಲ್ಲಿ ಬದಲಾವಣೆ:

ಬೊಂದೇಲ್ ಎಂಜಿಸಿ ಶಿಕ್ಷಣ ಸಂಸ್ಥೆಯಲ್ಲಿ ನಡೆಯಲಿರುವ ಮತ ಎಣಿಕೆ ಹಿನ್ನೆಲೆಯಲ್ಲಿ ವಾಹನ ಸಂಚಾರದಲ್ಲಿ ಕೆಲವೊಂದು ಬದಲಾವಣೆ ಮಾಡಿರುವುದಾಗಿ ಮಂಗಳೂರು ಪೊಲೀಸ್ ಆಯುಕ್ತ ವಿಪುಲ್ ಕುಮಾರ್ ತಿಳಿಸಿದ್ದಾರೆ.

ಬೊಂದೇಲ್ ಜಂಕ್ಷನ್‌ನಿಂದ ಈಶ್ವರಕಟ್ಟೆ ಜಂಕ್ಷನ್‌ವರೆಗೆ ರಸ್ತೆಯ ಎರಡೂ ಬದಿಗಳಲ್ಲಿ ವಾಹನಗಳ ಸಂಚಾರ ಮತ್ತು ನಿಲುಗಡೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ನಗರದಲ್ಲಿ ಎರಡು ಆರ್‌ಎಎಫ್ ತುಕಡಿ, 6 ಕೆಎಸ್‌ಆರ್‌ಪಿ, 6 ಸಿಎಆರ್ ಮತ್ತು 100 ಮೊಬೈಲ್ ಗಸ್ತು ವಾಹನಗಳನ್ನು ನಿಯೋಜಿಸಲಾಗಿದೆ ಎಂದು ಅವರು ಹೇಳಿದ್ದಾರೆ.

Comments are closed.