Uncategorized

ಜಾನುವಾರುಗಳೊಂದಿಗೆ ಸಿಎಂ ನಿವಾಸಕ್ಕೆ ಪ್ರತಿಭಟನೆ

Pinterest LinkedIn Tumblr

ಕೃಷ್ಣರಾಜಪುರ: ತಲೆ ತಲಾಂತರಗಳಿಂದ ವಾಸವಿರುವ ಪ್ರದೇಶವನ್ನು ರಾಜ್ಯ ಸರಕಾರ ಅರಣ್ಯ ಭೂಮಿಯೆಂದು ಘೋಷಿಸಿ ನಮ್ಮನ್ನು ಒಕ್ಕಲೆಬ್ಬಿಸುತ್ತಿದೆ. ಕೂಡಲೇ ಹಕ್ಕು ಪತ್ರಗಳನ್ನು ನೀಡಬೇಕೆಂದು ಆಗ್ರಹಿಸಿ ಕಾಡುಗೋಡಿಯ ದಿನ್ನೂರಿನ ನೂರಾರು ರೈತರು ದನಕರುಗಳೊಂದಿಗೆ ಕುಟುಂಬ ಸಮೇತ ಮುಖ್ಯಮಂತ್ರಿಗಳ ನಿವಾಸಕ್ಕೆ ಜಾಥಾ ನಡೆಸಿ ಪ್ರತಿಭಟಿಸಲು ಮುಂದಾಗಿದ್ದಾರೆ.

ದಿನ್ನೂರು ಗ್ರಾಮದಲ್ಲಿ ದಶಕಗಳಿಂದ ಉಳುಮೆ ಮಾಡಿ ಜೀವನ ಸಾಗಿಸುತ್ತಿರುವ ನೂರಾರು ಕುಟುಂಬಗಳಿಗೆ 1950ರಲ್ಲಿ ಮೈಸೂರು ಮಹಾರಾಜರು ಕಂದಾಯ ಇಲಾಖೆಯಿಂದ ಕೃಷಿಗೆ 175 ಎಕರೆ ಮತ್ತು ವಾಸಕ್ಕೆ 34 ಎಕರೆ ಜಮೀನು ಹಂಚಿಕೆ ಮಾಡಿದ್ದು, ಸಾವಿರಾರು ಕುಟುಂಬಗಳು ಜೀವನ ಸಾಗಿಸುತ್ತಿವೆ. ಕಂಪ್ಯೂಟರ್‌ ಪಹಣಿ ಹೊರತು ಪಡಿಸಿ ಎಲ್ಲಾ ಸೂಕ್ತ ದಾಖಲಾತಿ ಇದ್ದರೂ ರಾಜ್ಯ ಸರಕಾರ 2016 ರಲ್ಲಿ ಸಾವಿರಾರು ಮನೆಗಳ ಜಾಗ ಮತ್ತು ಕೃಷಿ ಭೂಮಿಯನ್ನು ತೆರವುಗೊಳಿಸಿ ನಮ್ಮ ಮೇಲೆ ಗದಾಪ್ರಹಾರ ನಡೆಸಿತ್ತು. ಈ ಕ್ರಮವನ್ನು ವಿರೋಧಿಸಿ ಪ್ರೀಡಂ ಪಾರ್ಕ್‌ ನವರೆಗೂ ಪಾದಯಾತ್ರೆ ಕೈಗೊಂಡಿದ್ದೆವು. ಸರಕಾರ ಸಚಿವ ಸಂಪುಟ ಸಭೆಯಲ್ಲಿ ಹಕ್ಕುಪತ್ರ ವಿತರಿಸುವುದಾಗಿ ಭರವಸೆ ನೀಡಿ ಎರಡು ವರ್ಷ ಕಳೆದರೂ ಹಕ್ಕುಪತ್ರ ನೀಡುವಲ್ಲಿ ಕಾಲಹರಣ ಮಾಡುತ್ತಿದೆ. ಹೀಗಾಗಿ ಸಿಎಂ ಮನೆ ಮುಂದೆ ಧರಣಿ ನಡೆಸಲು ಮುಂದಾಗಿದ್ದೇವೆ ಎಂದು ಹೇಳಿದರು.

ಶಾಶ್ವತ ನೆಲೆಗೆ ಪಾಲಿಕೆ ಸದಸ್ಯ ಎಸ್‌.ಮುನಿಸ್ವಾಮಿ ನೇತೃತ್ವದಲ್ಲಿ ಮುಖ್ಯಮಂತ್ರಿ ನಿವಾಸಕ್ಕೆ ಪಾದಯಾತ್ರೆ ನಡೆಸುತ್ತಿದ್ದ ರೈತರನ್ನು ಮಹದೇವಪುರ ಪೊಲೀಸರು ಗರುಡಾಚಾರಪಾಳ್ಯ ಬಳಿ ತಡೆದು ವಶಕ್ಕೆ ಪಡೆದು ಪಾದಯಾತ್ರೆಗೆ ತಡೆಯೊಡ್ಡಿದ್ದರು. ಈ ವೇಳೆ ರೈತರು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ಸಹ ನಡೆದಿದೆ. ಪಾಲಿಕೆ ಸದಸ್ಯ ಹಾಗೂ ರೈತರುನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ರೈತರನ್ನು ಪೊಲೀಸರು ವಶಕ್ಕೆ ಪಡೆದ ಕ್ರಮವನ್ನು ಖಂಡಿಸಿ ದಿನ್ನೂರು ಗ್ರಾಮಸ್ಥರು ಅಂಬೇಡ್ಕರ್‌ ಪ್ರತಿಮೆ ಬಳಿ ಅಮರಣಾಂತ ಉಪವಾಸ ಸತ್ಯಗ್ರಹ ಕೈಗೊಂಡಿದ್ದಾರೆ.

Comments are closed.