Uncategorized

ಮುಂಗಾರು ಕೃಷಿಗೆ ಸರ್ಕಾರ ಈಗಲೇ ಸಿದ್ದತೆ

Pinterest LinkedIn Tumblr

rainಬೆಂಗಳೂರು: ರಾಜ್ಯವನ್ನು ಕಾಡುತ್ತಿರುವ ತೀವ್ರ ಬರಗಾಲದ ನಡುವೆಯೇ ಮುಂಗಾರು ಹಂಗಾಮಿನ ಕೃಷಿ ಚಟುವಟಿಕೆಗಳಿಗಾಗಿ ಕೃಷಿ ಇಲಾಖೆ ಸಿದಟಛಿತೆ ನಡೆಸಿದ್ದು, ಅಗತ್ಯ ಬಿತ್ತನೆ ಬೀಜ ಮತ್ತು ರಸಗೊಬ್ಬರ ಪೂರೈಕೆಗೆ ಕ್ರಮ
ಆರಂಭಿಸಿದೆ.

ಈ ಬಾರಿ ಮುಂಗಾರು ಉತ್ತಮವಾಗಿರಲಿದೆ ಎಂಬ ಹವಾಮಾನ ಇಲಾಖೆ ವರದಿ ಆಧರಿಸಿ ಕೃಷಿ ಚಟುವಟಿಕೆಗಳಿಗೆ ಪೂರಕವಾಗಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಕೃಷಿ ಸಚಿವ ಸಿ.ಬಿ. ಕೃಷ್ಣ ಬೈರೇಗೌಡ ಅವರು ಇಲಾಖೆ ಅಧಿಕಾರಿಗಳೊಂದಿಗೆ ಶನಿವಾರ ಸಭೆ ನಡೆಸಿದ್ದು, ಅಗತ್ಯ ಬಿತ್ತನೆ ಬೀಜ ಮತ್ತು ರಸಗೊಬ್ಬರ ಪೂರೈಸುವಂತೆ ಸೂಚನೆ
ನೀಡಿದ್ದಾರೆ. ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಮುಂಗಾರು ಹಂಗಾಮಿನಲ್ಲಿ ರಾಜ್ಯಕ್ಕೆ 21.75
ಲಕ್ಷ ಟನ್‌ ರಸಗೊಬ್ಬರ ಪೂರೈಕೆಯಾಗಲಿದೆ. ಈಗಾಗಲೇ 2.47 ಲಕ್ಷ ಟನ್‌ ಕಾಪು ದಾಸ್ತಾನು ಇದ್ದು, ಮಾರುಕಟ್ಟೆಯಲ್ಲಿ
8 ಲಕ್ಷ ಟನ್‌ ರಸಗೊಬ್ಬರ ಲಭ್ಯವಿದೆ. ಆಯಾ ತಿಂಗಳಿಗೆ ಬೇಕಾದ ರಸಗೊಬ್ಬರ ರೈತರಿಗೆ ಸಿಗುವಂತೆ ನೋಡಿಕೊಳ್ಳಲು
ಎಲ್ಲಾ ಕ್ರಮ ಕೈಗೊಳ್ಳಲಾಗಿದೆ ಎಂದರು.

ಇದೇ ರೀತಿ 2015ರ ಮುಂಗಾರು ಹಂಗಾಮಿನಲ್ಲಿ ಸರ್ಕಾರ ರೈತರಿಗೆ 4.29 ಲಕ್ಷ ಕ್ವಿಂಟಲ್‌ ಬಿತ್ತನೆ ಬೀಜ ಪೂರೈಸಿತ್ತು. ಈ ವರ್ಷ ಉತ್ತಮ ಮಳೆಯಾಗುವ ಮುನ್ಸೂಚನೆ ಇರುವುದರಿಂದ 6.45 ಲಕ್ಷ ಕ್ವಿಂಟಲ್‌ ಬಿತ್ತನೆ ಬೀಜ ಪೂರೈಸಲಾಗುವುದು. ಈ ನಿಟ್ಟಿನಲ್ಲಿ ಖಾಸಗಿ ಕಂಪನಿಗಳಿಂದ ಬಿತ್ತನೆ ಬೀಜ ಖರೀದಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಹೇಳಿದರು.

ಆದರೆ, ಬಿತ್ತನೆ ಬೀಜ ಪೂರೈಕೆ ಕಂಪನಿಗಳು ಹೆಚ್ಚು ದರ ಕೇಳುತ್ತಿವೆ. ಈ ಹಿನ್ನೆಲೆಯಲ್ಲಿ ದರ ಕಡಿಮೆ ಮಾಡುವ ಕುರಿತು
ಮಾತುಕತೆ ನಡೆಯುತ್ತಿದ್ದು, ಕೆಲವು ಬಿತ್ತನೆ ಬೀಜಗಳ ದರ ಕಡಿಮೆ ಮಾಡಲಾಗಿದೆ. ಸರ್ಕಾರ ನಿರೀಕ್ಷಿಸಿದ ಮಟ್ಟದಲ್ಲಿ ದರ
ಕಡಿಮೆ ಮಾಡದೇ ಇದ್ದಲ್ಲಿ ಪಾರದರ್ಶಕ ಕಾಯ್ದೆಯಿಂದ ವಿನಾಯಿತಿ ಪಡೆದು ಸೀಡ್‌ ಕಾರ್ಪೋರೇಷನ್‌ ಮೂಲಕ
ಬಿತ್ತನೆ ಬೀಜ ಖರೀದಿಸಿ ರೈತರಿಗೆ ವಿತರಿಸಲಾಗುವುದು ಎಂದರು. ಪ್ರಸ್ತುತ ಬಿತ್ತನೆ ಬೀಜಗಳಿಗೆ ನೀಡುವ ರಿಯಾಯಿತಿ ಬಗ್ಗೆ ಕೇಂದ್ರ ಸರ್ಕಾರದ ರಾಷ್ಟ್ರೀಯ ಆಹಾರ ಭದ್ರತಾ ಮಿಷನ್‌ ಒಂದು ದರ ಪಟ್ಟಿ ಪ್ರಕಟಿಸಿದ್ದು, ಸದ್ಯಕ್ಕೆ ಅದನ್ನೇ ಅನುಸರಿಸಲು ತೀರ್ಮಾನಿಸಲಾಗಿದೆ. ಒಂದು ವೇಳೆ ನಿರೀಕ್ಷಿಸಿರುವುದಕ್ಕಿಂತ ಕಡಿಮೆ ದರಕ್ಕೆ ಬಿತ್ತನೆ ಬೀಜ
ಲಭ್ಯವಾದಲ್ಲಿ ರಿಯಾಯಿತಿ ಹೆಚ್ಚಿಸುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಆಹಾರ ಉತ್ಪಾದನೆ ಕುಸಿತ: 2015-16ನೇ ಸಾಲಿನಲ್ಲಿ ರಾಜ್ಯದಲ್ಲಿ 131 ದಶಲಕ್ಷ ಟನ್‌ ಆಹಾರ ಉತ್ಪಾದನೆ ಗುರಿ
ಹೊಂದಲಾಗಿತ್ತು. ಆದರೆ, ಬರ ಪರಿಸ್ಥಿತಿಯಿಂದಾಗಿ 110 ದಶಲಕ್ಷ ಟನ್‌ನಷ್ಟು ಮಾತ್ರ ಆಹಾರ ಉತ್ಪಾದನೆಯಾಗಿದೆ.
ಅದರಲ್ಲೂ ದ್ವಿದಳ ಧಾನ್ಯಗಳಾದ ತೊಗರಿ, ಕಡಲೆ, ಹೆಸರು, ಉದ್ದು ಉತ್ಪಾದನೆಯಲ್ಲಿ ಕುಂಠಿತವಾಗಿದ್ದು, ಬೆಲೆ
ಏರಿಕೆಯಾಗದಂತೆ ನೋಡಿಕೊಳ್ಳಲು ಹೆಚ್ಚಿನ ದ್ವಿದಳ ಧಾನ್ಯ ಆಮದು ಮಾಡಿಕೊಂಡು ಒದಗಿಸುವಂತೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಸಚಿವರು ಹೇಳಿದರು.
-ಉದಯವಾಣಿ

Write A Comment