Uncategorized

ಸುರತ್ಕಲ್‌ : ಮುಖ್ಯಮಂತ್ರಿಗಳಿಗೆ ಕಪ್ಪು ಬಾವುಟ ಪ್ರದರ್ಶಿಸಲು ಯತ್ನಿಸಿದ 40ಕ್ಕೂ ಹೆಚ್ಚು ಮಂದಿಯ ಬಂಧನ

Pinterest LinkedIn Tumblr

Suratkal_Protest_arest

ಸುರತ್ಕಲ್, ಎ.22: ಎತ್ತಿನಹೊಳೆ ಯೋಜನೆ ಜಾರಿಗೊಳಿಸುವ ರಾಜ್ಯ ಸರಕಾರದ ಕ್ರಮ ಖಂಡಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಗಳೂರಿಗೆ ಆಗಮಿಸುವ ವೇಳೆ ಕಪ್ಪುಬಾವುಟ ಪ್ರದರ್ಶಿಸಿ ಪ್ರತಿಭಟನೆಗೆ ಯತ್ನಿಸಿದ ನೇತ್ರಾವತಿ ರಕ್ಷಣಾ ಸಮಿತಿಯ 40ಕ್ಕೂ ಹೆಚ್ಚು ಮಂದಿಯನ್ನು ಪೊಲೀಸರು ಬಂಧಿಸಿದ ಘಟನೆ ಸುರತ್ಕಲ್‌ನಲ್ಲಿ ಗುರುವಾರ ಸಂಜೆ ನಡೆದಿದೆ.

ನೇತ್ರಾವತಿ ಪರ ಹೋರಾಟಗಾರರು ಮೊದಲಿಗೆ ಮುಖ್ಯಮಂತ್ರಿ ಸುರತ್ಕಲ್‌ನಿಂದ ಮೆರವಣಿಗೆ ಮೂಲಕ ಹೋಗುವಾಗ ಕಪ್ಪು ಬಾವುಟ ಪ್ರದರ್ಶನಕ್ಕೆ ಚಿಂತಿಸಿದ್ದರು. ಇದನ್ನು ಅರಿತ ಪೊಲೀಸರು ಕೆಲವರನ್ನು ಬಂಧಿಸಿದರು.

ಬಳಿಕ ಸುರತ್ಕಲ್‌ನ ಜೀವನ್ ತಾರಾ ಸಮುಚ್ಚಯದಲ್ಲಿ ಸೇರಿದ್ದ ನೇತ್ರಾವತಿ ಪರ ಹೋರಾಟಗಾರರು ಮುಖ್ಯಮಂತ್ರಿ ತಲುಪುತ್ತಿದ್ದಂತೆ ಪ್ರತಿಭಟನೆಗೆ ಮುಂದಾದರು. ಅದರಂತೆ ಮುಖ್ಯಮಂತ್ರಿ ಮೆರವಣಿಗೆ ಹೋಗುವಾಗ ಕಟ್ಟಡದ ಬಳಿ ನಿಂತು ಕಪ್ಪು ಬಾವುಟ ಹಿಡಿದು ಘೋಷಣೆ ಕೂಗಿದರು. ಇದನ್ನು ಗಮನಿಸಿದ ಪೊಲೀಸರು ತತ್‌ಕ್ಷಣ ಸಮಿತಿ ಸಂಚಾಲಕ ಸತ್ಯಜಿತ್‌ ಸುರತ್ಕಲ್‌ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲು ಯತ್ನಿಸಿದವರನ್ನು ಬಂಧಿಸಿ ಅನಂತರ ಸುರತ್ಕಲ್‌ ಠಾಣೆಗೆ ಕರೆದುಕೊಂಡು ಹೋದರು.

ಈ ಸಂದರ್ಭ ಸತ್ಯಜಿತ್‌ ಸುರತ್ಕಲ್‌ ಅವರು ಮಾತನಾಡಿ, ಕರಾವಳಿ ಭಾಗಕ್ಕೆ ಅಪಾಯ ಸೃಷ್ಟಿಸಲಿರುವ ಎತ್ತಿನಹೊಳೆ ಯೋಜನೆ ವಿರುದ್ಧ ಈ ಭಾಗದಲ್ಲಿ ನಿರಂತರ ಹೋರಾಟ ನಡೆಸಲಾಗಿದೆ. ಆದರೆ ರಾಜ್ಯ ಸರಕಾರ ಕರಾವಳಿ ಭಾಗದ ಯಾವುದೇ ಕೂಗಿಗೆ ಬೆಲೆ ನೀಡಿಲ್ಲ. ಹೀಗಾಗಿ ಯೋಜನೆ ಪರ ಮಾತನಾಡುವ ಎಲ್ಲ ಜನಪ್ರತಿನಿಧಿಗಳ ವಿರುದ್ಧ ಹೋರಾಟ ಮಾಡಲು ಸಮಿತಿ ರಚಿಸಲಾಗಿದೆ ಎಂದರು.

ನೇತ್ರಾವತಿ ಯೋಜನೆಯನ್ನು ಜಾರಿಗೊಳಿಸುವಾಗ ಜಿಲ್ಲೆಯ ಜನರ ಅಭಿಪ್ರಾಯ ಕೇಳದೇ ಸರಕಾರ ಏಕಾಏಕಿ ನಿರ್ಣಯ ಕೈಗೊಂಡಿರುವುದು ಬಹಳ ಬೇಸರದ ಸಂಗತಿ. ಈ ಯೋಜನೆಯನ್ನು ವಿರೋಧಿಸಿ ಇಷ್ಟು ಹೋರಾಟ ಮಾಡಿದರೂ ಸರಕಾರ ಎಚ್ಚೆತ್ತು ಕೊಳ್ಳದೆ ಯೋಜನೆಯನ್ನು ಮಾಡಿಯೇ ತೀರುತ್ತೇನೆ ಎಂಬ ಹಠ ಸಾಧಿಸುತ್ತಿರುವುದು ಅನುಮಾನಕ್ಕೆ ಎಡೆಮಾಡಿಕೊಡುತ್ತದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಗೆ ಭೇಟಿ ನೀಡುವ ಮುಖ್ಯಮಂತ್ರಿ ಅವರಿಗೆ ಕಪ್ಪು ಬಾವುಣ ಪ್ರದರ್ಶನ ಮಾಡಿ ಯೋಜನೆಯಿಂದಾಗುವ ತೊಂದರೆಗಳ ಬಗ್ಗೆ ಅರಿವು ಮೂಡಿಸಿ ಯೋಜನೆ ಜಾರಿ ಮಾಡದಂತೆ ಆಗ್ರಹಿಸಿ ಇಲ್ಲಿನ ಜನರ ಆಕ್ರೋಶದ ಬಿಸಿ ಮುಟ್ಟಿಸುವ ಸಲುವಾಗಿ ಈ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದೆವು ಎಂದು ಸತ್ಯಜಿತ್‌ ಸುರತ್ಕಲ್‌ ಹೇಳಿದರು.

ಎತ್ತಿನಹೊಳೆ ಯೋಜನೆಯನ್ನು ವಿರೋಧಿಸಿ ಜಿಲ್ಲೆಯಲ್ಲಿ ಸಾಕಷ್ಟು ಹೋರಾಟ, ರಸ್ತೆ ತಡೆ, ಪ್ರತಿಭಟನೆ ಮಾಡಲಾಗಿದ್ದರೂ ಯಾವುದೂ ಕೂಡಾ ಅಷ್ಟಾಗಿ ಪರಿಣಾಮ ಬೀರಿಲ್ಲ. ಜನಪ್ರತಿನಿಧಿಗಳಿಗೆ ಇದೊಂದು ನಾಟಕವಾಡುವ ವೇದಿಕೆಯಾದಂತೆ ಆಗಿದೆ. ಈ ನಿಟ್ಟಿನಲ್ಲಿ ಯೋಜನೆಯನ್ನು ವಿರೋಧಿಸಿ ಪ್ರತಿಭಟನೆ ನಡೆಸಿದ ಎಲ್ಲ ಸಂಘಟನೆಗಳ ನಾಯಕರನ್ನು ಒಂದೇ ವೇದಿಕೆಯಲ್ಲಿ ಒಟ್ಟು ಗೂಡಿಸಿಕೊಂಡು ನೇತ್ರಾವತಿ ರಕ್ಷಣಾ ಸಂಯುಕ್ತ ಸಮಿತಿಯನ್ನು ರಚನೆ ಮಾಡಲಾಗಿದೆ. ಇನ್ನು ಮುಂದೆ ಯೋಜನೆಯನ್ನು ವಿರೋಧಿಸಿ ಎಲ್ಲ ಪ್ರತಿಭಟನೆಗಳು ಜಂಟಿಯಾಗಿ ಒಂದೇ ವೇದಿಕೆಯಲ್ಲಿ ಕಾರ್ಯಾಚರಣೆ ಮಾಡಲಿದೆ. ಇನ್ಮುಂದೆ ದ.ಕ. ಜಿಲ್ಲೆಗೆ ಆಗಮಿಸುವ ಕೇಂದ್ರ ಸಚಿವ ಸದಾನಂದ ಗೌಡ ಮತ್ತು ಸಂಸದ ವೀರಪ್ಪ ಮೊಯ್ಲಿಗೆ ಸಮಿತಿಯು ಕರಿಪತಾಕೆ ಹಿಡಿದು ಪ್ರತಿಭಟನೆ ನಡೆಸಲಿದೆ. ಅಲ್ಲದೆ ಇನ್ನು 15 ದಿನದಲ್ಲಿ ಜಿಲ್ಲೆಯಲ್ಲಿ ಹಂತ ಹಂತವಾಗಿ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿದೆ ಎಂದು ಸತ್ಯಜಿತ್‌ ಸುರತ್ಕಲ್‌ ತಿಳಿಸಿದರು.

ಪ್ರತಿಭಟನೆ ಬಗ್ಗೆ ಮೊದಲೇ ಮಾಹಿತಿ :

ಎತ್ತಿನಹೊಳೆ ತಿರುವು ಯೋಜನೆಯನ್ನು ವಿರೋಧಿಸಿ ಜಿಲ್ಲೆಗೆ ಎ.21 ರಂದು ಭೇಟಿ ನೀಡಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಕೈ ಮತ್ತು ಬಾಯಿಗೆ ಕಪ್ಪು ಬಟ್ಟೆ ಕಟ್ಟಿ ಹಾಗೂ ಕೈಯಲ್ಲಿ ಖಾಲಿ ಕೊಡವನ್ನು ಹಿಡಿದು ಪ್ರತಿಭಟನೆ ನಡೆಸಲಾಗುವುದು ಎಂದು ನೇತ್ರಾವತಿ ರಕ್ಷಣಾ ಸಂಯುಕ್ತ ಸಮಿತಿ ಸಂಚಾಲಕ ಸತ್ಯಜಿತ್ ಸುರತ್ಕಲ್ ಅವರು ಪತ್ರಿಕಾಗೋಷ್ಠಿ ಮೂಲಕ ಮೊದಲೇ ಮಾಹಿತಿ ನೀಡಿದ್ದರು.

Write A Comment