Uncategorized

ನಿಜವಾಯಿತು ಐನ್‌ಸ್ಟೀನ್ ಭವಿಷ್ಯ ನುಡಿ; ಪತ್ತೆಯಾಯಿತು ಗುರುತ್ವಾಕರ್ಷಣ ಅಲೆ

Pinterest LinkedIn Tumblr

gravity-wavesಭೂಮಿಯ ಮೇಲೆ ಹಾರುವ ವಸ್ತುಗಳನ್ನು ತನ್ನತ್ತ ಸೆಳೆಯುವ ಶಕ್ತಿ ಭೂಮಿಗಿದೆ. ಭೂಮಿಯ ಈ ಶಕ್ತಿಯನ್ನೇ ಗುರುತ್ವಾಕರ್ಷಣ ಬಲ ಎಂದು ಸರ್ ಐಸಾಕ್ ನ್ಯೂಟನ್ ಹೇಳಿದ್ದರು. ಈ ಎಲ್ಲ ವಸ್ತುಗಳು ಒಂದನ್ನೊಂದು ಆಕರ್ಷಿಸಲು ಕಾರಣವೇ ಈ ಬಲ. ನ್ಯೂಟನ್‌ನ ಗುರುತ್ವ ನಿಯಮದ ಪ್ರಕಾರ ಸ್ಥಿರ ಪ್ರಮಾಣದಲ್ಲಿ ಸಮಯಕ್ಕನುಗುಣವಾಗಿ ಹೆಚ್ಚುವ ವೇಗವೇ ಗುರುತ್ವ ವೇಗೋತ್ಕರ್ಷ. ಕಾಯವೊಂದಕ್ಕೆ ಕೊಡಲಾದ ವೇಗೋತ್ಕರ್ಷವು ಅದರ ಮೇಲೆ ಪ್ರಯೋಗಿಸಿದ ಬಲಕ್ಕೆ ನೇರ ಅನುಪಾತದಲ್ಲಿ ಆ ಬಲದ ದಿಕ್ಕಿನಲ್ಲೇ ಇರುತ್ತದೆ ಮತ್ತು ಕಾಯದ ದ್ರವ್ಯರಾಶಿಗೆ ವಿಲೋಮ ಅನುಪಾತದಲ್ಲಿಯೂ ಇರುತ್ತದೆ.

ಗುರುತ್ವಾಕರ್ಷಣ ಅಲೆಗಳ ಬಗ್ಗೆ ಐನ್‌ಸ್ಟೀನ್‌ ಹೇಳಿದ್ದು…
ಗುರುತ್ವದ ತರಂಗಗಳು ಜಗತ್ತಿನೆಲ್ಲೆಡೆ ವ್ಯಾಪಿಸಿದ್ದು ಇವುಗಳು ತರಂಗಗಳಾಗಿ ಶಕ್ತಿಯನ್ನು ಕೊಂಡೊಯ್ಯುತ್ತವೆ. 1916ರಲ್ಲಿ ಆಲ್ಬರ್ಟ್ ಐನ್‌ಸ್ಟೀನ್ ಇಂಥಾ ತರಂಗಗಳು ಇವೆ ಎಂದು ಸಾಮಾನ್ಯ ಸಾಪೇಕ್ಷ (Theory of Relativity) ಸಿದ್ಧಾಂತದಲ್ಲಿ ತರ್ಕಿಸಿದ್ದರು.

ಸಾಮಾನ್ಯ ಸಾಪೇಕ್ಷತಾ ಸಿದ್ಧಾಂತ
ಗುರುತ್ವ ಶಕ್ತಿಯನ್ನು ಐನ್‌ಸ್ಟೀನ್ ಗಣಿತದ ವಿಧಾನ ಮುಖೇನ ವಿವರಿಸಿ ಅದನ್ನೇ ಸಾಮಾನ್ಯ ಸಾಪೇಕ್ಷ ಸಿದ್ಧಾಂತ ಎಂದು ಕರೆದಿದ್ದರು. ಅದರಲ್ಲಿ ಸ್ಥಳ ಮತ್ತು ಕಾಲ ಎಂಬ ಪರಿಕಲ್ಪನೆಗಳು ಮುಖ್ಯವಾಗಿವೆ. ಪದಾರ್ಥವೊಂದರಲ್ಲಿ ದ್ರವ್ಯ ಮತ್ತು ಶಕ್ತಿ ಇರುತ್ತದೆ, ಇಲ್ಲಿ ದ್ರವ್ಯ ಮತ್ತು ಶಕ್ತಿ ಸ್ಥಳ -ಕಾಲಗಳ ನಿರಂತತೆಯನ್ನು ವಕ್ರಗೊಳಿಸುತ್ತದೆ. ಗುರುತ್ವ ತರಂಗಗಳು ಸ್ಥಳ ಕಾಲಗಳ ನಿರಂತತೆಯಲ್ಲಿ ಅತೀ ಸಣ್ಣ ಅಲೆಗಳಾಗಿವೆ. ಗುರುತ್ವ ಬಲವು ಕಾಲದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಸಾಪೇಕ್ಷ ಸಿದ್ಧಾಂತ ತಿಳಿಸುತ್ತದೆ.

ಗುರುತ್ವಾಕರ್ಷಣ ತರಂಗಗಳು ಪತ್ತೆ
ಸಾಪೇಕ್ಷ ಸಿದ್ಧಾಂತದಲ್ಲಿ ಐನ್‌ಸ್ಟೀನ್ ಭವಿಷ್ಯ ನುಡಿದಿದ್ದ ಸಂಗತಿ ಈಗ ನಿಜವಾಗಿದೆ. ಶತಮಾನಗಳ ಹಿಂದೆ ಐನ್‌ಸ್ಟೀನ್ ಹೇಳಿದ್ದ ಗುರುತ್ವಾಕರ್ಷಣ ಅಲೆಗಳನ್ನು ಮೊದಲ ಬಾರಿಗೆ ಸ್ಪಷ್ಟವಾಗಿ ನೋಡಿದ್ದೇವೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

1.3 ನೂರು ಕೋಟಿಯಷ್ಟು ವರ್ಷಗಳ ಹಿಂದೆ ಎರಡು ಬೃಹತ್ ಕಪ್ಪು ರಂಧ್ರಗಳು ಡಿಕ್ಕಿ ಹೊಡೆದಾಗ ಹೊರ ಸೂಸಿದ ಅಲೆಯೊಂದು ವೇಗವಾಗಿ ಚಲಿಸುತ್ತಾ ಸೆ. 14, 2015 ರಂದು ಭೂಮಿಯನ್ನು ತಲುಪಿದೆ ಎಂಬುದನ್ನು ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ.

ಗುರುತಾಕರ್ಷಣ ತರಂಗಗಳು ವ್ಯೋಮದಲ್ಲಿ ನಡೆದ ಬೃಹತ್ ಕಾಯಗಳ ಘರ್ಷಣೆಯ ಅಳತೆಗೋಲು ಆಗಿದೆ. ಇವುಗಳನ್ನು ಗುರುತಿಸುವ ಸಲುವಾಗಿ ಲೇಸರ್ ಇಂಟರ್ ಫೆರೋಮೀಟರ್ ಗ್ರಾವಿಟೇಶನಲ್ ವೇವ್ ಅಬ್ಸರ್ವೇಟರಿ (ಲಿಗೋ) ಎಂಬ ಪ್ರಾಜೆಕ್ಟನ್ನು ವಿಜ್ಞಾನಿಗಳು ಕೈಗೊಂಡಿದ್ದರು.

ಗುರುತ್ವ ತರಂಗಗಳನ್ನು ಪತ್ತೆ ಮಾಡುವ ಸಾಧನ ಲಿಗೋ ಡಿಟೆಕ್ಟರ್ ನಲ್ಲಿ ಈ ಅಪರೂಪದ ವಿದ್ಯಮಾನ ದಾಖಲಾಗಿದೆ. 1.3 ನೂರು ಕೋಟಿ ವರ್ಷಗಳ  ಹಿಂದೆ ಎರಡು ಬೃಹತ್ ಕಪ್ಪು ರಂಧ್ರಗಳು ಡಿಕ್ಕಿಯಿಂದ ಹೊರ ಹೊಮ್ಮಿದವು ಎಂಬುದಕ್ಕೆ ಈ ಮೂಲಕ ಸಾಕ್ಷ್ಯ ಲಭಿಸಿದೆ.

ಈ ಹೊಸ ಮಾಹಿತಿಯು ತಾರಾಪುಂಜಗಳ ಹುಟ್ಟಿನ ಕುರಿತು ಹಾಗೂ ಬ್ರಹ್ಮಾಂಡದ ಬಹು ದೊಡ್ಡ ಕಾಯಗಳ ಬಗ್ಗೆ ವಿವರಣೆ ನೀಡಲು ಸಹಾಯಕವಾಗಿದೆ. 2016ರಲ್ಲಿ ನಾವು ಕಂಡುಕೊಂಡ ಅಲೆಗಳ ರೂಪ 1916ರ ಐನ್‌ಸ್ಟೀನ್ ಸಿದ್ಧಾಂತದಲ್ಲಿ ಪ್ರಸ್ತಾಪಿಸಲಾದ ಅಂಶಕ್ಕೆ ಸಾದೃಶವಾಗಿದೆ ಎಂದು ಲಿಗೋ ಪ್ರಾಜೆಕ್ಟ್ ಸಂಶೋಧನಾ ತಂಡದ ನಾಯಕ ಡೇವಿಡ್ ಶೂಮೇಕರ್ ತಿಳಿಸಿದ್ದಾರೆ.

Write A Comment