Uncategorized

ರಸ್ತೆ ಅಪಘಾತ : ಓಮ್ನಿ ಚಾಲಕ ಸ್ಥಳದಲ್ಲೇ ಸಾವು – ಲಾರಿ ಡಿಕ್ಕಿ ಶಂಕೆ..?

Pinterest LinkedIn Tumblr

puttur_acdent+photo

ಪುತ್ತೂರು, ಜ. 22: ಪುತ್ತೂರು ತಾಲ್ಲೂಕಿನ ಒಳಮೊಗ್ರು ಗ್ರಾಮದ ಪರ್ಪುಂಜ ಎಂಬಲ್ಲಿ ಮಾಣಿ-ಮೈಸೂರು ಹೆದ್ದಾರಿಯಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮಾರುತಿ ಓಮ್ನಿ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಪುತ್ತೂರು ತಾಲ್ಲೂಕಿನ ಕೆಯ್ಯೂರು ಗ್ರಾಮದ ಮಾಡಾವು ಸಂತೋಷ್ ನಗರ ನಿವಾಸಿ, ಜಿ.ಎಸ್. ಸೌಂಡ್ಸ್ ಆ್ಯಂಡ್ ಲೈಟಿಂಗ್ಸ್‍ನ ಮಾಲಕ ಉಮ್ಮರ್ (40) ಮೃತ ವ್ಯಕ್ತಿಯಾಗಿದ್ದಾರೆ.

ಸಂತೋಷ್ ನಗರದಲ್ಲಿ ಸೌಂಡ್ಸ್ ಆ್ಯಂಡ್ ಲೈಟಿಂಗ್ಸ್ ವ್ಯವಹಾರ ನಡೆಸುತ್ತಿದ್ದ ಉಮ್ಮರ್ ಅವರು ಕುರಿಯ ಗ್ರಾಮದ ಕಲ್ಲಗುಡ್ಡೆ ಎಂಬಲ್ಲಿ ನಡೆದ ಕಾರ್ಯಕ್ರಮವೊಂದಕ್ಕೆ ಲೈಟಿಂಗ್ಸ್ ವ್ಯವಸ್ಥೆ ಮಾಡಿದ್ದರು. ಕಾರ್ಯಕ್ರಮ ಮುಗಿದ ಬಳಿಕ ನಿನ್ನೆ ಬೆಳಗಿನ ಜಾವ ತನ್ನ ಓಮ್ನಿಯಲ್ಲಿ ಲೈಟಿಂಗ್ಸ್ ವ್ಯವಸ್ಥೆಯ ಸಾಮಗ್ರಿಗಳನ್ನು ತುಂಬಿಸಿಕೊಂಡು ಮಾಡಾವಿಗೆ ಮರಳುತ್ತಿದ್ದ ವೇಳೆ ಪರ್ಪುಂಜ ಎಂಬಲ್ಲಿ 3.30 ರ ಸುಮಾರಿಗೆ ಅಪಘಾತ ಸಂಭವಿಸಿದೆ.

ರಸ್ತೆ ಬದಿಯಲ್ಲಿನ ಐದು ತಡೆಕಲ್ಲುಗಳಿಗೆ ಡಿಕ್ಕಿ ಹೊಡೆದು ಮುಂದೆ ಸಾಗಿದ ಓಮ್ನಿ ರಸ್ತೆ ಪಕ್ಕದ ಅಡಿಕೆ ತೋಟದ ಬದಿಯ ಹೊಂಡಕ್ಕೆ ಬಿದ್ದಿದೆ. ಉಮ್ಮರ್ ಓಮ್ನಿಯೊಳಗೆ ಸಿಲುಕಿಕೊಂಡು ಅಲ್ಲೇ ಮೃತಪಟ್ಟಿದ್ದಾರೆ.

ಸುಮಾರು 4 ಗಂಟೆಯ ವೇಳೆಗೆ ಈ ರಸ್ತೆಯಲ್ಲಿ ಪ್ರಯಾಣಿಸುತ್ತಿದ್ದ ಯುವಕನೊಬ್ಬ ಅಪಘಾತವನ್ನು ಗಮನಿಸಿ 108 ಕ್ಕೆ ಕರೆ ಮಾಡಿ ಮಾಹಿತಿ ನೀಡಿದ್ದ. 108 ಅಂಬುಲೆನ್ಸ್ ಸ್ಥಳಕ್ಕೆ ಆಗಮಿಸುವ ಮೊದಲೇ ಉಮ್ಮರ್ ಮೃತಪಟ್ಟಿದ್ದರು.

ಲಾರಿ ಡಿಕ್ಕಿ ಹೊಡೆದಿರುವ ಶಂಕೆ..? 

ಅಫಘಾತ ನಡೆದ ಸ್ಥಳದಲ್ಲಿ ಬೈ ಹುಲ್ಲು ಕಂತೆಗಳು ಪತ್ತೆಯಾಗಿದ್ದು, ಬೈ ಹುಲ್ಲಿನ ಲಾರಿ ಓಮ್ನಿಗೆ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ರಸ್ತೆ ಭಾಗ ಕುಸಿಯದಂತೆ ರಸ್ತೆ ಪಕ್ಕದಲ್ಲಿ ಅಳವಡಿಸಲಾಗಿದ್ದ ಐದು ಕಲ್ಲಿನ ಕಂಬಗಳು ಬುಡ ಸಮೇತ ಉರುಳಿ ಬಿದ್ದಿದ್ದು, ಓಮ್ನಿ ಡಿಕ್ಕಿ ಹೊಡೆದ ರಭಸಕ್ಕೆ ಈ ರೀತಿಯಾಗಲು ಸಾಧ್ಯವೇ ಎಂಬ ಅನುಮಾನ ಕಾಡತೊಡಗಿದೆ. ಸಂಪ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೃತ ಉಮ್ಮರ್ ಅವರ ಸಹೋದರ ಲಾರಿ ಚಾಲಕರಾಗಿದ್ದ ಮಹಮ್ಮದ್ ಆಲಿ ಮೂರು ವರ್ಷಗಳ ಹಿಂದೆ ರಸ್ತೆ ಅಫಘಾತದಲ್ಲಿ ಮೃತಪಟ್ಟಿದ್ದರು. ಇದೀಗ ಉಮ್ಮರ್ ಕೂಡ ರಸ್ತೆ ಅಫಘಾತಕ್ಕೆ ಬಲಿಯಾಗಿದ್ದಾರೆ. ಈ ಎರಡೂ ಘಟನೆಗಳಿಂದಾಗಿ ಈ ಕುಟುಂಬ ಕಂಗಾಲಾಗಿದೆ. ಉಮ್ಮರ್ ಪತ್ನಿ, ಇಬ್ಬರು ಪುತ್ರಿಯರು ಹಾಗೂ ಪುತ್ರನನ್ನು ಅಗಲಿದ್ದಾರೆ.

Write A Comment