ಕುಂದಾಪುರ: ಪಾರಂಪರಿಕವಾಗಿ ನಡೆದುಕೊಂಡು ಬಂದ ಕುಂದಾಪುರದ ಹುಲಿವೇಷವನ್ನು ಪ್ರೋತ್ಸಾಹಿಸುವ ಮತ್ತು ಉತ್ತೇಜಿಸುವ ಉದ್ದೇಶದಿಂದ ಮಂಗಳವಾರ ಸಂಜೆ ಕುಂದಾಪುರದ ಬೋರ್ಡ್ ಹೈಸ್ಕೂಲ್ ವಠಾರದಲ್ಲಿ ಗ್ಯಾಸ್ ಲೈಟ್ ಬೆಳಕಿನಲ್ಲಿ ಹುಲಿವೇಷ ನೃತ್ಯ ಪ್ರದರ್ಶನ ನಡೆಯಿತು.
ಸುಮಾರು 300 ವರ್ಷದ ಹಿಂದೆ ದೇವಾಡಿಗ ಸಮುದಾಯದಿಂದ ಆರಂಭವಾದ ಈ ಹುಲಿ ಕುಣಿತವು ನೂರು ವರ್ಷದಿಂದೀಚೆಗೆ ಹುಲಿಯನ್ನು ಹೋಲುವ ಬಣ್ಣ ಮತ್ತು ಚಿತ್ರವನ್ನು ಮೈಮೇಲೆ ಬಿಡಿಸಿಕೊಂಡು ನಾದಸ್ವರ, ಶೃತಿ, ತಾಸ್ಮಾರ್, ಡೋಲು ಮತ್ತು ಗೊಂಡೆ ಈ ರೀತಿಯಾಗಿ ಹಿಮ್ಮೇಳವನ್ನು ಇಟ್ಟುಕೊಂಡು ಹುಲಿವೇಷದಾರಿಗಳು ಕುಣಿಯುವುದು ಪರಂಪರೆಯಿದೆ. ಹೀಗೆ ವಿಶಿಷ್ಟವಾಗಿರುವ ಕುಂದಾಪುರ ಹುಲಿವೇಷದ ವ್ಯಶಿಷ್ಟ್ಯತೆಯನ್ನು ಉಳಿಸಬೇಕು ಮತ್ತು ಬೆಳಸಬೇಕು ಎಂಬ ಉದ್ದೇಶದಿಂದ ಕಲಾಕ್ಷೇತ್ರ ಕುಂದಾಪುರ ಸಂಸ್ಥೆಯು ಈ ಕಾರ್ಯಕ್ರಮವನ್ನು ಏರ್ಪಡಿಸಿತ್ತು.ನಾದಸ್ವರ ವಾದಕ ಮಂಜುನಾಥ ದೇವಾಡಿಗ ಇವರ ನೇತೃತ್ವದ ಹಿಮ್ಮೇಳದ ಈ ತಂಡದಲ್ಲಿ ಲಕ್ಷ್ಮಣ, ಶೇಖರ, ಪ್ರದೀಪ, ಪ್ರಸನ್ನ ಮತ್ತು ಜಯಪ್ರಕಾಶ ಇವರುಗಳು ಹುಲಿವೇಷದಾರಿಗಳಾಗಿ ನರ್ತಿಸಿದರು.
ಸಂಗೀತ ಮತ್ತು ನೃತ್ಯ ತರಭೇತಿ ನೀಡುತ್ತಿರುವ ಕುಂದಾಪುರದ ಸಾಧನಾ ಸಂಸ್ಥೆಯು ಇದೇ ಸಂದರ್ಬ ಚಿಣ್ಣರಿಗೆ ಹುಲಿವೇಷದ ಮುಖವರ್ಣಿಕೆಯನ್ನು ಮುಖದ ಮೇಲೆ ಬಿಡಿಸಿ ಮಕ್ಕಳಲ್ಲಿಯೂ ಹುಲಿವೇಷದ ಬಗ್ಗೆ ಆಸಕ್ತಿ ಮೂಡಿಸುವ ಕೆಲಸ ಮಾಡಿದರು.
ಈ ಸಂದರ್ಭ ಕಲಾಕ್ಷೇತ್ರ ಕುಂದಾಪುರ ಇದರ ಅಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ಮೊದಲಾದವರು ಉಪಸ್ಥಿತರಿದ್ದರು.





























